

ನವದೆಹಲಿ: ಚುನಾವಣಾ ಆಯೋಗ ಮುಖ್ಯಸ್ಥರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ವಿರುದ್ಧ ಖ್ಯಾತ ಗಾಯಕ ಹಾಗೂ ನಟ ದಿಲ್ಜಿತ್ ದೋಸಾಂಜ್ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ತಮ್ಮ 'ರೂಪೇ ಔರಾ ಇಂಡಿಯಾ ಟೂರ್ 2026'ರ ಮೊದಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದಿಲ್ಜಿತ್, CJP ನಾಯಕರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.
'ಪಂಜಾಬಿಗಳಿಗೆ ಹೋರಾಟ ಕಲಿಸಬೇಡಿ. ಅದು ಅವರ ರಕ್ತದಲ್ಲೇ ಕರಗತವಾಗಿದೆ. ಪಂಜಾಬಿಗಳಿಗೆ ಹೇಗೆ ಹೋರಾಡಬೇಕು ಎಂಬುದನ್ನು ಯಾರೂ ಕಲಿಸಬೇಕಿಲ್ಲ ಎಂದು ಖಾರವಾಗಿ ಹೇಳಿದರು.
ತಮ್ಮ ಇತ್ತೀಚಿನ 'ಸಟ್ಲುಜ್' (Satluj) ಚಿತ್ರದ ಬಗ್ಗೆ ವೇದಿಕೆಯಲ್ಲಿ ವ್ಯಂಗ್ಯವಾಡಿದ ಕಾಕ್‌ರೋಚ್ ಜನತಾ ಪಾರ್ಟಿ (CJP) ವಿರುದ್ಧ ಕಿಡಿಕಾರಿದ ಅವರು, "ನಾನು ಒಬ್ಬ ಕಲಾವಿದ, ಸಹೋದರ. ಹಾಗಾಗಿ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಾನು ಸುಮ್ಮನಿದ್ದೇನೆ ಎಂದರೆ ನನ್ನನ್ನು ಸುಮ್ಮನಿರಲು ಬಿಡಿ. ನಾನು ನಿಮ್ಮೆಲ್ಲರಿಗೂ ಬೆಂಬಲ ನೀಡುತ್ತೇನೆ. ಆದರೆ ಪಂಜಾಬಿಗಳಿಗೆ ಹೇಗೆ ಹೋರಾಡಬೇಕು ಎಂಬುದನ್ನು ಮಾತ್ರ ಕಲಿಸಲು ಬರಬೇಡಿ ಎಂದು ಹೇಳಿದರು.
"ವೇದಿಕೆಯ ಮೇಲೆ ನೀವು ವ್ಯಂಗ್ಯವಾಡುತ್ತಿರುವುದು ಜಸ್ವಂತ್ ಸಿಂಗ್ ಖಾಲ್ರಾ ಅವರ ಕುರಿತಾದ ಚಿತ್ರ. ಆ ಚಿತ್ರಕ್ಕಾಗಿ ನಾವು ಬಹಳ ವರ್ಷಗಳ ಕಾಲ ಹೋರಾಡಿದ್ದೇವೆ. ನಿಮ್ಮೆಲ್ಲರನ್ನೂ ನಾನು ಪ್ರೀತಿಸುತ್ತೇನೆ. ಯಾರಾದರೂ ನಮ್ಮನ್ನು ದ್ವೇಷಿಸಿದರೂ ಪರವಾಗಿಲ್ಲ. ಆದರೆ ನಾನು ಮಾತ್ರ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ" ಎಂದು ಹೇಳಿದ್ದಾರೆ.
ಆಗಿದ್ದೇನು?
ಕೆಲವು ತಿಂಗಳ ಹಿಂದೆ ಅಭಿಮಾನಿಯೊಬ್ಬರು ಭಾರತದಲ್ಲಿ ನಡೆಯುತ್ತಿದ್ದ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಗಳ ಕುರಿತು ತಮ್ಮ ಅಭಿಪ್ರಾಯ ಕೇಳಿದ್ದರು. ಆಗ ದಿಲ್ಜಿತ್, 'ನಾನೊಬ್ಬ ಕಲಾವಿದ' ಎಂದು ಹೇಳಿದ್ದರು. ಈ ಉತ್ತರವನ್ನು ಹಲವರು ಟೀಕಿಸಿದ್ದರು.
ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡದೆ, ರಾಜಕೀಯ ಮತ್ತು ಸಾಮಾಜಿಕ ವಿಚಾರಗಳನ್ನು ಒಳಗೊಂಡ ಚಿತ್ರಗಳಲ್ಲಿ ನಟಿಸುವುದು ದ್ವಂದ್ವ ನಿಲುವು ಎಂದು ಆರೋಪಿಸಿದ್ದರು. ಕಾಕ್‌ರೋಚ್ ಜನತಾ ಪಾರ್ಟಿಯ ನಾಯಕ ಅಭಿಜಿತ್ ದಿಪ್ಕೆ ಸೇರಿದಂತೆ ಹಲವರು ದಿಲ್ಜಿತ್ ಅವರನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರದ ಕಾರ್ಯಕ್ರಮದಲ್ಲಿ ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದೆ ಪ್ರತಿಕ್ರಿಯಿಸಿದ ದಿಲ್ಜಿತ್ ಸಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
'ಸಟ್ಲುಜ್' ಚಿತ್ರ ವಿವಾದ
'ಸಟ್ಲುಜ್' ಚಿತ್ರವು ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಾಲ್ರಾ ಅವರ ಜೀವನ ಮತ್ತು ಹೋರಾಟವನ್ನು ಆಧರಿಸಿದೆ. 1980ರ ದಶಕದ ಕೊನೆ ಹಾಗೂ 1990ರ ದಶಕದ ಆರಂಭದಲ್ಲಿ ಪಂಜಾಬ್‌ನಲ್ಲಿ ನಡೆದಿದ್ದ ಎನ್ನಲಾದ ಅಕ್ರಮ ಹತ್ಯೆಗಳು ಮತ್ತು ರಹಸ್ಯ ಅಂತ್ಯಸಂಸ್ಕಾರಗಳ ವಿಚಾರವನ್ನು ಖಾಲ್ರಾ ಜಗತ್ತಿನ ಗಮನಕ್ಕೆ ತಂದಿದ್ದರು.
ಮೊದಲಿಗೆ 'ಪಂಜಾಬ್ 95' ಎಂಬ ಹೆಸರಿನಲ್ಲಿ ಸಿದ್ಧವಾಗಿದ್ದ ಈ ಚಿತ್ರವು ಸೆನ್ಸಾರ್ ಮಂಡಳಿಯ ಅನುಮತಿ ವಿಚಾರವಾಗಿ ಹಲವು ವರ್ಷಗಳ ಕಾಲ ಬಿಡುಗಡೆಗೆ ತಡೆಯನ್ನು ಎದುರಿಸಿತ್ತು. ಅಂತಿಮವಾಗಿ ಜುಲೈ 3ರಂದು ಜೀ5 (Zee5) ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿತ್ತು. ಆದರೆ ಬಿಡುಗಡೆಯಾದ ಕೇವಲ ಎರಡು ದಿನಗಳಲ್ಲೇ ಚಿತ್ರವನ್ನು ವೇದಿಕೆಯಿಂದ ತೆಗೆದುಹಾಕಲಾಗಿತ್ತು.
ಹನಿ ತ್ರೇಹಾನ್ ನಿರ್ದೇಶನದ ಈ ಚಿತ್ರ ಬಿಡುಗಡೆಯಾದ ಅಲ್ಪಾವಧಿಯಲ್ಲೇ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಚಿತ್ರವನ್ನು ತೆಗೆದುಹಾಕಿದ ಕ್ರಮಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಹೋರಾಟಗಾರರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು.
ಔರಾ ಇಂಡಿಯಾ ಟೂರ್ 2026 ಆರಂಭ
ಇನ್ನೊಂದೆಡೆ, ದಿಲ್ಜಿತ್ ದೋಸಾಂಜ್ ತಮ್ಮ 'ರೂಪೇ ಔರಾ ಇಂಡಿಯಾ ಟೂರ್ 2026' ಅನ್ನು ಶುಕ್ರವಾರ ನವದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಭರ್ಜರಿಯಾಗಿ ಆರಂಭಿಸಿದ್ದಾರೆ. ಮೊದಲ ದಿನದ ಕಾರ್ಯಕ್ರಮದ ಟಿಕೆಟ್‌ಗಳು ಸಂಪೂರ್ಣ ಮಾರಾಟವಾಗಿದ್ದವು.
ಜಾಗತಿಕ ಮಟ್ಟದಲ್ಲಿ ಯಶಸ್ಸು ಕಂಡಿರುವ ಅವರ 'ಔರಾ ಟೂರ್'ನ ಭಾರತ ಪ್ರವಾಸದ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬುಕ್‌ಮೈಶೋ ಲೈವ್ ಮತ್ತು ಲೈವ್ ನೇಷನ್ ಸಹಯೋಗದಲ್ಲಿ ಪ್ರವಾಸವನ್ನು ಆಯೋಜಿಸಲಾಗಿದ್ದು, ದೇಶದ ವಿವಿಧ ನಗರಗಳಲ್ಲಿ ದಿಲ್ಜಿತ್ ಸಂಗೀತ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.