One Nation, One Time: ಇನ್ಮುಂದೆ ಭಾರತದಲ್ಲಿ IST ಕಡ್ಡಾಯ, ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆ! ಸಾಮಾನ್ಯ ಜನರ ಮೇಲೆ ಇದರ ಪ್ರಭಾವವೇನು?

ಕೇಂದ್ರ ಸರ್ಕಾರವು ಒಂದು ದೇಶ, ಒಂದು ಸಮಯ ಉಪಕ್ರಮದ ಭಾಗವಾಗಿ ಲೀಗಲ್ ಮೆಟ್ರಾಲಜಿ (IST) ನಿಯಮಗಳು, 2026 ಅನ್ನು ಆಗಸ್ಟ್ 27, 2026 ರಂದು ಅಧಿಕೃತವಾಗಿ ಅಧಿಸೂಚಿಸಿದೆ. ಈ ನಿಯಮಗಳು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ 180 ದಿನಗಳ ನಂತರ ದೇಶಾದ್ಯಂತ ಕಡ್ಡಾಯವಾಗಿ ಜಾರಿಗೆ ಬರಲಿವೆ. ಆ ಕುರಿತ ವರದಿ ಇಲ್ಲಿದೆ:
One Nation, One Time
ಒಂದು ದೇಶ, ಒಂದು ಸಮಯAI Image
Updated on

ನವದೆಹಲಿ: ಕೇವಲ 180 ದಿನಗಳು, ಆಮೇಲೆ ಇಡೀ ದೇಶದಲ್ಲಿ ಎಲ್ಲರ ವಾಚ್ ಮತ್ತು ಮೊಬೈಲ್‌ಗಳಲ್ಲಿ ನಿಖರವಾಗಿ ಒಂದೇ ಸಮಯ ತೋರಿಸಲಿದೆ. ಯಾಕಂದ್ರೆ, ಕೇಂದ್ರ ಸರ್ಕಾರವು ಬಹುನಿರೀಕ್ಷಿತ ಒಂದು ದೇಶ, ಒಂದೇ ಸಮಯ ನಿಯಮವನ್ನು ಜಾರಿಗೆ ತರಲು ಅಂತಿಮ ಗಡುವು ವಿಧಿಸಿದ್ದು, ಈ ಮೂಲಕ ದೇಶದ ಬ್ಯಾಂಕಿಂಗ್, ರೈಲ್ವೆ, ಟೆಲಿಕಾಂ ಮತ್ತು ರಕ್ಷಣಾ ವಲಯಗಳಲ್ಲಿ ಸಮಯದ ವ್ಯತ್ಯಾಸದಿಂದ ಉಂಟಾಗುತ್ತಿದ್ದ ಗೊಂದಲಗಳಿಗೆ ಈಗ ದೊಡ್ಡ ಮಟ್ಟದ ಬ್ರೇಕ್ ಬೀಳಲಿದೆ. ಹಾಗಾದ್ರೆ, ವಿದೇಶಿ ಜಿಪಿಎಸ್ ಆಧಾರಿತ ಸಮಯದ ಬದಲು ನಮ್ಮದೇ ಸ್ವದೇಶಿ ನಾವಿಕ್ ನೆಟ್‌ವರ್ಕ್ ಮೂಲಕ ಬರಲಿರುವ ಈ ಬದಲಾವಣೆ ನಿಮ್ಮ ನಿತ್ಯಜೀವನದ ಮೇಲೆ ಹೇಗೆ ಪರಿಣಾಮ ಬೀರಲಿದೆ? ಈ ಯೋಜನೆಯ ಹಿಂದಿರುವ ಅಸಲಿ ರಹಸ್ಯವೇನು? ಇಲ್ಲಿದೆ ಆ ಕುರಿತ ಸಂಪೂರ್ಣ ಮಾಹಿತಿ.

ಏನಿದು ಒಂದು ದೇಶ, ಒಂದು ಸಮಯ?

ಒಂದು ದೇಶ, ಒಂದು ಸಮಯ (One Nation, One Time) ಎಂಬುದು ಭಾರತದಾದ್ಯಂತ ಕಾನೂನು, ವಾಣಿಜ್ಯ, ಡಿಜಿಟಲ್ ಮತ್ತು ಸಾರ್ವಜನಿಕ ಸೇವೆಗಳಿಗೆ ಏಕರೂಪದ ಅಧಿಕೃತ ಸಮಯದ ಮಾನದಂಡವಾಗಿ ಭಾರತೀಯ ಪ್ರಮಾಣಿತ ಸಮಯವನ್ನು (IST) ಕಡ್ಡಾಯಗೊಳಿಸುವ ಕೇಂದ್ರ ಸರ್ಕಾರದ ಹೊಸ ಯೋಜನೆಯಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಅಧಿಸೂಚಿಸಿರುವ ಕಾನೂನು ಮಾಪನಶಾಸ್ತ್ರ ಭಾರತೀಯ ಪ್ರಮಾಣಿತ ಸಮಯ ನಿಯಮಗಳು 2026ರ ಅಡಿಯಲ್ಲಿ ಈ ವ್ಯವಸ್ಥೆಯನ್ನು ತರಲಾಗುತ್ತಿದ್ದು, ಗೆಜೆಟ್‌ನಲ್ಲಿ ಪ್ರಕಟವಾದ 180 ದಿನಗಳ ನಂತರ ಅಂದರೆ ಮಾರ್ಚ್ 2027 ರಿಂದ ದೇಶಾದ್ಯಂತ ಕಡ್ಡಾಯವಾಗಿ ಜಾರಿಗೆ ಬರಲಿವೆ.

ಏಕರೂಪ ಸಮಯದ ಅಗತ್ಯತೆ ಏನು?

ಬ್ಯಾಂಕಿಂಗ್ ವ್ಯವಹಾರಗಳು, ಡಿಜಿಟಲ್ ಪಾವತಿಗಳು, ರೈಲ್ವೆ ಮತ್ತು ವಿಮಾನಯಾನ ಸಮನ್ವಯ, ದೂರಸಂಪರ್ಕ ಜಾಲ ಹಾಗೂ ವಿದ್ಯುತ್ ಗ್ರಿಡ್‌ಗಳ ನಿಖರ ನಿರ್ವಹಣೆಗೆ ಏಕರೂಪದ ಸಮಯ ಅಗತ್ಯವಾಗಿದೆ. ವಿಭಿನ್ನ ಸಮಯ ಮೂಲಗಳ ಬಳಕೆಯಿಂದ ಉಂಟಾಗುವ ಗೊಂದಲಗಳನ್ನು ಇದು ಸಂಪೂರ್ಣವಾಗಿ ನಿವಾರಿಸಲಿದೆ.

ವಿದೇಶಿ ಸ್ಯಾಟಲೈಟ್‌ಗಳ ಮೇಲಿನ ಅವಲಂಬನೆ ಮುಕ್ತಿ:

ಪ್ರಸ್ತುತ ಭಾರತದ ಹಲವು ಡಿಜಿಟಲ್ ಮೂಲಸೌಕರ್ಯಗಳು ಅಮೆರಿಕದ ಜಿಪಿಎಸ್ (GPS) ನಂತಹ ವಿದೇಶಿ ಸ್ಯಾಟಲೈಟ್ ಸಮಯದ ಮೇಲೆ ಅವಲಂಬಿತವಾಗಿವೆ. ಆದರೆ, ಹೊಸ ನಿಯಮದಿಂದಾಗಿ ಇನ್ಮುಂದೆ ಇಸ್ರೋ (ISRO) ಅಭಿವೃದ್ಧಿಪಡಿಸಿರುವ ಭಾರತದ್ದೇ ಆದ ನ್ಯಾವಿಕ್ (NavIC) ತಂತ್ರಜ್ಞಾನ ಆಧಾರಿತ ಸಮಯವನ್ನು ಬಳಸಲಾಗುತ್ತದೆ. ಇದು ದೇಶದ ಡಿಜಿಟಲ್ ಸಾರ್ವಭೌಮತ್ವವನ್ನು ಹೆಚ್ಚಿಸಲಿದೆ.

One Nation, One Time
ದೇಶದಲ್ಲಿ ಶೀಘ್ರ ಪ್ಲಾಸ್ಟಿಕ್ ನೋಟು? 10, 20 ರೂ ಮುಖಬೆಲೆಯ ಪಾಲಿಮರ್ ನೋಟುಗಳ ಮುದ್ರಣಕ್ಕೆ RBI ಮುಂದು; ಕಾಗದದ ನೋಟುಗಳಿಗಿಂತ ಇವು ಹೇಗೆ ಭಿನ್ನ?

ಸೈಬರ್ ದಾಳಿ ಮತ್ತು ವಂಚನೆಗೆ ಬ್ರೇಕ್!

ಡಿಜಿಟಲ್ ಬ್ಯಾಂಕಿಂಗ್, ಆನ್‌ಲೈನ್ ಹಣಕಾಸು ವಹಿವಾಟುಗಳು ಮತ್ತು ಟೆಲಿಕಾಂ ನೆಟ್‌ವರ್ಕ್‌ಗಳಲ್ಲಿ ಸೆಕೆಂಡುಗಳ ವ್ಯತ್ಯಾಸವಿದ್ದರೂ ಡೇಟಾ ಮ್ಯಾನಿಪ್ಯುಲೇಷನ್ ಅಥವಾ ಸೈಬರ್ ದಾಳಿ ನಡೆಸುವ ಸಾಧ್ಯತೆ ಇರುತ್ತದೆ. ಇನ್ಮುಂದೆ ನ್ಯಾನೋ ಸೆಕೆಂಡ್ ನಿಖರತೆಯ ಏಕರೂಪದ ಸಮಯ ಇರುವುದರಿಂದ ಆನ್‌ಲೈನ್ ವಂಚನೆಗಳಿಗೆ ಬ್ರೇಕ್ ಬೀಳಲಿದೆ.

ಸಾಮಾನ್ಯ ಜನರ ಮೇಲಾಗುವ ಪರಿಣಾಮವೇನು?

ಸಾಮಾನ್ಯ ನಾಗರಿಕರು ಬಳಸುವ ಮೊಬೈಲ್ ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಗಳಲ್ಲಿ ಇನ್ನು ಮುಂದೆ ಯಾವುದೇ ಸಮಯದ ವ್ಯತ್ಯಾಸ ಕಾಣಿಸುವುದಿಲ್ಲ. ದೇಶದ ಯಾವುದೇ ಮೂಲೆಯಲ್ಲಿದ್ದರೂ ನಿಖರವಾದ, ಅಧಿಕೃತ ಮತ್ತು ಸುರಕ್ಷಿತ ಸಮಯ ಎಲ್ಲರಿಗೂ ಏಕಕಾಲದಲ್ಲಿ ಲಭ್ಯವಾಗಲಿದೆ.

One Nation, One Time
45 ಲೀಟರ್ ಟ್ಯಾಂಕ್‌ಗೆ 52 ಲೀಟರ್ ಇಂಧನ?: Petrol Bunkಗಳಲ್ಲಿ ನಿಮ್ಮ ಕಣ್ಣೆದುರೇ ನಡೆಯುತ್ತೆ ಮೋಸ: ವಂಚನೆ ಪತ್ತೆ ಮಾಡಲು ಇಲ್ಲಿದೆ ಟಾಪ್ ಟಿಪ್ಸ್!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com