ದೇಶದಲ್ಲಿ ಶೀಘ್ರ ಪ್ಲಾಸ್ಟಿಕ್ ನೋಟು? 10, 20 ರೂಪಾಯಿ ಪಾಲಿಮರ್ ನೋಟುಗಳ ಮುದ್ರಣಕ್ಕೆ ಮುಂದಾದ RBI; ಸಾಮಾನ್ಯ ಕಾಗದದ ನೋಟುಗಳಿಗಿಂತ ಇವು ಹೇಗೆ ಭಿನ್ನ?

RBI ದೇಶದಲ್ಲಿ ಕಾಗದದ ನೋಟುಗಳ ಬದಲಿಗೆ ಹೆಚ್ಚು ಬಾಳಿಕೆ ಬರುವ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲು ಮುಂದಾಗಿದೆ. ಹಾಗಾಗಿ, ತನ್ನ ಅಂಗಸಂಸ್ಥೆಯಾದ BRBNMPL ಮೂಲಕ ಪ್ಲಾಸ್ಟಿಕ್ ನೋಟುಗಳ ತಯಾರಿಕೆಗೆ ಅಗತ್ಯವಿರುವ ಪಾಲಿಮರ್ ಶೀಟ್‌ಗಳ ಪೂರೈಕೆಗಾಗಿ ಜಾಗತಿಕ ಟೆಂಡರ್ ಕರೆದಿದೆ.
Polymer Currency
ಶೀಘ್ರ RBIನಿಂದ ಪ್ಲಾಸ್ಟಿಕ್ ನೋಟು?Online Desk
Updated on

ಮುಂಬೈ (ಮಹಾರಾಷ್ಟ್ರ): ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದಲ್ಲಿ ಕಾಗದದ ನೋಟುಗಳ ಬದಲಿಗೆ ಹೆಚ್ಚು ಬಾಳಿಕೆ ಬರುವ ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಪರಿಚಯಿಸಲು ಮುಂದಾಗಿದೆ. ಈ ಮೂಲಕ ಸುಮಾರು ಒಂದು ದಶಕದ ಅಂದರೆ 2016ರ ನೋಟು ಅಮಾನ್ಯೀಕರಣದ ನಂತರ ಭಾರತದಲ್ಲಿ ಮತ್ತೊಮ್ಮೆ ಹಣಕಾಸು ಕ್ರಾಂತಿಯಾಗಲಿದೆ. ಹಾಗಾದ್ರೆ, ಏನಿದು ಪ್ಲಾಸ್ಟಿಕ್ ನೋಟು? ಸಾಮಾನ್ಯ ಕಾಗದದ ನೋಟುಗಳಿಗಿಂತ ಇವು ಹೇಗೆ ಭಿನ್ನ? ಎನ್ನುವುದರ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಏನಿದು ಪ್ಲಾಸ್ಟಿಕ್ ನೋಟು?

ಪ್ಲಾಸ್ಟಿಕ್ ನೋಟುಗಳು (ಪಾಲಿಮರ್ ನೋಟುಗಳು) ಹತ್ತಿ ಆಧಾರಿತ ಕಾಗದದ ಬದಲಿಗೆ ತೆಳುವಾದ ಮತ್ತು ಮೃದುವಾದ ಪ್ಲಾಸ್ಟಿಕ್‌ನಿಂದ ಮುದ್ರಿಸಲ್ಪಟ್ಟ ಕರೆನ್ಸಿ ನೋಟುಗಳಾಗಿವೆ. ಇವು ನೀರಿನಿಂದ ಹಾಳಾಗುವುದಿಲ್ಲ, ಸುಲಭವಾಗಿ ಹರಿಯುವುದಿಲ್ಲ ಮತ್ತು ಸಾಮಾನ್ಯ ಕಾಗದದ ನೋಟುಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುತ್ತವೆ. ಜೊತೆಗೆ, ಇವುಗಳನ್ನು ನಕಲಿ ಮಾಡುವುದು ಸಹ ಕಷ್ಟ.

ಈ ಕಾರಣದಿಂದ, ಆರ್‌ಬಿಐ ತನ್ನ ಅಂಗಸಂಸ್ಥೆಯಾದ 'ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್' (BRBNMPL) ಮೂಲಕ ಪ್ಲಾಸ್ಟಿಕ್ ನೋಟುಗಳ ತಯಾರಿಕೆಗೆ ಅಗತ್ಯವಿರುವ ಪಾಲಿಮರ್ ಶೀಟ್‌ಗಳ ಪೂರೈಕೆಗಾಗಿ ಜಾಗತಿಕ ಟೆಂಡರ್ ಕರೆದಿದೆ.

Polymer Currency
E20 ಬೇಡ ಅಂದ್ರೆ 100% Pure Petrol ಎಂದ ಗಡ್ಕರಿ; XP100 ಪೆಟ್ರೋಲ್ ಬೆಲೆ ಎಷ್ಟು?

ಯಾವಾಗ ಪ್ಲಾಸ್ಟಿಕ್ ನೋಟು ಬಳಕೆ ಪ್ರಾರಂಭ?

ವರದಿಗಳ ಪ್ರಕಾರ, ಮುಂದಿನ ವರ್ಷದಿಂದ ಆಯ್ದ ನಗರಗಳಲ್ಲಿ ಈ ಪ್ಲಾಸ್ಟಿಕ್ ನೋಟುಗಳ ಚಲಾವಣೆ ಮತ್ತು ಪರೀಕ್ಷೆ ಆರಂಭವಾಗುವ ಸಾಧ್ಯತೆಯಿದೆ. ಇನ್ನು ಇದರ ಪ್ರಾಯೋಗಿಕ ಯೋಜನೆಯ ಯಶಸ್ಸನ್ನು ಆಧರಿಸಿ, 2027 ರ ಹೊತ್ತಿಗೆ ದೇಶಾದ್ಯಂತ ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲು ಆರ್‌ಬಿಐ ಯೋಜಿಸಿದೆ.

ಯಾವ ನೋಟುಗಳು ಮೊದಲು ಎಂಟ್ರಿ?

ವರದಿಗಳ ಪ್ರಕಾರ, ಆರಂಭಿಕ ಹಂತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಮತ್ತು ಬೇಗನೆ ಹಾಳಾಗುವ ₹10 ಮತ್ತು ₹20 ಮುಖಬೆಲೆಯ ನೋಟುಗಳೊಂದಿಗೆ ಈ ಪ್ರಾಯೋಗಿಕ ಪರೀಕ್ಷೆ ಆರಂಭವಾಗಲಿದೆ ಎನ್ನಲಾಗಿದೆ.

Polymer Currency
ITR ಸಲ್ಲಿಕೆ ಮಾಡದಿದ್ದರೆ ಏನಾಗುತ್ತೆ? ಲೇಟ್ ಆದ್ರೆ ಫೈನ್ ಎಷ್ಟು?

ಆರ್‌ಬಿಐ ಈ ನಿರ್ಧಾರಕ್ಕೆ ಕಾರಣವೇನು?

ಭಾರತದಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಾಗಿದ್ದರೂ ನಗದು ಚಲಾವಣೆಗಳೂ ಇನ್ನೂ ದಾಖಲೆಯ ಮಟ್ಟದಲ್ಲಿಯೇ ಇದೆ. ಅದ್ರಲ್ಲೂ, ಪ್ರತಿ ವರ್ಷ ಹರಿದ ಮತ್ತು ಕೊಳಕಾದ ಕೋಟ್ಯಂತರ ಕಾಗದದ ನೋಟುಗಳನ್ನು ನಾಶಪಡಿಸಿ, ಹೊಸ ನೋಟುಗಳನ್ನು ಮುದ್ರಿಸಲು ಆರ್‌ಬಿಐ ಸಾವಿರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತಿದೆ. ಆದರೆ, ಪ್ಲಾಸ್ಟಿಕ್ ನೋಟುಗಳು ಕಾಗದದ ನೋಟುಗಳಿಗಿಂತ 2 ರಿಂದ 4 ಪಟ್ಟು ಹೆಚ್ಚು ಕಾಲ ಬಾಳಿಕೆ ಬರುವುದರಿಂದ ಮತ್ತು ಇವುಗಳನ್ನು ನಕಲು ಮಾಡುವುದು ಅಸಾಧ್ಯವಾಗಿರುವುದರಿಂದ ಆರ್‌ಬಿಐ ಈ ಕ್ರಮಕ್ಕೆ ಮುಂದಾಗಿದೆ.

ಹಳೆಯ ನೋಟುಗಳ ಕಥೆ ಏನು?

ಪ್ಲಾಸ್ಟಿಕ್ ನೋಟುಗಳು ಬಂದ ತಕ್ಷಣ ಹಳೆಯ ಕಾಗದದ ನೋಟುಗಳು ಅಮಾನ್ಯವಾಗುವುದಿಲ್ಲ. ಅದರಂತೆ, ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಮತ್ತು ಕಾಗದದ ನೋಟುಗಳೆರಡೂ ಒಟ್ಟಿಗೆ ಚಲಾವಣೆಯಲ್ಲಿರುತ್ತವೆ. ಹಾಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಕಾಗದದ ನೋಟುಗಳನ್ನು ಬದಲಾಯಿಸಲು ಜೂನ್ 30 ರ ಕೊನೆಯ ಗಡುವು ಎಂಬ ಸುದ್ದಿ ಸುಳ್ಳಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.

Polymer Currency
UPI Payment ಗೂ ಶುಲ್ಕ? ಯಾರೆಲ್ಲ ಫೀಸ್ ಪೇ ಮಾಡಬೇಕು?

ಬೇರೆ ಯಾವ ದೇಶಗಳಲ್ಲಿ ಪ್ಲಾಸ್ಟಿಕ್ ನೋಟು ಬಳಕೆ ಮಾಡಲಾಗುತ್ತೆ?

ವರದಿಗಳ ಪ್ರಕಾರ, ಪಾಲಿಮರ್ ಕರೆನ್ಸಿ ಪ್ರಸ್ತುತ 60 ದೇಶಗಳಲ್ಲಿ ಬಳಕೆಯಲ್ಲಿದೆ. ಕೆಲವು ದೇಶಗಳಲ್ಲಿ ಇದನ್ನು ಸಂಪೂರ್ಣವಾಗಿ ಜಾರಿಗೆ ತರಲಾಗಿದ್ದರೂ, ಇನ್ನು ಕೆಲವು ದೇಶಗಳಲ್ಲಿ ಇದನ್ನು ಅಲ್ಪ ಪ್ರಮಾಣದಲ್ಲಿ ಜಾರಿ ಮಾಡಲಾಗಿದೆ.

ಏತನ್ಮಧ್ಯೆ, 1988 ರಲ್ಲಿ ಪಾಲಿಮರ್ 10 ಡಾಲರ್ ನೋಟುಗಳನ್ನು ಪರಿಚಯಿಸಿದ ಮೊದಲ ದೇಶ ಆಸ್ಟ್ರೇಲಿಯಾ. 1998 ರಲ್ಲಿ ರೊಮೇನಿಯಾ ಇದನ್ನು ಅನುಸರಿಸಿತು. ಈ ಮೂಲಕ ಪ್ಲಾಸ್ಟಿಕ್ ನೋಟು ಬಳಕೆ ಪ್ರಾರಂಭಿಸಿದ ಮೊದಲ ಯುರೋಪಿಯನ್ ದೇಶವಾಯಿತು. ಅದರಂತೆ ಪ್ರಸ್ತುತ, ಕೆನಡಾ, ಯುಕೆ, ಸಿಂಗಾಪುರ್, ಮಲೇಷ್ಯಾ, ಥೈಲ್ಯಾಂಡ್, ಇಂಡೋನೇಷ್ಯಾ, ನ್ಯೂಜಿಲೆಂಡ್ ಮತ್ತು ವಿಯೆಟ್ನಾಂನಲ್ಲಿಯೂ ಪ್ಲಾಸ್ಟಿಕ್ ಕರೆನ್ಸಿಯನ್ನು ಬಳಕೆ ಮಾಡಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com