Pune Fort Murder: ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಭಾರಿ ಟ್ವಿಸ್ಟ್; 3ನೇ ಆರೋಪಿ ಬಂಧನ; ಯಾರು ಈ ರಿತೇಶ್?

ಮೂರನೇ ಆರೋಪಿ ರಿತೇಶ್‌ನನ್ನು ವಡಗಾಂವ್ ಮಾವಳ್ ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 12ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
Pune Fort Murder
ಕೇತನ್ ಅಗರ್ವಾಲ್ ಕೊಲೆ ಪ್ರಕರಣ (ಸಂಗ್ರಹ ಚಿತ್ರ)
Updated on

ಪುಣೆ: ಮಹಾರಾಷ್ಟ್ರದ ಪುಣೆಯ ಲೋಹಗಢ ಕೋಟೆಯಲ್ಲಿ ನಡೆದಿದ್ದ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಟ್ವಿಸ್ಟ್ ದೊರೆತಿದ್ದು, ಪ್ರಕರಣದಲ್ಲಿ ಮೂರನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉದ್ಯಮಿ ಕೆತನ್ ಅಗರ್ವಾಲ್ ಅವರನ್ನು ಲೋಹಗಢ ಕೋಟೆಯಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಆಕೆಯ ಬಾಯ್‌ಫ್ರೆಂಡ್ ಚೇತನ್ ಚೌಧರಿ ಬಂಧನದ ಬಳಿಕ ಇದೀಗ ಮೂರನೇ ವ್ಯಕ್ತಿಯನ್ನೂ ಪೊಲೀಸರು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ ಪ್ರಕರಣದ ಆರೋಪಿ ಹಾಗೂ ಸಿಯಾ ಗೋಯಲ್ ಪ್ರಿಯತಮ ಚೇತನ್ ಚೌಧರಿಯ ಸ್ನೇಹಿತ ರಿತೇಶ್ ಹಂಗೆನನ್ನು ಶುಕ್ರವಾರ ಬಂಧಿಸಲಾಗಿದ್ದು, ಕೆತನ್ ಅಗರ್ವಾಲ್ ಕೊಲೆಯ ಸಂಚು ರೂಪಿಸುವಲ್ಲಿ ಆತ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಮೂರನೇ ಆರೋಪಿ ರಿತೇಶ್‌ನನ್ನು ವಡಗಾಂವ್ ಮಾವಳ್ ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್ 12ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

Pune Fort Murder
'ಎಂದಿಗೂ ಈ ಮದುವೆ ನಡೆಯಲ್ಲ': ಪ್ರಿಯಕರನಿಗೆ ಸಂದೇಶ ಕಳುಹಿಸಿದ್ದ ಸಿಯಾ ಗೋಯಲ್; ಚಾಟ್ ವೈರಲ್!

ಮೊಬೈಲ್ ಚಾಟ್‌ನಿಂದ ಸಂಚು ಬಯಲು

ಪೊಲೀಸರ ತನಿಖೆಯಲ್ಲಿ ವಶಪಡಿಸಿಕೊಂಡ ಮೊಬೈಲ್ ಫೋನ್‌ನ ವಿಧಿವಿಜ್ಞಾನ ಪರೀಕ್ಷೆ ವೇಳೆ ರಿತೇಶ್‌ನ ಪಾತ್ರ ಬೆಳಕಿಗೆ ಬಂದಿದೆ. ಕೆತನ್‌ನನ್ನು ಲೋಹಗಢ ಕೋಟೆಯಿಂದ ಕೆಳಗೆ ತಳ್ಳಿ ಕೊಲೆ ಮಾಡುವುದು ಹಾಗೂ ಬಳಿಕ ಸಾಕ್ಷ್ಯಗಳನ್ನು ನಾಶಪಡಿಸುವ ಕುರಿತು ಮೊಬೈಲ್‌ನಲ್ಲಿ ಚಾಟ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಕೆತನ್‌ನ ಕೈ-ಕಾಲು ಮುರಿದು ಬಳಿಕ ಆತನನ್ನು ಕೊಲ್ಲುವ ಬಗ್ಗೆ ಸಿಯಾ ಮತ್ತು ಚೇತನ್ ಈ ಹಿಂದೆ ರೂಪಿಸಿದ್ದ ಯೋಜನೆಯ ಬಗ್ಗೆಯೂ ರಿತೇಶ್‌ಗೆ ಮಾಹಿತಿ ಇತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕೊಲೆ ನಡೆದ ಬಳಿಕ ಚೇತನ್ ರಿತೇಶ್‌ಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ.

ಮೊದಲು ಅಪಘಾತ ಎಂದು ಭಾವಿಸಿದ್ದ ಪೊಲೀಸರು

ಜೂನ್ 18ರಂದು ಸಿಯಾ ಗೋಯಲ್ ಜೊತೆ ಲೋಹಗಢ ಕೋಟೆಗೆ ಟ್ರೆಕ್ಕಿಂಗ್‌ಗೆ ತೆರಳಿದ್ದ ವೇಳೆ ಕೆತನ್ ಅಗರ್ವಾಲ್ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾನೆ ಎಂದು ಆರಂಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಕೆತನ್ ಕುಟುಂಬದವರು ಇದನ್ನು ಅಪಘಾತ ಎಂದು ಒಪ್ಪಿಕೊಳ್ಳದೆ ಅನುಮಾನ ವ್ಯಕ್ತಪಡಿಸಿದರು. ವಿಶೇಷವಾಗಿ ಕೇತನ್ ಸಹೋದರಿ ಸಿಯಾ ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸಗಳನ್ನು ಗಮನಿಸಿ ಪೊಲೀಸರ ಬಳಿ ಮರುತನಿಖೆಗೆ ಮನವಿ ಮಾಡಿದ್ದರು.

ಕೊಲೆಯಾದ ನಾಲ್ಕು ದಿನಗಳ ಬಳಿಕ ಸಿಯಾ ಕೆತನ್ ಕುಟುಂಬದ ಮನೆಗೆ ಸಂತಾಪ ಸೂಚಿಸಲು ತೆರಳಿದ್ದಳು. ಈ ವೇಳೆ ಕೇತನ್ ಸಹೋದರಿ ಕೋಟೆಯಲ್ಲಿ ನಡೆದ ಘಟನೆಯ ಕುರಿತು ಆಕೆಯನ್ನು ವಿವರವಾಗಿ ಪ್ರಶ್ನಿಸಿದ್ದರು. ಸಿಯಾ ನೀಡಿದ ಉತ್ತರಗಳು ಹಾಗೂ ಆಕೆಯ ವರ್ತನೆ ಅನುಮಾನಕ್ಕೆ ಕಾರಣವಾಗಿತ್ತು.

ಮೂರು ಬಾರಿ ಕೋಟೆಗೆ ತೆರಳಿದ್ದ ಜೋಡಿ

ಕೇತನ್ ಮತ್ತು ಸಿಯಾ ಮೇ 31, ಜೂನ್ 14 ಹಾಗೂ ಜೂನ್ 18ರಂದು ಲೋಹಗಢ ಕೋಟೆಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು. ಸಿಯಾ ನೀಡಿದ ಹೇಳಿಕೆಗಳಲ್ಲಿನ ಅಸಮಂಜಸತೆ ಹಾಗೂ ಆಕೆಯ ತಪ್ಪಿಸಿಕೊಳ್ಳುವ ರೀತಿಯ ಉತ್ತರಗಳು ಕುಟುಂಬದ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದವು.

ನಂತರ ಪೊಲೀಸರ ತನಿಖೆಯಲ್ಲಿ ಸಿಯಾ ಮತ್ತು ಚೇತನ್ ನಡುವೆ ಸಂಬಂಧವಿದ್ದ ವಿಚಾರ ಬೆಳಕಿಗೆ ಬಂದಿದ್ದು, ಇಬ್ಬರೂ ಕೇತನ್‌ನನ್ನು ಮುಗಿಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಇಬ್ಬರನ್ನೂ ಜೂನ್ 23ರಂದು ಬಂಧಿಸಲಾಗಿತ್ತು.

2,000ಕ್ಕೂ ಹೆಚ್ಚು ಕರೆಗಳು

ತನಿಖೆ ವೇಳೆ ಸಿಯಾ ಮತ್ತು ಚೇತನ್ ಕಳೆದ ಮೂರು ವರ್ಷಗಳಿಂದ ಸಂಪರ್ಕದಲ್ಲಿದ್ದರು ಎಂಬುದು ಬೆಳಕಿಗೆ ಬಂದಿದೆ. ಜನವರಿಯಿಂದ ಜೂನ್‌ವರೆಗೆ ಇಬ್ಬರೂ 2,000ಕ್ಕೂ ಹೆಚ್ಚು ಬಾರಿ ದೂರವಾಣಿ ಮೂಲಕ ಮಾತನಾಡಿದ್ದು, ಒಟ್ಟು ಸುಮಾರು 238 ಗಂಟೆಗಳ ಕಾಲ ಕರೆಗಳಲ್ಲಿ ಮಾತನಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದಲ್ಲದೆ FaceTime ಮತ್ತು WhatsApp ಮೂಲಕವೂ ಸಂಪರ್ಕದಲ್ಲಿದ್ದರು. ಕೋಟೆ ಸುತ್ತಮುತ್ತಲಿನ CCTV ದೃಶ್ಯಗಳಲ್ಲೂ ಜೂನ್ ತಿಂಗಳ ಬಿಸಿಲಿನ ನಡುವೆಯೂ ಹೂಡಿ ಧರಿಸಿದ್ದ ವ್ಯಕ್ತಿಯೊಬ್ಬ ಕೇತನ್ ಮತ್ತು ಸಿಯಾ ತೆರಳುತ್ತಿದ್ದ ವಾಹನವನ್ನು ಹಾಗೂ ಅವರ ಚಲನವಲನವನ್ನು ಹಿಂಬಾಲಿಸುತ್ತಿರುವುದು ಕಂಡುಬಂದಿತ್ತು. ಈ ಅಸಹಜ ಸಂಗತಿ ಪೊಲೀಸರ ಗಮನ ಸೆಳೆದಿದ್ದು, ತನಿಖೆ ಮುಂದುವರಿದಂತೆ ಆತ ಚೇತನ್ ಎಂಬುದು ಪತ್ತೆಯಾಗಿತ್ತು.

Pune Fort Murder
ಕೇತನ್ ಅಗರ್ವಾಲ್ ಕೊಲೆ ಪ್ರಕರಣ: ಮಾಧ್ಯಮಗಳತ್ತ ಅಶ್ಲೀಲ ಸನ್ನೆ ಮಾಡಿದ ಆರೋಪಿ ಸಿಯಾ ಗೋಯಲ್!

ಅನುಮಾನಕ್ಕೆ ಕಾರಣವಾದ ಬಾಲಿ ಪ್ರವಾಸ

ಕೇತನ್ ಮತ್ತು ಸಿಯಾ ಮದುವೆಗೂ ಮುನ್ನ ಫೋಟೋಶೂಟ್‌ಗಾಗಿ ಇಂಡೋನೇಷ್ಯಾದ ಬಾಲಿಗೆ ತೆರಳಲು ಯೋಜಿಸಿದ್ದರು. ಜೂನ್ 6ರಂದು ಮುಂಬೈನಿಂದ ತೆರಳಬೇಕಿದ್ದ ವೇಳೆ ಕೇತನ್ ತನ್ನ ಪಾಸ್‌ಪೋರ್ಟ್ ಕಾಣೆಯಾಗಿರುವುದನ್ನು ವಿಮಾನ ನಿಲ್ದಾಣದಲ್ಲಿ ಗಮನಿಸಿದ್ದರಿಂದ ಪ್ರವಾಸ ರದ್ದಾಗಿತ್ತು. ಕೇತನ್ ತಂದೆ ವಿಶಾಲ್ ಅಗರ್ವಾಲ್, ಪಾಸ್‌ಪೋರ್ಟ್ ಕಾಣೆಯಾಗಿರುವುದು ಉದ್ದೇಶಪೂರ್ವಕ ಕೃತ್ಯವಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರು.

ಅವರ ಪ್ರಕಾರ, ಕುಟುಂಬದವರು ಒಂದೇ ಕಾರಿನಲ್ಲಿ ತೆರಳುತ್ತಿದ್ದಾಗ ಎಲ್ಲರ ಪಾಸ್‌ಪೋರ್ಟ್‌, ಹಣ, ಕ್ರೆಡಿಟ್ ಕಾರ್ಡ್‌, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ದಾಖಲೆಗಳನ್ನು ಒಂದೇ ಬ್ಯಾಗ್ ನಲ್ಲಿ ಇಡಲಾಗಿತ್ತು. ದಾರಿಯಲ್ಲಿ ಫುಡ್ ಮಾಲ್‌ನಲ್ಲಿ ನಿಂತಾಗ ಸಿಯಾ ತನ್ನ ಮೊಬೈಲ್ ಕಾರಿನಲ್ಲೇ ಉಳಿದಿದೆ ಎಂದು ಹೇಳಿ ವಾಪಸ್ ಹೋಗಿದ್ದಳು.

ವಿಮಾನ ನಿಲ್ದಾಣ ತಲುಪಿದಾಗ ಎಲ್ಲರ ಪಾಸ್‌ಪೋರ್ಟ್ ಇದ್ದರೂ ಕೇತನ್‌ನ ಪಾಸ್‌ಪೋರ್ಟ್ ಮಾತ್ರ ಕಾಣೆಯಾಗಿತ್ತು ಎಂದು ಅವರ ತಂದೆ ಆರೋಪಿಸಿದ್ದರು. ಈ ಘಟನೆ ನಡೆದ ಕೇವಲ 12 ದಿನಗಳ ಬಳಿಕ ಜೂನ್ 18ರಂದು ಕೆತನ್ ಅಗರ್ವಾಲ್ ಲೋಹಗಢ ಕೋಟೆಯಲ್ಲಿ ಮೃತಪಟ್ಟಿದ್ದರು. ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com