

ನವದೆಹಲಿ: ಮದುವೆ ನಿಶ್ಚಯವಾಗಿದ್ದ ಕೇತನ್ ಅಗರ್ವಾಲ್ ಅವರನ್ನು ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿದ್ದ ಸಿಯಾ ಗೋಯಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆರಂಭದಲ್ಲಿ ಕೇತನ್ ಆಕಸ್ಮಿಕವಾಗಿ ಬಿದ್ದಿದ್ದಾರೆ ಎಂದೇ ಭಾವಿಸಲಾಗಿತ್ತು. ಇದೀಗ ಸಿಯಾ ಅವರನ್ನು ಪೊಲೀಸರು ಕರೆದೊಯ್ಯುತ್ತಿದ್ದಾಗ ತನ್ನ ಮನೆಯ ಹೊರಗೆ ನಿಂತಿದ್ದ ಮಾಧ್ಯಮದ ಕಡೆಗೆ ಅಶ್ಲೀಲ ಸನ್ನೆ ಮಾಡಿದ್ದಾಳೆ.
ಸುದ್ದಿಸಂಸ್ಥೆ IANS ತನ್ನ X ಖಾತೆಯಲ್ಲಿ ಪೋಸ್ಟ್ ಮಾಡಿರುವ 17 ಸೆಕೆಂಡುಗಳ ವಿಡಿಯೋದಲ್ಲಿ ಸಿಯಾ ಪುಣೆಯಲ್ಲಿರುವ ತನ್ನ ಮಾರ್ಕೆಟ್ ಯಾರ್ಡ್ ನಿವಾಸದಿಂದ ಹೊರಗೆ ಹೋಗುತ್ತಿರುವುದು ಸೆರೆಯಾಗಿದೆ. ತನಿಖೆಗಾಗಿ ಪೊಲೀಸರು ಆಕೆಯನ್ನು ಕರೆದೊಯ್ಯುತ್ತಿದ್ದರು. ಕಪ್ಪು ಟಿ-ಶರ್ಟ್ ಮತ್ತು ಮುಖವನ್ನು ಮುಚ್ಚಿಕೊಂಡು ಮುದ್ರಿತ ಸ್ಕಾರ್ಫ್ ಧರಿಸಿದ್ದ ಸಿಯಾ, ಆಕೆಯ ದೃಶ್ಯಗಳನ್ನು ರೆಕಾರ್ಡ್ ಮಾಡಲು ಮುಂದಾಗಿದ್ದ ಮಾಧ್ಯಮದವರನ್ನು ನೋಡಿ ಮಧ್ಯದ ಬೆರಳನ್ನು ತೋರಿಸಿದ್ದಾಳೆ.
ಈ ವಿಡಿಯೋಗೆ ಕಮೆಂಟ್ ಮಾಡಿರುವವ ಬಳಕೆದಾರರೊಬ್ಬರು, 'ಅತ್ಯಂತ ದುಷ್ಟರು - ಯಾವುದೇ ಪಶ್ಚಾತ್ತಾಪವಿಲ್ಲ' ಎಂದಿದ್ದಾರೆ.
ಜೂನ್ 18 ರಂದು ಮಹಾರಾಷ್ಟ್ರದ ಪುಣೆ ಸಮೀಪವಿರುವ ಲೋಹಗಢ ಕೋಟೆಯಲ್ಲಿ, ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ ಕೇತನ್ ಅವರನ್ನು ಕಣಿವೆಯೊಂದಕ್ಕೆ ತಳ್ಳಿದ ಪರಿಣಾಮ ಅವರು ಮೃತಪಟ್ಟರು. ಆರಂಭದಲ್ಲಿ ಕೇತನ್ ಕಾಲು ಜಾರಿ ಬಿದ್ದಿದ್ದಾರೆ ಎಂದು ಸಿಯಾ ಪೊಲೀಸರಿಗೆ ತಿಳಿಸಿದ್ದರಿಂದ, ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿತ್ತು. ಆದರೆ, ಸಿಯಾ ಅವರ ವರ್ತನೆಯಲ್ಲಿ ಯಾವುದೇ ದುಃಖದ ಛಾಯೆ ಕಂಡುಬರದಿದ್ದರಿಂದ ಪೊಲೀಸರಿಗೆ ಅನುಮಾನ ಉಂಟಾಯಿತು. ತರುವಾಯ ತನಿಖೆ ಆರಂಭಗೊಂಡು, ಸಿಯಾ ಮತ್ತು ಚೇತನ್ ಅವರನ್ನು ಬಂಧಿಸಲಾಯಿತು.
ಸಿಯಾ ಮತ್ತು ಕೇತನ್ ಅವರ ಮದುವೆ ನಿಶ್ಚಯವಾಗಿತ್ತು ಮತ್ತು ಅವರ ವಿವಾಹವು ನವೆಂಬರ್‌ನಲ್ಲಿ ನಡೆಯಬೇಕಿತ್ತು.
ಪೊಲೀಸರ ಪ್ರಕಾರ, ಕೇತನ್ ಜೊತೆಗಿನ ಸಿಯಾಳ ಸಂಬಂಧದ ಬಗ್ಗೆ ಚೇತನ್‌ಗೆ ಅಸಮಾಧಾನವಿತ್ತು ಹಾಗೂ ಆತ ತನಗೆ ಅಡ್ಡಿಯಾಗಿದ್ದಾನೆ ಎಂದು ಆತ ಭಾವಿಸಿದ್ದನು. ಹೀಗಾಗಿ, ಅವರಿಬ್ಬರೂ ಸೇರಿ ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ.
ಜೂನ್ 14 ರಂದು, ಸಿಯಾ ಕೇತನ್‌ನನ್ನು ಕೋಟೆಗೆ ಕರೆದೊಯ್ದು ಅಲ್ಲಿ ಅವರನ್ನು ಕೆಳಗೆ ತಳ್ಳಿದ್ದಾಳೆ; ಆದರೆ ಬಂಡೆಯ ಅಂಚಿನಲ್ಲಿದ್ದ ಪೊದೆಯೊಂದನ್ನು ಹಿಡಿದುಕೊಂಡಿದ್ದರಿಂದ ಅವರು ಬದುಕುಳಿದಿದ್ದರು. ತನ್ನ ಕೃತ್ಯವನ್ನು ಮುಚ್ಚಿಹಾಕಲು, ಹಾವು ಕಂಡಿದ್ದಕ್ಕೆ ತಳ್ಳಿದ್ದಾಗಿ ಕೂಗಾಡಿ ಆತನನ್ನು ತಬ್ಬಿಕೊಳ್ಳುವ ಮೂಲಕ ಅವಳು ಎಲ್ಲರ ಗಮನವನ್ನು ಬೇರೆಡೆಗೆ ಸೆಳೆದಿದ್ದಳು. ನಂತರ, ಆಕೆ ಮತ್ತೆ ಕೇತನ್‌ನನ್ನು ಕೋಟೆಗೆ ಬರುವಂತೆ ಒಪ್ಪಿಸಿದಳು. ಈ ಬಾರಿ ತನ್ನ ಪ್ರಿಯಕರನನ್ನೂ ಅಲ್ಲಿಗೆ ಕರೆಸಿಕೊಂಡಳು; ಅಲ್ಲಿ ಅವರಿಬ್ಬರೂ ಸೇರಿ ಕೇತನ್‌ನನ್ನು ಹಿಂದಿನಿಂದ ಕಣಿವೆಗೆ ತಳ್ಳಿದರು ಎಂದು ಆರೋಪಿಸಲಾಗಿದೆ.
ಇಬ್ಬರು ಆರೋಪಿಗಳನ್ನು ಇಂದು ಮಧ್ಯಾಹ್ನ 2.30ಕ್ಕೆ ವಡ್ಗಾಂವ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅಲ್ಲಿ ಪುಣೆ ಗ್ರಾಮಾಂತರ ಪೊಲೀಸರು ಅವರ ಹೆಚ್ಚಿನ ಪೊಲೀಸ್ ಕಸ್ಟಡಿಯನ್ನು (ರಿಮಾಂಡ್) ಕೋರಲಿದ್ದಾರೆ. ಮತ್ತೊಂದೆಡೆ, ಇಬ್ಬರೂ ಆರೋಪಿಗಳ ಪರ ವಕೀಲರು ನ್ಯಾಯಾಂಗ ಬಂಧನಕ್ಕೆ ಕೋರಲಿದ್ದಾರೆ.