

ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆಯಲ್ಲಿ ಬಗೆದಷ್ಟು ಹೊಸ, ಹೊಸ ಸಂಗತಿಗಳು ಬಯಲಾಗುತ್ತಿದೆ. ಕೇತನ್ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಳ್ಳುವ ಮುನ್ನ ಆರೋಪಿ ಸಿಯಾ ಗೋಯಲ್ ಮತ್ತು ಆಕೆಯ ಸಂಗಾತಿ ಎಂದು ಹೇಳಲಾಗುವ ಚೇತನ್ ಚೌಧರಿ ಒಟ್ಟಿಗೆ ಉದಯಪುರಕ್ಕೆ ಹೋಗಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.
ಅಲ್ಲದೇ ಇವರಿಬ್ಬರು ಕ್ರಿಕೆಟ್ ಮ್ಯಾಚ್, ಪಾರ್ಟಿ ಸೇರಿದಂತೆ ಅಲ್ಲಿ ಇಲ್ಲಿ ಸುತ್ತಾಡಿರುವ ವಿಡಿಯೋ, ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕುರಿತು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಫೆಬ್ರವರಿಯಲ್ಲಿ ಕೇತನ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಳ್ಳುವ ಮುನ್ನಾ ಸಿಯಾ ಮತ್ತು ಚೇತನ್ ಒಂದು ಗುಂಪಿನೊಂದಿಗೆ ಉದಯಪುರಕ್ಕೆ ಪ್ರಯಾಣಿಸಿದ್ದರು. ಕೊಲೆಗೆ ಸಂಚು ರೂಪಿಸುವ ಉದ್ದೇಶದಿಂದಲೇ ಉದಯಪುರಕ್ಕೆ ಹೋಗಿದ್ರಾ ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲು ಪೊಲೀಸರು ಈಗ ಪ್ರಯಾಣ ದಾಖಲೆಗಳು ಮತ್ತಿತರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕೇತನ್ ಜೊತೆ ಮದುವೆಯಾಗಲು ತಾನು ಎಂದಿಗೂ ಬಯಸಿರಲಿಲ್ಲ ಎಂದು ಸಿಯಾ ಹೇಳಿರುವುದಾಗಿ ತನಿಖಾಧಿಕಾರಿಗಳು ಉಲ್ಲೇಖಿಸಿದ್ದಾರೆ.
ಕೇತನ್ ಮದುವೆಯಾಗಲು ಸಿಯಾಗೆ ಇಷ್ಟ ಇರಲಿಲ್ಲ. ಒಂದು ವೇಳೆ ನಿಶ್ಚಿತಾರ್ಥ ರದ್ದಾದರೆ ಚೇತನ್ ಜೊತೆಗಿನ ಸಂಬಂಧದಿಂದಾಗಿ ಸಮಾಜದಲ್ಲಿ ಮಾರ್ಯದೆ ಹೋಗುವ ಭಯವಿತ್ತು. ಹೀಗಾಗಿ ಆರೋಪಿಗಳು ಮದುವೆಯನ್ನು ಸುಮಾರು ಮೂರು ವರ್ಷಗಳ ಕಾಲ ವಿಳಂಬಗೊಳಿಸಲು ಉದ್ದೇಶಿಸಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಮದುವೆಯ ಶಾಪಿಂಗ್ ನೆಪದಲ್ಲಿ ಕೇತನ್ ನಿಂದ 1 ಕೋಟಿ ರೂ. ಪಡೆದು ನಂತರ ಆ ಹಣವನ್ನು ಚೇತನ್ ಗೆ ಸಿಯಾ ವರ್ಗಾಯಿಸಿದ್ದಳು ಎಂದು ಪೊಲೀಸರು ಆರೋಪಿಸಿದ್ದಾರೆ. ತನಿಖಾಧಿಕಾರಿಗಳು ಹೇಳುವಂತೆ ಚೇತನ್ ಈ ಹಣ ಬಳಸಿಕೊಂಡು ತನ್ನ ವ್ಯವಹಾರವನ್ನು ಸ್ಥಾಪಿಸಲು ಯೋಜಿಸಿದ್ದನು ಮತ್ತು ಅಲ್ಲದೇ ಮೂರು ವರ್ಷ ತಾನು ಆರ್ಥಿಕವಾಗಿ ನೆಮ್ಮದಿಯಾಗಿ ಇರುತ್ತೇನೆ ಅಂದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೇತನ್ ಕೊಲೆಯಾದ ಕೆಲ ತಿಂಗಳ ಬಳಿಕ ಚೇತನ್ ಸಿಯಾಳ ಕುಟುಂಬ ಸಂಪರ್ಕಿ ಅಧಿಕೃತವಾಗಿ ಮದುವೆಯ ಪ್ರಸ್ತಾಪ ಮಾಡಲು ಯೋಜಿಸಿದ್ದರು ಎಂಬ ಆರೋಪಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಭಾಗವಾಗಿ ಕೇತನ್ ಸಾವನ್ನಪ್ಪಿದ್ದ ಲೋಹಗಡ್ ಕೋಟೆಯ ಅಪರಾಧ ಸ್ಥಳವನ್ನು ಪುಣೆ ಗ್ರಾಮೀಣ ಪೊಲೀಸರು ಭಾನುವಾರ ಮರುಸೃಷ್ಟಿಸಿದರು.
ಘಟನೆಗೆ ಕಾರಣವಾದ ಘಟನೆಗಳನ್ನು ಪುನರ್ನಿರ್ಮಿಸಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಂತೆ ಸಿಯಾ ಗೋಯಲ್ ಅವರನ್ನು ಲೋಹಗಡ್ ಕೋಟೆಯಲ್ಲಿ ಸ್ಥಳಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ ಅವರು ಚೇತನ್ ಚೌಧರಿ ಜೊತೆಗೆ ಅಗರ್ವಾಲ್ ಅವರನ್ನು ತಳ್ಳಿದ್ದಾರೆ ಎನ್ನಲಾಗಿದೆ ಎಂದು ಪುಣೆ ಗ್ರಾಮೀಣ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೂನ್ 18 ರಂದು ನಡೆದ ಘಟನೆಗಳನ್ನು ಪರಿಶೀಲಿಸಲು ಮತ್ತು ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಪುರಾವೆಗಳನ್ನು ದೃಢೀಕರಿಸಲು ಅಪರಾಧ ಮರುಸೃಷ್ಟಿ ಮಾಡಲಾಯಿತು.
ಅಲ್ಲಿ ಕೇತನ್ ಕಮರಿಗೆ ಬಿದ್ದ ನಂತರ ಆತನ ಸಾವು ಅಪಘಾತ ಎಂದು ಆರಂಭದಲ್ಲಿ ನಂಬಿಸಲಾಗಿತ್ತು. ಆದಾಗ್ಯೂ, ನಂತರ ತನಿಖೆ ಮತ್ತೊಂದು ತಿರುವು ಪಡೆದುಕೊಂಡಿದ್ದು, ಪೊಲೀಸರು ಯೋಜಿತ ಕೊಲೆಯ ಪರಿಣಾಮ ಎಂದು ಆರೋಪಿಸಿದ್ದಾರೆ. ತನಿಖೆ ಮುಂದುವರೆದಂತೆ ಪೊಲೀಸರು ವಿಧಿವಿಜ್ಞಾನ, ಡಿಜಿಟಲ್ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸುವುದನ್ನು ಮುಂದುವರೆಸಿದ್ದಾರೆ. ಆರೋಪಿಗಳ ವಿರುದ್ಧದ ಆರೋಪಗಳ ಕುರಿತು ಯಾವುದೇ ನ್ಯಾಯಾಲಯ ಇನ್ನೂ ತೀರ್ಪು ನೀಡಿಲ್ಲ.