

ನವದೆಹಲಿ: ಮಹಿಳೆಯರ 'ವ್ಯಕ್ತಿತ್ವದ ಮೇಲೆ ದಾಳಿ ಮಾಡುವ ಮೂಲಕ ಅವರ ಹೆಸರು ಕೆಡಿಸುವುದು ಹಳೆಯ ತಂತ್ರ'. ಈ ಪದ್ಧತಿ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಮತ್ತು ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಮಾಜದಲ್ಲಿ ಒಳಗಣ್ಣಿನಿಂದ ನೋಡಬೇಕು ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಸೋಮವಾರ ಹೇಳಿದ್ದಾರೆ.
ನಟ-ರಾಜಕಾರಣಿ, ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ನಟಿ ತ್ರಿಶಾ ಅವರ ಬಗ್ಗೆ ಮಾಡಿದ ಅವಹೇಳನಕಾರಿ ಹೇಳಿಕೆಗಳನ್ನು ಸಹ ಉಲ್ಲೇಖಿಸಿದ್ದಾರೆ.
'ತಮಿಳುನಾಡಿನಲ್ಲಿ ಏನಾಯಿತು ಎಂದು ನೀವು ನೋಡಿದ್ದೀರಿ, ಅಲ್ಲಿ ಬಹಳ ಗೌರವಾನ್ವಿತ ಕಲಾವಿದೆ ಮತ್ತು ನಟಿಯನ್ನು ಎರಡು ಪಕ್ಷಗಳ ನಡುವಿನ ಗುದ್ದಾಟದ ವಿಷಯದಲ್ಲಿ ಎಳೆದುತರಲಾಗಿತ್ತು. ಆದಾಗ್ಯೂ, ನಿಂದನೆ ಮತ್ತು ವ್ಯಕ್ತಿತ್ವ ಹತ್ಯೆಯ ವಿಷಯಕ್ಕೆ ಬಂದಾಗ, ಯಾವಾಗಲೂ ಮಹಿಳೆಯನ್ನು ಗುರಿಯಾಗಿಸಲಾಗುತ್ತದೆ' ಎಂದು ರಣಾವತ್ ಕುಲ್ಲುವಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನಿನ್ನೆ ರಾಜ್ಯ ವಿಧಾನಸಭೆಯಲ್ಲಿ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ವಿಜಯ್, 'ಕಟುವಾದ ರಾಜಕೀಯ ಟೀಕೆಗಳಿರಬಹುದು, ಆದರೆ ಮಹಿಳೆಯರ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆಗಳು ಇರಬಾರದು' ಎಂದು ಹೇಳಿದರು.
ವಿರೋಧ ಪಕ್ಷ ಡಿಎಂಕೆಯನ್ನು ಗುರಿಯಾಗಿಸಿಕೊಂಡು, 'ವೈಯಕ್ತಿಕ ದಾಳಿಗಳು, ದ್ವಂಧ್ವ ಅರ್ಥ ಬರುವ ಹೇಳಿಕೆಗಳು ಅಥವಾ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಅವಹೇಳನಕಾರಿ ಭಾಷೆಯನ್ನು ಬಳಸುವುದರಿಂದ ತಕ್ಷಣದ, ರಾಜಿಯಾಗದ ಕಾನೂನು ಪರಿಣಾಮಗಳು ಉಂಟಾಗುತ್ತವೆ' ಎಂದು ವಿಜಯ್ ಹೇಳಿದ್ದಾರೆ.
ಆಗಸ್ಟ್‌ನಲ್ಲಿ ನಡೆದ ಕಾವೇರಿ ಪ್ರತಿಭಟನಾ ಸಭೆಯಲ್ಲಿ ಉದಯನಿಧಿ ಸ್ಟಾಲಿನ್ ನಟಿ ತ್ರಿಶಾ ಕುರಿತು ದ್ವಂಧ್ವಾರ್ಥದ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಹೇಳಿಕೆಯನ್ನು ದುರುದ್ದೇಶಪೂರ್ವಕವಾಗಿ 'ಎಡಿಟ್' ಮಾಡಲಾಗಿದೆ ಮತ್ತು 'ತಪ್ಪಾಗಿ ತಿರುಚಲಾಗಿದೆ' ಎಂದು ಡಿಎಂಕೆ ಹೇಳಿದೆ. ಅಲ್ಲದೆ ಅವರು ನಟಿಯ ಹೆಸರನ್ನು ಎಂದಿಗೂ ಉಚ್ಚರಿಸಿಲ್ಲ ಎಂದೂ ಅದು ಹೇಳಿದೆ.
'ಇದು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ. ಇದು ಪ್ರಪಂಚದಾದ್ಯಂತ ಅಸ್ತಿತ್ವದಲ್ಲಿದೆ. ಒಬ್ಬ ಮಹಿಳೆ ಕೆಲಸ ಮಾಡುತ್ತಿರಲಿ, ಯಶಸ್ವಿಯಾಗಿರಲಿ, ನಾಯಕಿಯರಾಗಿರಲಿ ಅಥವಾ ಅಧಿಕಾರ ಅಥವಾ ಯಾವುದೇ ಹುದ್ದೆಯಲ್ಲಿರಲಿ, ಆಕೆಯ ಚಾರಿತ್ರ್ಯದ ಮೇಲೆ ದಾಳಿ ಮಾಡುವ ಮೂಲಕ ಅವಳನ್ನು ಯಾವಾಗಲೂ ಕೆಳಗಿಳಿಸಲಾಗುತ್ತದೆ' ಎಂದು ಕಂಗನಾ ಹೇಳಿದರು.
'ಹಾಗಾದರೆ, ಮಹಿಳೆಯರ ಈ ರೀತಿಯ ವ್ಯಕ್ತಿತ್ವ ಹತ್ಯೆ ಯಾವಾಗ ನಿಲ್ಲುತ್ತದೆ? ಎಲ್ಲೋ, ನಾವು ಒಂದು ಸಮಾಜವಾಗಿ ನಮ್ಮೊಳಗೆ ನೋಡಬೇಕು ಮತ್ತು ನಾವು ಮಹಿಳೆಯರನ್ನು ಹೇಗೆ ನೋಡುತ್ತೇವೆ ಮತ್ತು ನಾವು ಅವರನ್ನು ನಿಜವಾಗಿಯೂ ಗೌರವಿಸುತ್ತೇವೆಯೇ ಎಂದು ಕೇಳಿಕೊಳ್ಳಬೇಕು' ಎಂದು ಅವರು ಹೇಳಿದರು.