

ರಾಯ್‌ಪುರ: ಭಾರತ ಸಂವಿಧಾನದ ಆಧಾರದ ಮೇಲೆ ನಡೆಯುತ್ತದೆಯೇ ಹೊರತು ಯಾರನ್ನೂ ಬಹಿಷ್ಕರಿಸುವುದರಿಂದಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರು ಸ್ಪಷ್ಟಪಡಿಸಿದ್ದಾರೆ.
ನವರಾತ್ರಿ ಹಬ್ಬದ ಸಂದರ್ಭದಲ್ಲಿ ಆಯೋಜಿಸಲಾಗುವ ಪ್ರಸಿದ್ಧ ಗರ್ಬಾ ಮತ್ತು ದಾಂಡಿಯಾ ನೃತ್ಯ ಕಾರ್ಯಕ್ರಮಗಳಿಗೆ ಮುಸ್ಲಿಂ ಸಮುದಾಯದವರ ಪ್ರವೇಶವನ್ನು ನಿಷೇಧಿಸಬೇಕು ಎಂಬ ಬೇಡಿಕೆಯನ್ನು ಸಚಿವರು ಬಲವಾಗಿ ತಳ್ಳಿಹಾಕಿದ್ದಾರೆ.
ಛತ್ತೀಸ್‌ಗಢದ ರಾಯ್‌ಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಬಹಿಷ್ಕಾರದ ನಿಲುವುಗಳು "ಅನ್ಯಾಯ ಮತ್ತು ಸಂಪೂರ್ಣ ಅಸಂವಿಧಾನಿಕ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೋಮು ಸೌಹಾರ್ದತೆ ಹಾಗೂ ವಿವಿಧ ಸಮುದಾಯಗಳ ನಡುವೆ ಪರಸ್ಪರ ಹಬ್ಬಗಳಲ್ಲಿ ಭಾಗವಹಿಸುವುದು ಭಾರತೀಯ ಸಮಾಜದ ಪ್ರಮುಖ ಲಕ್ಷಣಗಳಾಗಿವೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ವಿಎಚ್‌ಪಿ ನಾಯಕರು ಮೂರ್ತಿಪೂಜೆಯನ್ನು ಆಚರಿಸದವರು ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ದೂರವಿರಬೇಕು ಎಂದು ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ, ಇಂತಹ ನಿಲುವು “ಸಮರ್ಥನೀಯವಲ್ಲ” ಎಂದು ತಿಳಿಸಿದರು.
“ಭಾರತದಲ್ಲಿ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರೈಸ್ತರು, ಜೈನರು, ಬೌದ್ಧರು, ಲಿಂಗಾಯತರು, ಪಾರ್ಸಿಗಳು ಸೇರಿದಂತೆ ಹಲವು ಸಮುದಾಯಗಳು ವಾಸಿಸುತ್ತಿವೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನ ಎಲ್ಲರಿಗೂ ಸಮಾನ ನ್ಯಾಯ ಹಾಗೂ ರಕ್ಷಣೆಯನ್ನು ಒದಗಿಸುತ್ತದೆ.
ವಿವಿಧ ಧರ್ಮಗಳಿಗೆ ಸೇರಿದ ಜನರು ಪರಸ್ಪರರ ಹಬ್ಬ-ಹರಿದಿನಗಳಲ್ಲಿ ಭಾಗವಹಿಸುವ ಸಂಪೂರ್ಣ ಹಕ್ಕು ಹೊಂದಿದ್ದಾರೆ ಎಂದು ಹೇಳಿದ ಸಚಿವರು, ರಾಜಸ್ಥಾನದ ಅಜ್ಮೇರ್ ಷರೀಫ್ ದರ್ಗಾವನ್ನು ಇದಕ್ಕೆ ಉದಾಹರಣೆಯಾಗಿ ನೀಡಿದರು. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಭೇಟಿ ನೀಡುತ್ತಾರೆ ಎಂದು ತಿಳಿಸಿದರು.
ಜಾತಿ ಆಧಾರಿತ ಮೀಸಲಾತಿ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ಮಾತನಾಡಿ, ಮೀಸಲಾತಿಯನ್ನು ವಿರೋಧಿಸುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ದುರ್ಬಲ ಹಾಗೂ ಹಿಂದುಳಿದ ವರ್ಗಗಳನ್ನು ಸಬಲಗೊಳಿಸುವ ಉದ್ದೇಶದಿಂದಲೇ ಮೀಸಲಾತಿ ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಂವಿಧಾನದ 17ನೇ ವಿಧಿ ಅಸ್ಪೃಶ್ಯತೆಯನ್ನು ರದ್ದು ಪಡಿಸಿದ್ದರೂ, ದಲಿತರು ಮತ್ತು ಆದಿವಾಸಿಗಳ ಮೇಲಿನ ದೌರ್ಜನ್ಯಗಳು ಇನ್ನೂ ಮುಂದುವರಿದಿವೆ ಎಂದು ಹೇಳಿದರು.
ಸಮಾಜದಲ್ಲಿ ಜಾತೀಯತೆ ಸಂಪೂರ್ಣವಾಗಿ ನಿರ್ಮೂಲನೆಯಾದ ದಿನವೇ ಮೀಸಲಾತಿಯನ್ನು ತ್ಯಜಿಸಲು ಸಮುದಾಯಗಳು ಸಿದ್ಧವಾಗಲಿವೆ. ಅಲ್ಲಿಯವರೆಗೆ ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ವ್ಯವಸ್ಥೆ ಮುಂದುವರಿಯಬೇಕು ಎಂದು ಪ್ರತಿಪಾದಿಸಿದರು.