

ಢಾಕಾ: ಬಾಂಗ್ಲಾದೇಶದಲ್ಲಿ ಜೈಲುವಾಸ ಅನುಭವಿಸುತ್ತಿರುವ ಪ್ರಮುಖ ಹಿಂದೂ ಮುಖಂಡ ಚಿನ್ಮಯ್ ಕೃಷ್ಣ ದಾಸ್ ಅವರಿಗೆ ತಮ್ಮ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸ್ಥಳೀಯ ಆಡಳಿತ ಕೇವಲ 5 ಗಂಟೆಗಳ ಕಾಲ ಷರತ್ತುಬದ್ಧ ಪೆರೋಲ್ ಮಂಜೂರು ಮಾಡಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಜೈಲಿನಲ್ಲಿದ್ದ ಮಗನನ್ನು ಕೊನೆ ಬಾರಿ ನೋಡಬೇಕೆಂಬ ಬಯಸಿದ್ದರು. ಆದರೆ ಬದುಕಿದ್ದಾಗ ತಾಯಿಯನ್ನು ನೋಡಲು ಅಧಿಕಾರಿಗಳು ಅನುಮತಿ ನೀಡದಿರುವುದು ಕುಟುಂಬಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಚಿನ್ಮಯ್ ಕೃಷ್ಣ ದಾಸ್ ಅವರ 71 ವರ್ಷದ ತಾಯಿ ಸಂಧ್ಯಾ ರಾಣಿ ಧಾರ್ ಅವರು ಹತ್‌ಹಜಾರಿ ಆಸ್ಪತ್ರೆಯಲ್ಲಿ ನಿಧನರಾದರು. ತಾಯಿ ಗಂಭೀರ ಸ್ಥಿತಿಯಲ್ಲಿದ್ದಾಗ ಮಗನ ಭೇಟಿಗೆ ಪೆರೋಲ್ ನೀಡುವಂತೆ ಕುಟುಂಬಸ್ಥರು ಚಟ್ಟೋಗ್ರಾಮ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಆದರೆ ಅನಾರೋಗ್ಯ ಪೀಡಿತ ಸಂಬಂಧಿಕರನ್ನು ಭೇಟಿ ಮಾಡಲು ಪೆರೋಲ್ ನೀಡುವ ಅವಕಾಶವಿಲ್ಲ ಎಂದು ಆಡಳಿತ ಅರ್ಜಿ ತಿರಸ್ಕರಿಸಿತ್ತು.
ತಾಯಿ ನಿಧನರಾದ ನಂತರವಷ್ಟೇ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಚಟ್ಟೋಗ್ರಾಮ್ ಜಿಲ್ಲಾಧಿಕಾರಿ ಮೊಹಮ್ಮದ್ ಜಾಹಿದುಲ್ ಇಸ್ಲಾಂ ಮಿಯಾ ಅವರು 5 ಗಂಟೆಗಳ ಪೆರೋಲ್ ಮಂಜೂರು ಮಾಡಿದರು.
ಪೆರೋಲ್ ಪಡೆದು ಹೊರಬಂದ ಚಿನ್ಮಯ್ ದಾಸ್, ಚಟ್ಟೋಗ್ರಾಮ್‌ನ ಪುಂಡರೀಕ ಧಾಮ್ ದೇವಾಲಯದಲ್ಲಿ ರಾಧಾ-ಕೃಷ್ಣ ಮೂರ್ತಿಯ ಪಾದ ಸ್ಪರ್ಶಿಸಿ ಕಣ್ಣೀರಿಡುತ್ತಿರುವ ಭಾವುಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಅದೇ ಆವರಣದಲ್ಲಿ ಸಂಧ್ಯಾ ರಾಣಿ ಅವರ ಅಂತ್ಯಕ್ರಿಯೆ ನೆರವೇರಿತು.
‘ಬಾಂಗ್ಲಾದೇಶ ಸಮ್ಮಿಲಿತ ಸನಾತನಿ ಜಾಗರಣ ಜ್ಯೋತ್’ ಸಂಘಟನೆಯ ವಕ್ತಾರರಾಗಿದ್ದ ಚಿನ್ಮಯ್ ಕೃಷ್ಣ ದಾಸ್ ಅವರನ್ನು 2024ರ ನವೆಂಬರ್‌ನಲ್ಲಿ ದೇಶದ್ರೋಹದ ಆರೋಪದ ಮೇಲೆ ಬಂಧಿಸಲಾಗಿತ್ತು. ಶೇಖ್ ಹಸೀನಾ ಅವರ ಸರ್ಕಾರದ ಪತನದ ಬಳಿಕ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗಾಗಿ ಇವರು ಹಲವು ಪ್ರತಿಭಟನೆಗಳನ್ನು ಮುನ್ನಡೆಸಿದ್ದರು.