'ವಿದೇಶಿ ಪ್ರಭಾವವಿಲ್ಲ: UPI ವಹಿವಾಟಿನ ಮೇಲೆ ಶುಲ್ಕ ವಿಧಿಸಲು 'ಬಾಹ್ಯ ಒತ್ತಡ' ಕಾರಣವೆಂಬ ಆರೋಪ ತಳ್ಳಿಹಾಕಿದ ಕೇಂದ್ರ!

ಯುಪಿಐ ವಹಿವಾಟುಗಳ ಮೇಲೆ ವಿಧಿಸಲಾಗಿರುವ ಶುಲ್ಕವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಮಾಧಾನಪಡಿಸುವ ಗುರಿಯನ್ನು ಹೊಂದಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
UPI
ಯುಪಿಐ
Updated on

ಯುಪಿಐ ಪಾವತಿಗಳ ಮೇಲೆ ವ್ಯಾಪಾರಿ ರಿಯಾಯಿತಿ ದರ (ಎಂಡಿಆರ್) ಪರಿಚಯಿಸುವಿಕೆಯು ವಿದೇಶಿ ಪ್ರಭಾವದಿಂದ ಕೂಡಿದೆ ಎಂಬ ವಿಪಕ್ಷಗಳ ಹೇಳಿಕೆಯನ್ನು ಕೇಂದ್ರ ಸರ್ಕಾರ ಬುಧವಾರ ತಿರಸ್ಕರಿಸಿದೆ. ಹಣಕಾಸು ಸಚಿವಾಲಯವು ಭಾರತದ ಯುಪಿಐ ನೀತಿ ನಿರ್ಧಾರಗಳನ್ನು 'ಸ್ವತಂತ್ರವಾಗಿ' ತೆಗೆದುಕೊಳ್ಳಲಾಗಿದೆ ಮತ್ತು ಅದು ಗ್ರಾಹಕರಿಗೆ ಮುಕ್ತವಾಗಿ ಮುಂದುವರಿಯುತ್ತದೆ ಎಂದು ಹೇಳಿದೆ.

ಯುಪಿಐ ವಹಿವಾಟುಗಳ ಮೇಲೆ ವಿಧಿಸಲಾಗಿರುವ ಶುಲ್ಕವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಮಾಧಾನಪಡಿಸುವ ಗುರಿಯನ್ನು ಹೊಂದಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

'ಯುಪಿಐ ವಹಿವಾಟಿನ ಮೇಲಿನ ಎಂಡಿಆರ್ ವಿದೇಶಿ ಪ್ರಭಾವದಿಂದಾಗಿದೆ ಎಂದು ಹೇಳಲಾಗಿದೆ. ಆದರೆ, ಇದು ಸುಳ್ಳು. ಸ್ವಾವಲಂಬಿ, ಅಂತರ್ಗತ ಮತ್ತು ಕೈಗೆಟುಕುವ ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಸ್ಪಷ್ಟ ಗುರಿಯೊಂದಿಗೆ ಭಾರತದ ಯುಪಿಐ ನೀತಿ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳಲಾಗುತ್ತದೆ' ಎಂದು ಹೇಳಿಕೆ ತಿಳಿಸಿದೆ.

ಅಮೆರಿಕದ ಕಂಪನಿಗಳಾದ ವೀಸಾ ಮತ್ತು ಮಾಸ್ಟರ್‌ಕಾರ್ಡ್‌ಗೆ ಹಾನಿಯುಂಟಾಗುತ್ತಿದೆ ಎಂದು ಅಮೆರಿಕ ದೂರು ನೀಡಿದ್ದರಿಂದ ಸರ್ಕಾರ ಯುಪಿಐ/ರುಪೇ ಮೇಲೆ ಶುಲ್ಕವನ್ನು ಪರಿಚಯಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದ ನಂತರ ಸ್ಪಷ್ಟೀಕರಣ ನೀಡಿದೆ.

ಅಕ್ಟೋಬರ್ 15 ರಿಂದ, ₹2,000ಕ್ಕಿಂತ ಹೆಚ್ಚಿನ ಯುಪಿಐ ವಹಿವಾಟಿನ ಮೇಲೆ ಶೇ 0.4 ರಷ್ಟು ಎಂಡಿಆರ್ ಶುಲ್ಕ ವಿಧಿಸುತ್ತವೆ. ಆದಾಗ್ಯೂ, ಇದನ್ನು ವ್ಯಾಪಾರಿಗಳು ಪಾವತಿಸುತ್ತಾರೆ ಮತ್ತು ಗ್ರಾಹಕರು ಇದರಿಂದ ತೊಂದರೆಗೊಳಗಾಗುವುದಿಲ್ಲ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹೇಳಿದೆ.

ಉದಾಹರಣೆಗೆ, ಒಬ್ಬ ವ್ಯಾಪಾರಿ ₹10,000 UPI ಪಾವತಿಯನ್ನು ಸ್ವೀಕರಿಸಿದಾಗ 40 ರೂಪಾಯಿಯನ್ನು ಶುಲ್ಕವಾಗಿ ಪಾವತಿಸುತ್ತಾನೆ. UPI ಮೂಲಕ ಗ್ರಾಹಕರಿಂದ ತಿಂಗಳಿಗೆ 1 ಲಕ್ಷ ರೂ.ಗಳಿಗಿಂತ ಹೆಚ್ಚು ಹಣವನ್ನು ಪಡೆಯುವ ಅಂಗಡಿಯವನು ಅಥವಾ ಘಟಕವನ್ನು ವ್ಯಾಪಾರಿ ಎಂದು ವರ್ಗೀಕರಿಸಲಾಗುತ್ತದೆ.

UPI
'ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸಲು ದಾರಿ ಮಾಡಿಕೊಡಲಾಗಿದೆ': ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಆದಾಗ್ಯೂ, MDR ಶುಲ್ಕವನ್ನು ಪ್ರತಿ ವಹಿವಾಟಿಗೆ ₹300ಕ್ಕೆ ಮಿತಿಗೊಳಿಸಲಾಗಿದೆ. ಈ ಶುಲ್ಕ ವಿಧಿಸಿರುವುದನ್ನು ಹಿಂಪಡೆಯಲು ಒತ್ತಾಯಿಸಿರುವ ವಿರೋಧ ಪಕ್ಷಗಳ ಟೀಕೆಗಳ ನಡುವೆ, 'ವ್ಯಕ್ತಿಯಿಂದ ವ್ಯಕ್ತಿಗೆ ವರ್ಗಾವಣೆ' ಯಾವಾಗಲೂ ಉಚಿತವಾಗಿರುತ್ತದೆ ಎಂದು ಕೇಂದ್ರವು ಪುನರುಚ್ಚರಿಸಿತು.

ಪ್ರತ್ಯೇಕವಾಗಿ, ವ್ಯಾಪಾರಿಗಳು ಗ್ರಾಹಕರ ಮೇಲೆ ಹೊರೆಯನ್ನು ವರ್ಗಾಯಿಸದಂತೆ ನೋಡಿಕೊಳ್ಳಲು ಬ್ಯಾಂಕುಗಳಿಗೆ ಸೂಚಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. 'ಸ್ನೇಹಿತರಿಗೆ ಹಣ ಕಳುಹಿಸುವುದು, ಅಂಗಡಿಗಳಲ್ಲಿ ಪಾವತಿಸುವುದು ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡುವುದು ಈಗಲೂ ಉಚಿತವಾಗಿದೆ' ಎಂದು ಹೇಳಿಕೆ ತಿಳಿಸಿದೆ.

ಆದಾಗ್ಯೂ, ಈ ಕ್ರಮವು ಅಮೆರಿಕನ್ ಕಾರ್ಡ್ ಕಂಪನಿಗಳಿಗೆ ಲಾಭ ತರುವ ಉದ್ದೇಶವನ್ನು ಹೊಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ಈ ಕ್ರಮವನ್ನು 'ನರೇಂದ್ರ ಅವರ ಟ್ರಂಪ್ ಓಲೈಕೆ' ಎಂದು ಕರೆದಿದ್ದಾರೆ.

ಯುಪಿಐ ಅನ್ನು ಕಾರ್ಡ್‌ಗಳಷ್ಟೇ ದುಬಾರಿಯನ್ನಾಗಿ ಮಾಡಲು ಸರ್ಕಾರ ಉದ್ದೇಶಪೂರ್ವಕವಾಗಿ ಯುಪಿಐ ಶುಲ್ಕವನ್ನು ಶೇ 0.4 ರಷ್ಟು ನಿಗದಿಪಡಿಸಲಾಗಿದೆಯೇ?. ಡೆಬಿಟ್ ಕಾರ್ಡ್ ಶುಲ್ಕವೂ ಅಷ್ಟೇ ಇದೆ. ವೀಸಾ ಮತ್ತು ಮಾಸ್ಟರ್‌ಕಾರ್ಡ್‌ನಂತಹ ಅಮೆರಿಕನ್ ಕಂಪನಿಗಳು ಯುಪಿಐ ಜೊತೆ ಸ್ಪರ್ಧಿಸಲು ಇದನ್ನು ಇದನ್ನು ಮಾಡಲಾಗುತ್ತಿದೆಯೇ? ರಮೇಶ್ ಟ್ವೀಟ್ ಮಾಡಿದ್ದಾರೆ.

'ಶೂನ್ಯ MDR ಅನ್ನು ತೆಗೆದುಹಾಕಿ UPI ಗೆ ಶುಲ್ಕ ವಿಧಿಸಬೇಕೆಂಬ ಅಮೆರಿಕದ ಬೇಡಿಕೆಗೆ ಮೋದಿ ಸರ್ಕಾರ ಮಣಿದಿದೆ' ಎಂದು ಅವರು ಹೇಳಿದರು. ತಮ್ಮ ಹೇಳಿಕೆಯನ್ನು ಬಲಪಡಿಸಲು, ಭಾರತದಲ್ಲಿ UPI ಉಚಿತವಾಗಿದೆ ಎಂಬ ಅಮೆರಿಕದ ವ್ಯಾಪಾರ ಪ್ರತಿನಿಧಿಯ ಹಿಂದಿನ ಟೀಕೆಯನ್ನು ರಮೇಶ್ ಉಲ್ಲೇಖಿಸಿದರು.

ಕೇಂದ್ರದ ಈ ಕ್ರಮವು ಸರಕುಗಳ ಬೆಲೆಗಳನ್ನು ಹೆಚ್ಚಿಸುತ್ತದೆ. ಏಕೆಂದರೆ ವ್ಯಾಪಾರಿಗಳು ಗ್ರಾಹಕರಿಗೆ ತೆರಿಗೆಯನ್ನು ವರ್ಗಾಯಿಸಬಹುದು ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ಆದಾಗ್ಯೂ, ವಿದೇಶಿ ಒತ್ತಡದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಆರೋಪವನ್ನು ಸರ್ಕಾರ ಈಗ ತಳ್ಳಿಹಾಕಿದೆ. ಅಲ್ಲದೆ, ವ್ಯಾಪಾರಿಗಳಿಗೆ ಶೇ 95 ಕ್ಕಿಂತ ಹೆಚ್ಚು UPI ಪಾವತಿಗಳು ₹2,000ಗಿಂತ ಕಡಿಮೆಯಿವೆ. ಇದರಿಂದಾಗಿ ಬಹುಪಾಲು ಚಿಲ್ಲರೆ ವ್ಯಾಪಾರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸಚಿವಾಲಯವು ಒತ್ತಿಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com