TMC ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಆದೇಶಕ್ಕೆ ತೀವ್ರ ಆಕ್ರೋಶ; 'ಪ್ರತಿಭಟನೆಯೊಂದಿಗೆ' ಹೊಸ ಹೆಸರು, ಚಿಹ್ನೆ ಸಲ್ಲಿಸಿದ ಮಮತಾ ಬ್ಯಾನರ್ಜಿ!

ಗುರುವಾರ ರಾತ್ರಿ ಹೊರಡಿಸಿದ ಮಧ್ಯಂತರ ಆದೇಶದಲ್ಲಿ, ಎಐಟಿಸಿಯಲ್ಲಿನ ಬಣ ವಿವಾದದ ಹಿನ್ನೆಲೆಯಲ್ಲಿ ಮುಂಬರುವ ಪಶ್ಚಿಮ ಬಂಗಾಳ ಉಪಚುನಾವಣೆಗಳಲ್ಲಿ ಎರಡೂ ಬಣಗಳು ಪಕ್ಷದ ಹೆಸರು ಅಥವಾ ‘ಹೂವು ಮತ್ತು ಹುಲ್ಲು’ ಚಿಹ್ನೆಯನ್ನು ಬಳಸಬಾರದು.
Mamata Banerjee warns BJP as growing dissent grips TMC
ಮಮತಾ ಬ್ಯಾನರ್ಜಿ
Updated on

ಕೋಲ್ಕತ್ತಾ: ಮುಂಬರುವ ವಿಧಾನಸಭಾ ಉಪಚುನಾವಣೆಗಳ ಹಿನ್ನೆಲೆಯಲ್ಲಿ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಬಣವು ಚುನಾವಣಾ ಆಯೋಗಕ್ಕೆ (ECI) ತನ್ನ ಪರ್ಯಾಯ ಹೆಸರು ಮತ್ತು ಚಿಹ್ನೆಗಳ ಪಟ್ಟಿಯನ್ನು ಸಲ್ಲಿಸಿದೆ. ಇದೇ ವೇಳೆ ಚುನಾವಣಾ ಆಯೋಗದ ಈ ನಿರ್ದೇಶನಕ್ಕೆ ತೀವ್ರ ಪ್ರತಿಭಟನೆಯನ್ನೂ ದಾಖಲಿಸಿದೆ.

ಮೂಲಗಳ ಪ್ರಕಾರ, ಪಕ್ಷವು ಗುರುವಾರ ರಾತ್ರಿ 11.36ಕ್ಕೆ ಚುನಾವಣಾ ಆಯೋಗಕ್ಕೆ ಪರ್ಯಾಯ ಹೆಸರುಗಳು ಮತ್ತು ಚಿಹ್ನೆಗಳ ಆಯ್ಕೆಗಳನ್ನು ಇ-ಮೇಲ್ ಮೂಲಕ ಕಳುಹಿಸಿದ್ದು, ‘ತೀವ್ರ ವಿರೋಧದ ನಡುವೆಯೇ’ ಈ ಆಯ್ಕೆಗಳನ್ನು ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.

ಗುರುವಾರ ರಾತ್ರಿ ಹೊರಡಿಸಿದ ಮಧ್ಯಂತರ ಆದೇಶದಲ್ಲಿ, ಎಐಟಿಸಿಯಲ್ಲಿನ ಬಣ ವಿವಾದದ ಹಿನ್ನೆಲೆಯಲ್ಲಿ ಮುಂಬರುವ ಪಶ್ಚಿಮ ಬಂಗಾಳ ಉಪಚುನಾವಣೆಗಳಲ್ಲಿ ಎರಡೂ ಬಣಗಳು ಪಕ್ಷದ ಹೆಸರು ಅಥವಾ ‘ಹೂವು ಮತ್ತು ಹುಲ್ಲು’ ಚಿಹ್ನೆಯನ್ನು ಬಳಸಬಾರದು ಎಂದು ಚುನಾವಣಾ ಆಯೋಗ ನಿರ್ದೇಶಿಸಿತ್ತು. ಶುಕ್ರವಾರ ಬೆಳಗ್ಗೆಯೊಳಗೆ ತಮ್ಮ ಆಯ್ಕೆಯ ಹೆಸರು ಮತ್ತು ಚಿಹ್ನೆಗಳನ್ನು ಸಲ್ಲಿಸುವಂತೆಯೂ ಎರಡೂ ಬಣಗಳಿಗೆ ಸೂಚಿಸಿತ್ತು.

ಪ್ರಸ್ತಾವಿತ ಹೆಸರು ‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ ಹೆಸರಿಗೆ ಹೋಲಿಕೆಯಾಗಿರಬಹುದು ಎಂದು ಆಯೋಗ ತಿಳಿಸಿದೆ. ಆದರೆ, ಚುನಾವಣಾ ಚಿಹ್ನೆಯನ್ನು ಸ್ವತಂತ್ರ ಅಭ್ಯರ್ಥಿಗಳು ಹಾಗೂ ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ಲಭ್ಯವಿರುವ ಉಚಿತ ಅಥವಾ ಲಭ್ಯ ಚಿಹ್ನೆಗಳ ಪಟ್ಟಿಯಿಂದ ಆಯ್ಕೆ ಮಾಡಬೇಕಾಗುತ್ತದೆ ಎಂದು ಹೇಳಿದೆ.

ಅಕ್ಟೋಬರ್ 6ರಂದು ರೆಜಿನಗರ ಮತ್ತು ನಂದಿಗ್ರಾಮ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968ರ ಪ್ಯಾರಾಗ್ರಾಫ್ 15ರ ಅಡಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ಲಭ್ಯವಿರುವ ಸಮಯ ಸಾಕಾಗುತ್ತಿಲ್ಲ ಎಂದು ಆಯೋಗ ಹೇಳಿದೆ. ಆದರೆ, ಮುಂಬರುವ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷದ ಹೆಸರು ಮತ್ತು ಚಿಹ್ನೆಯ ತುರ್ತು ಅಗತ್ಯವನ್ನು ಗಮನದಲ್ಲಿಟ್ಟುಕೊಂಡಿರುವುದಾಗಿ ತಿಳಿಸಿದೆ.

Mamata Banerjee warns BJP as growing dissent grips TMC
TMC ಹೆಸರು, ಚಿಹ್ನೆ ಮುಟ್ಟುಗೋಲು: 'Vote chori, govt chori ಆಯ್ತು, ಈಗ ಪಾರ್ಟಿ ಚೋರಿ': ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಕಿಡಿ

ಮಧ್ಯಂತರ ವ್ಯವಸ್ಥೆಯನ್ನು ಮುಂಬರುವ ಉಪಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡೇ ಮಾಡಲಾಗಿದ್ದು, ಚಿಹ್ನೆಗಳ ಆದೇಶದ ಪ್ಯಾರಾಗ್ರಾಫ್ 15ರ ಅಡಿಯಲ್ಲಿ ವಿವಾದದ ಅಂತಿಮ ತೀರ್ಮಾನವಾಗುವವರೆಗೆ ಇದು ಜಾರಿಯಲ್ಲಿರಲಿದೆ ಎಂದು ಆಯೋಗ ತಿಳಿಸಿದೆ.

ಮೇ ತಿಂಗಳ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಟಿಎಂಸಿ ಶಾಸಕಾಂಗ ಪಕ್ಷದಲ್ಲಿ ಆರಂಭವಾದ ಬಂಡಾಯದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದ್ದು, ಬಳಿಕ ಈ ಬಿಕ್ಕಟ್ಟು ಸಂಸತ್ತಿಗೂ ವಿಸ್ತರಿಸಿತ್ತು.

ಜೂನ್‌ನಲ್ಲಿ 58 ಬಂಡಾಯ ಶಾಸಕರು ಉಚ್ಚಾಟಿತ ನಾಯಕ ಋತಬ್ರತ ಬ್ಯಾನರ್ಜಿಯನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದರು. ಮಮತಾ ಬಣದ ಅಭ್ಯರ್ಥಿ ಸೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ಬದಿಗೊತ್ತಿ ಈ ಆಯ್ಕೆ ನಡೆದಿದ್ದು, ವಿಧಾನಸಭಾ ಸ್ಪೀಕರ್ ಅವರಿಂದಲೂ ಮಾನ್ಯತೆ ಪಡೆದಿತ್ತು. ಇದು 28 ವರ್ಷಗಳ ಇತಿಹಾಸದಲ್ಲಿ ಪಕ್ಷದ ಮೊದಲ ವಿಭಜನೆಯಾಗಿತ್ತು.

ಐದು ದಿನಗಳ ಬಳಿಕ ಬಂಡಾಯ ಸಂಸತ್ತಿಗೂ ತಲುಪಿತ್ತು. ಹಿರಿಯ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದಲ್ಲಿ 20 ಲೋಕಸಭಾ ಸದಸ್ಯರು ಹೆಚ್ಚು ಪರಿಚಿತವಲ್ಲದ ಎನ್‌ಸಿಪಿಐಗೆ ಸೇರ್ಪಡೆಯಾಗಿ, ಬಿಜೆಪಿಯ ನೇತೃತ್ವದ ಎನ್‌ಡಿಎಗೆ ‘ಪ್ರತ್ಯೇಕ ಬಣ’ವಾಗಿ ಬೆಂಬಲ ನೀಡುವುದಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ಇದರಿಂದ ಪಕ್ಷದ ಸಂಸದೀಯ ಬಣದಲ್ಲಿನ ಬಿಕ್ಕಟ್ಟು ಮತ್ತಷ್ಟು ಗಂಭೀರವಾಗಿತ್ತು.

1998ರಲ್ಲಿ ಕಾಂಗ್ರೆಸ್‌ನಿಂದ ಬೇರ್ಪಟ್ಟು ಟಿಎಂಸಿ ಸ್ಥಾಪನೆಯಾದಾಗಿನಿಂದ ಮಮತಾ ಬ್ಯಾನರ್ಜಿ ಅವರ ಕೈಯಿಂದ ಬಿಡಿಸಿದ ಚುನಾವಣಾ ಚಿಹ್ನೆ ಪಕ್ಷದ ಪ್ರಮುಖ ಗುರುತಾಗಿ ಉಳಿದಿದೆ. ಕಳೆದ 28 ವರ್ಷಗಳಿಂದ ‘ಹೂವು ಮತ್ತು ಹುಲ್ಲು’ ಚಿಹ್ನೆಯು ಪಕ್ಷದ ತಳಮಟ್ಟದ ರಾಜಕೀಯ ಗುರುತಿನ ಪ್ರಮುಖ ಸಂಕೇತವಾಗಿ ಗುರುತಿಸಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com