ಮುಂಬೈ ಗಣೇಶೋತ್ಸವ ವೇಳೆ ದುರಂತ: ವಿದ್ಯುತ್ ತಗುಲಿ 8 ವರ್ಷದ ಬಾಲಕಿ ಸೇರಿ ಇಬ್ಬರ ಸಾವು!

ಭಾನುವಾರ ಮುಂಜಾನೆ ಸುಮಾರು 2.20ರ ವೇಳೆಗೆ ಕಲಾಚೌಕಿಯ ದತ್ತಾರಾಮ್ ಲಾಡ್ ಮಾರ್ಗದಲ್ಲಿರುವ ಕಾಲಾಚೌಕಿ ವಿಭಾಗ ಸಾರ್ವಜನಿಕ ಉತ್ಸವ ಮಂಡಳಿಯ ಗಣೇಶ ಮಂಟಪದ ಸಮೀಪ ಈ ಘಟನೆ ಸಂಭವಿಸಿದೆ.
electrocution near Ganapati pandal in Mumbai
ಮುಂಬೈ ಗಣೇಶೋತ್ಸವ ವೇಳೆ ವಿದ್ಯುತ್ ಸ್ಪರ್ಶಿಸಿ ದುರಂತ
Updated on

ಮುಂಬೈ: ಗಣೇಶೋತ್ಸವದ ಸಂಭ್ರಮದ ನಡುವೆ ಮುಂಬೈನ ಲಾಲ್‌ಬಾಗ್ ಪ್ರದೇಶದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ 8 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಭಾನುವಾರ ಮುಂಜಾನೆ ಸುಮಾರು 2.20ರ ವೇಳೆಗೆ ಕಲಾಚೌಕಿಯ ದತ್ತಾರಾಮ್ ಲಾಡ್ ಮಾರ್ಗದಲ್ಲಿರುವ ಕಾಲಾಚೌಕಿ ವಿಭಾಗ ಸಾರ್ವಜನಿಕ ಉತ್ಸವ ಮಂಡಳಿಯ ಗಣೇಶ ಮಂಟಪದ ಸಮೀಪ ಈ ಘಟನೆ ಸಂಭವಿಸಿದೆ.

ಗಣೇಶೋತ್ಸವ ಹಿನ್ನೆಲೆಯಲ್ಲಿ ಲಾಲ್‌ಬಾಗ್ ಪ್ರದೇಶದಲ್ಲಿ ಭಾರಿ ಜನಸಂದಣಿ ಇದ್ದ ಸಮಯದಲ್ಲೇ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಜಾನೆ 2.42ಕ್ಕೆ ಮುಂಬೈ ಅಗ್ನಿಶಾಮಕ ದಳಕ್ಕೆ ಘಟನೆ ಕುರಿತು ಮಾಹಿತಿ ನೀಡಲಾಗಿತ್ತು. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಬೃಹನ್‌ಮುಂಬೈ ಎಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್‌ಪೋರ್ಟ್ (BEST) ಸಿಬ್ಬಂದಿ ಹಾಗೂ ನಾಗರಿಕ ವಾರ್ಡ್ ಕಚೇರಿ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಯಿತು.

electrocution near Ganapati pandal in Mumbai
ಟಿ ನರಸೀಪುರ ಗಣೇಶ ಶೋಭಾಯಾತ್ರೆ: ಸಿಡಿದೆದ್ದ ಕಾಂಗ್ರೆಸ್; ಪ್ರತಾಪ್ ಸಿಂಹ ಸೇರಿ ಹಲವರ ವಿರುದ್ಧ ಮೈಸೂರು SPಗೆ ದೂರು

ಘಟನಾ ಸ್ಥಳದಲ್ಲಿದ್ದ ಪೊಲೀಸರಿಂದ ಲಭ್ಯವಾದ ಮಾಹಿತಿಯ ಪ್ರಕಾರ, ಐವರು ಗಾಯಾಳುಗಳನ್ನು ಬೈಕುಲ್ಲಾದ ಮಸೀನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇತರ ಗಾಯಾಳುಗಳನ್ನು ಪರೇಲ್‌ನ ಗ್ಲೋಬಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮಸೀನಾ ಆಸ್ಪತ್ರೆಗೆ ದಾಖಲಿಸಲಾಗಿದ್ದ 8 ವರ್ಷದ ರಾಘ್ನಿ ಘನಶ್ಯಾಮ್ ಯಾದವ್ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಇನ್ನು ಕಿರಣ್ ಅಕ್ಬರ್ ನಾಯಕ್ (19), ತನ್ವಿ ನರ್ಶ್ ಹಂಡೆ (19), ಸಾಹಿಲ್ ಸಂದೀಪ್ ತಾರೆ (19) ಮತ್ತು ರುಹಿ ಸಿಂಗ್ (12) ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಆರೋಗ್ಯ ಸ್ಥಿತಿಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಗಣೇಶೋತ್ಸವದ ಹಿನ್ನೆಲೆಯಲ್ಲಿ ಲಾಲ್‌ಬಾಗ್ ಪ್ರದೇಶದಲ್ಲಿ ಭಾರಿ ಜನಸಂದಣಿ ಇದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಘಟನೆಯ ಕುರಿತು ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆಗಳು ಪರಿಶೀಲನೆ ನಡೆಸುತ್ತಿವೆ.

ಮನೆಗೆ ವಾಪಸ್ ಆಗುತ್ತಿದ್ದ ವೇಳೆ ದುರಂತ: ತಾಯಿ ಅಳಲು

ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಬಾಲಕಿಯ ಚಿಕ್ಕಮ್ಮ ಕಿಸ್ಮತಿ ಯಾದವ್ ಅವರು ಘಟನೆಯ ಕುರಿತು ಮಾತನಾಡಿದ್ದು, ರಾತ್ರಿ ಸುಮಾರು 2 ಗಂಟೆಗೆ ತಾವು ಅಲ್ಲಿನ ಸರದಿಯಲ್ಲಿ ಇದ್ದೆವು ಎಂದು ಹೇಳಿದ್ದಾರೆ.

“ಸುಮಾರು 2.40ರ ವೇಳೆಗೆ ಘಟನೆ ಸಂಭವಿಸಿತು. ಆದರೆ ಭಾರಿ ಜನಸಂದಣಿ ಕಂಡು ನಾವು ವಾಪಸ್ ಹೋಗುವ ಬಗ್ಗೆ ಯೋಚಿಸುತ್ತಿದ್ದೆವು. ನಮಗೆ ಗಣೇಶನ ದರ್ಶನ ಪಡೆಯುವ ಉದ್ದೇಶವೂ ಇರಲಿಲ್ಲ. ಪಕ್ಕದ ರಸ್ತೆಯ ಮೂಲಕ ಮನೆಗೆ ತೆರಳುತ್ತಿದ್ದೆವು” ಎಂದು ಹೇಳಿದ್ದಾರೆ.

ಜನದಟ್ಟಣೆ ಕಡಿಮೆಯಾಗುವವರೆಗೆ ಕಾಯಲು ಮಂಟಪದ ಹೊರಭಾಗದಲ್ಲಿದ್ದ ಅಂಗಡಿಯೊಂದರ ಬಳಿ ನಿಂತಿದ್ದೆವು ಎಂದು ಕಿಸ್ಮತಿ ತಿಳಿಸಿದ್ದಾರೆ.

“ಮಂಟಪದ ಬಳಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಅಲ್ಲಿ ಸುರಕ್ಷತೆಯ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕಿತ್ತು. ಇಷ್ಟೊಂದು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತೀರಿ, ಆದರೆ ಸುರಕ್ಷತಾ ವ್ಯವಸ್ಥೆ ಮಾತ್ರ ಇಲ್ಲ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟ ಬಾಲಕಿಯನ್ನು ನೆನೆದು ಭಾವುಕರಾದ ಅವರು, “ನಾವು ಕಳೆದುಕೊಂಡ ಮಗುವನ್ನು ಮತ್ತೆ ಯಾರಿಂದಲೂ ಮರಳಿ ತರಲು ಸಾಧ್ಯವಿಲ್ಲ” ಎಂದು ನೋವು ತೋಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com