ಮುಂಬೈ ಕೋಸ್ಟಲ್ ರೋಡ್‌ನಲ್ಲಿ ಭೀಕರ ಅಪಘಾತ; 75 ಅಡಿ ಕೆಳಗೆ ಬಿದ್ದ BMW ಕಾರು, 3 ವಿದ್ಯಾರ್ಥಿಗಳ ಸಾವು! Video

ಮುಂಬೈನ ಮುಂಬೈ ಕೋಸ್ಟಲ್ ರೋಡ್‌ನಲ್ಲಿ ಭಾನುವಾರ ಮುಂಜಾನೆ ಈ ಘಟನೆ ನಡೆದಿದ್ದು, ಬೆಳಗ್ಗೆ ಸುಮಾರು 5.20ರ ವೇಳೆಗೆ ಲೋಟಸ್ ಜೆಟ್ಟಿ ಬಳಿ, ಲಾಲಾ ಲಜಪತ್‌ರಾಯ್ ಕಾಲೇಜು ಎದುರು ಈ ಅಪಘಾತ ಸಂಭವಿಸಿದೆ.
BMW crashes on Mumbai Coastal Road
ಮುಂಬೈ ಕೋಸ್ಟಲ್ ಅಪಘಾತ
Updated on

ಮುಂಬೈ: ವೇಗವಾಗಿ ಚಲಿಸುತ್ತಿದ್ದ BMW ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಸೇತುವೆ ಮೇಲಿಂದ ಸುಮಾರು 75 ಅಡಿ ಕೆಳಗೆ ಬಿದ್ದಿದ್ದು, ಪರಿಣಾಮ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಭೀಕರ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ಮುಂಬೈ ಕೋಸ್ಟಲ್ ರೋಡ್‌ನಲ್ಲಿ ಭಾನುವಾರ ಮುಂಜಾನೆ ಈ ಘಟನೆ ನಡೆದಿದ್ದು, ಬೆಳಗ್ಗೆ ಸುಮಾರು 5.20ರ ವೇಳೆಗೆ ಲೋಟಸ್ ಜೆಟ್ಟಿ ಬಳಿ, ಲಾಲಾ ಲಜಪತ್‌ರಾಯ್ ಕಾಲೇಜು ಎದುರು ಈ ಅಪಘಾತ ಸಂಭವಿಸಿದೆ.

ಮುಂಬೈ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಕಾರು ಮರೀನ್ ಡ್ರೈವ್‌ನಿಂದ ಹಾಜಿ ಅಲಿ ಕಡೆಗೆ ತೆರಳುತ್ತಿತ್ತು. ಸೇತುವೆ ಮೇಲೆ ತೆರಳುತ್ತಿದ್ದ ಕಾರು ಅತಿವೇಗದಲ್ಲಿ ಚಲಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ.

ಬಳಿಕ BMW ಡಿವೈಡರ್‌ಗೆ ಡಿಕ್ಕಿ ಹೊಡೆದು ಎಲಿವೇಟೆಡ್ ರಸ್ತೆಯಿಂದ ಕೆಳಗೆ ಹಾರಿ ಬಿದ್ದಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ಬಳಿಕ BMW ಸುಮಾರು 75 ಅಡಿ ಕೆಳಗೆ ಬಿದ್ದಿದೆ.

BMW crashes on Mumbai Coastal Road
ಶಾಲಾ ಮೆಟ್ಟಿಲು ಹತ್ತುವ ವೇಳೆ ಕಾಲುಜಾರಿ ಬಿದ್ದು 4ನೇ ತರಗತಿ ವಿದ್ಯಾರ್ಥಿನಿ ಸಾವು; Video Viral

ಅಪಘಾತದ ಬಳಿಕ ಕಾರಿನಲ್ಲಿದ್ದ ನಾಲ್ವರನ್ನು ತಕ್ಷಣವೇ ಬೃಹನ್‌ಮುಂಬೈ ಮಹಾನಗರ ಪಾಲಿಕೆಯ ನಾಯರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಈ ವೇಳೆಗಾಗಲೇ ಮೂವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ನಾಲ್ಕನೇ ವ್ಯಕ್ತಿಯನ್ನು ಆಸ್ಪತ್ರೆಯ ಟ್ರಾಮಾ ವಾರ್ಡ್‌ಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.

ಮೃತರನ್ನು ಶನಾಯ್ ಗಜ್ಜಲ್ (21), ಧಿರ್ಯಾ ಸೇಠ್ (17) ಮತ್ತು ಆದಿತ್ಯ ಜಕಸಾನಿಯಾ (19) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ವ್ಯಕ್ತಿಯನ್ನು ಆದಿತ್ಯ ಓಸ್ವಾಲ್ (23) ಎಂದು ಗುರುತಿಸಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ.

ಎಲ್ಲರೂ ವಿದ್ಯಾರ್ಥಿಗಳೇ

ಕಾರಿನಲ್ಲಿದ್ದ ನಾಲ್ವರೂ ವಿದ್ಯಾರ್ಥಿಗಳಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅತಿವೇಗದ ಚಾಲನೆಯಿಂದ ಚಾಲಕನ ನಿಯಂತ್ರಣ ತಪ್ಪಿತೇ ಎಂಬುದೂ ಸೇರಿದಂತೆ ಅಪಘಾತದ ಎಲ್ಲ ಆಯಾಮಗಳನ್ನು ಪರಿಶೀಲಿಸಲಾಗುತ್ತಿದೆ.

ಅಂದಹಾಗೆ ಮುಂಬೈ ಕೋಸ್ಟಲ್ ರೋಡ್ 10.58 ಕಿಲೋಮೀಟರ್ ಉದ್ದದ ಹೈಸ್ಪೀಡ್ ಕಾರಿಡಾರ್ ಆಗಿದ್ದು, ದಕ್ಷಿಣ ಮುಂಬೈನ ಮರೀನ್ ಡ್ರೈವ್‌ ಅನ್ನು ಬಾಂದ್ರಾ-ವರ್ಲಿ ಸೀ ಲಿಂಕ್‌ನ ವರ್ಲಿ ತುದಿಗೆ ಸಂಪರ್ಕಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com