

ಮುಂಬೈ: IIT ಬಾಂಬೆಯ 2ನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಾಕೋಡೆ ಆತ್ಮಹತ್ಯೆ ಮಾಡಿಕೊಂಡ ಬಳಿಕ ನಡೆದ ಪ್ರತಿಭಟನೆ ಶೈಕ್ಷಣಿಕ ಅಕ್ರಮ ಅಥವಾ ಚೀಟಿಂಗ್ ಅನ್ನು ಸಮರ್ಥಿಸುವ ಉದ್ದೇಶ ಹೊಂದಿರಲಿಲ್ಲ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಹೇಳಿದ್ದಾರೆ.
ಸಾಹಿಲ್ ಸಾವಿನ ಕುರಿತು ಸಂಸ್ಥೆಯ ಹೊಣೆಗಾರಿಕೆ, ವ್ಯವಸ್ಥೆಯಲ್ಲಿನ ಲೋಪಗಳು ಹಾಗೂ ಸುಧಾರಣೆಗಳ ಅಗತ್ಯದ ಬಗ್ಗೆ ಗಮನ ಸೆಳೆಯುವುದೇ ಪ್ರತಿಭಟನೆಯ ಉದ್ದೇಶವಾಗಿತ್ತು ಎಂದು IIT ಬಾಂಬೆ ವಿದ್ಯಾರ್ಥಿ ಪ್ರತಿನಿಧಿಗಳು ಸ್ಪಷ್ಟಪಡಿಸಿದ್ದಾರೆ.
ಸೆಪ್ಟೆಂಬರ್ 21ರಂದು ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು, ತಾವು ಚೀಟಿಂಗ್ ಅಥವಾ ಯಾವುದೇ ರೀತಿಯ ಶೈಕ್ಷಣಿಕ ಅಕ್ರಮವನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಆದರೆ ಸಾಹಿಲ್ ಸಾವಿನ ಘಟನೆ ಸಂಸ್ಥೆಯಲ್ಲಿನ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳನ್ನು ಮತ್ತೊಮ್ಮೆ ಪರಿಶೀಲಿಸುವಂತೆ ವಿದ್ಯಾರ್ಥಿಗಳನ್ನು ಪ್ರೇರೇಪಿಸಿದೆ ಎಂದು ಹೇಳಿದ್ದಾರೆ.
IIT ಬಾಂಬೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಪ್ರತಿಭಟನೆ ಹಾಗೂ ಸಂಸ್ಥೆಯ ಆಡಳಿತ ವ್ಯವಹಾರಗಳ ಡೀನ್ ಪ್ರೊಫೆಸರ್ ಸೂರ್ಯನಾರಾಯಣ ದೂಳ್ಲಾ ಅವರನ್ನು ಆ ಸ್ಥಾನದಿಂದ ತೆರವುಗೊಳಿಸಿದ ಕೆಲವೇ ಗಂಟೆಗಳ ಬಳಿಕ ಈ ಹೇಳಿಕೆ ಹೊರಬಿದ್ದಿದೆ. ತನಿಖೆ ಮುಂದುವರಿಯುವವರೆಗೆ ದೂಳ್ಲಾ ಅವರು ಪ್ರಾಧ್ಯಾಪಕರಾಗಿ ಮುಂದುವರಿಯಲಿದ್ದಾರೆ ಎಂದು IIT ಬಾಂಬೆ ತಿಳಿಸಿದೆ.
ಚೀಟಿಂಗ್ ಬಗ್ಗೆ ಅಲ್ಲ, ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಪ್ರತಿಭಟನೆ
ಸೆಪ್ಟೆಂಬರ್ 18ರಂದು ಪರೀಕ್ಷೆ ನಡೆಯುತ್ತಿದ್ದ ವೇಳೆ ನಡೆದ ಘಟನೆಯ ಬಳಿಕ ಸಾಹಿಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಪರೀಕ್ಷೆ ವೇಳೆ ಸಾಹಿಲ್ ಮೊಬೈಲ್ ಫೋನ್ ಬಳಸಿದ್ದು ಹಾಗೂ ಉತ್ತರ ಪಡೆಯಲು ಪ್ರಶ್ನೆಪತ್ರಿಕೆಯನ್ನು ChatGPTಗೆ ಅಪ್‌ಲೋಡ್ ಮಾಡಿದ್ದರು ಎಂದು IIT ಬಾಂಬೆ ಆರಂಭದಲ್ಲಿ ತಿಳಿಸಿತ್ತು. ಘಟನೆಯ ಬಳಿಕ ಅವರಿಗೆ ಕೌನ್ಸೆಲಿಂಗ್ ನೀಡಲಾಗಿತ್ತು ಹಾಗೂ ಯಾವುದೇ ಶಿಸ್ತುಕ್ರಮ ಆರಂಭಿಸಿರಲಿಲ್ಲ ಎಂದು ಸಂಸ್ಥೆ ಹೇಳಿತ್ತು.
ಬಳಿಕ ಸಾಹಿಲ್ ಸಾವಿನ ಸುತ್ತಲಿನ ಬೆಳವಣಿಗೆಗಳು ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವಾದವು. ಘಟನೆಯನ್ನು ಸಂಸ್ಥೆ ನಿರ್ವಹಿಸಿದ ರೀತಿಯನ್ನು ವಿದ್ಯಾರ್ಥಿಗಳು ಪ್ರಶ್ನಿಸಿದ್ದು, ವಿದ್ಯಾರ್ಥಿಗಳ ಅಭಿವೃದ್ಧಿ, ಮಾನಸಿಕ ಆರೋಗ್ಯ ಬೆಂಬಲ, ವಿದ್ಯಾರ್ಥಿ ಪ್ರತಿನಿಧಿತ್ವ ಮತ್ತು ಸಂಸ್ಥೆಯ ಹೊಣೆಗಾರಿಕೆ ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದರು. ತಮ್ಮ ಇತ್ತೀಚಿನ ಹೇಳಿಕೆಯಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ಶೈಕ್ಷಣಿಕ ಅಕ್ರಮ ಮತ್ತು ಪ್ರತಿಭಟನೆಯ ವೇಳೆ ಎತ್ತಲಾದ ವಿಷಯಗಳ ನಡುವೆ ಸ್ಪಷ್ಟ ವ್ಯತ್ಯಾಸವಿದೆ ಎಂದು ತಿಳಿಸಿದ್ದಾರೆ.
“ಚೀಟಿಂಗ್ ಅಥವಾ ಯಾವುದೇ ರೀತಿಯ ಶೈಕ್ಷಣಿಕ ಅಕ್ರಮವನ್ನು ನಾವು ಸಮರ್ಥಿಸುವುದಿಲ್ಲ. ಪ್ರತಿಭಟನೆ ಹಲವು ಸಮಯದಿಂದ ಅಸ್ತಿತ್ವದಲ್ಲಿದ್ದ ವ್ಯವಸ್ಥೆಯಲ್ಲಿನ ಸಮಸ್ಯೆಗಳ ಬಗ್ಗೆ ಕಳವಳ ವ್ಯಕ್ತಪಡಿಸುವ ಸಾಮೂಹಿಕ ಪ್ರಯತ್ನವಾಗಿದೆ” ಎಂದು ಅವರು ಹೇಳಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ವಿದ್ಯಾರ್ಥಿಗಳು ಹಲವು ಬೇಡಿಕೆಗಳನ್ನು ರೂಪಿಸಿ IIT ಬಾಂಬೆ ನಿರ್ದೇಶಕ ಶಿರೀಶ್ ಕೇದಾರ್ ಅವರ ಮುಂದೆ ಅಧಿಕೃತವಾಗಿ ಮಂಡಿಸಿದ್ದರು. ನಿರ್ದೇಶಕರು ಬೇಡಿಕೆಗಳನ್ನು ಅಂಗೀಕರಿಸಿ ಸಹಿ ಹಾಕಿದ್ದು, ನಿಗದಿತ ಅವಧಿಯಲ್ಲಿ ಅವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಸಲ್ಲಿಸಿದ್ದ 18 ಅಂಶಗಳ ಬೇಡಿಕೆ ಪತ್ರದಲ್ಲಿ ಸಂಸ್ಥೆಯ ಹೊಣೆಗಾರಿಕೆ, ವಿದ್ಯಾರ್ಥಿ ಪ್ರತಿನಿಧಿತ್ವ, ಮಾನಸಿಕ ಆರೋಗ್ಯ ಮತ್ತು ವೈದ್ಯಕೀಯ ನೆರವು ಹಾಗೂ ವಿದ್ಯಾರ್ಥಿಗಳ ಸಂಕಷ್ಟಗಳನ್ನು ಪರಿಶೀಲಿಸಲು ಸ್ವತಂತ್ರ ವ್ಯವಸ್ಥೆ ಸೇರಿದಂತೆ ಹಲವು ಬೇಡಿಕೆಗಳಿದ್ದವು ಎಂದು ವರದಿಗಳು ತಿಳಿಸಿವೆ.
ಪ್ರೊಫೆಸರ್ ದೂಳ್ಲಾ ವಿಚಾರದಲ್ಲೂ ಸ್ಪಷ್ಟನೆ
ಸಾಹಿಲ್ ಮೊಬೈಲ್ ಫೋನ್ ಬಳಸಿದ್ದರೆಂದು ಆರೋಪಿಸಲಾದ ಪರೀಕ್ಷೆಯ ಮೇಲ್ವಿಚಾರಕರಾಗಿದ್ದ ಪ್ರೊಫೆಸರ್ ಸೂರ್ಯನಾರಾಯಣ ದೂಳ್ಲಾ ಅವರನ್ನು ಸುತ್ತುವರೆದ ವಿವಾದದ ಬಗ್ಗೆಯೂ ವಿದ್ಯಾರ್ಥಿ ಪ್ರತಿನಿಧಿಗಳು ಸ್ಪಷ್ಟನೆ ನೀಡಿದ್ದಾರೆ.
“ಪ್ರೊಫೆಸರ್ ಸೂರ್ಯನಾರಾಯಣ ದೂಳ್ಲಾ ಅವರ ವಿಚಾರದಲ್ಲಿ ನಮ್ಮ ನಿಲುವು ಎಂದಿಗೂ ಅವರ ತಪ್ಪನ್ನು ಪೂರ್ವನಿರ್ಧರಿಸುವ ಅಥವಾ ತನಿಖೆಗೂ ಮುನ್ನವೇ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸುವುದಾಗಿರಲಿಲ್ಲ” ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ದೂಳ್ಲಾ ಅವರು ತಮ್ಮ ಅಧ್ಯಾಪಕರ ಸಮುದಾಯದ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಅವರ ಪರವಾಗಿ ತಾವು ನಿಲ್ಲುತ್ತೇವೆ. ಅವರ ವಿರುದ್ಧ ನಡೆಯುತ್ತಿರುವ ತನಿಖೆ ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
ತನಿಖೆ ನಡೆಯುತ್ತಿರುವ ಅವಧಿಯಲ್ಲಿ ದೂಲ್ಲಾ ಅವರನ್ನು ಆಡಳಿತ ವ್ಯವಹಾರಗಳ ಡೀನ್ ಹುದ್ದೆಯ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು ಎಂಬುದಷ್ಟೇ ತಮ್ಮ ಬೇಡಿಕೆಯಾಗಿತ್ತು. ತನಿಖೆ ಸ್ವತಂತ್ರವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಇದು ಮುನ್ನೆಚ್ಚರಿಕಾ ಕ್ರಮ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಸೋಮವಾರ IIT ಬಾಂಬೆ ದೂಳ್ಲಾ ಅವರನ್ನು ಡೀನ್ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ತೆರವುಗೊಳಿಸಿದೆ. ಸಾಹಿಲ್ ಸಾವಿನ ಕುರಿತು ಸಂಸ್ಥೆ ಈ ಹಿಂದೆ ನೀಡಿದ್ದ ಸಂವಹನದ ಕೆಲವು ಅಂಶಗಳಿಗೆ ಕ್ಷಮೆಯಾಚಿಸಿದ್ದು, ಘಟನೆಯ ಸುತ್ತಲಿನ ವಿವರಗಳ ಕುರಿತು ತನಿಖೆ ಮುಂದುವರಿದಿದೆ ಎಂದು ತಿಳಿಸಿದೆ.
ಸಾಹಿಲ್ ಕುಟುಂಬದಿಂದ ಜಾತಿ ತಾರತಮ್ಯದ ಆರೋಪ
ಈ ಪ್ರಕರಣದಲ್ಲಿ ಜಾತಿ ತಾರತಮ್ಯದ ಆರೋಪವೂ ಕೇಳಿಬಂದಿದೆ. ಸಾಹಿಲ್ ಅವರ ಪೋಷಕರು ಕ್ಯಾಂಪಸ್‌ನಲ್ಲಿ ತಮ್ಮ ಮಗ ಜಾತಿ ಆಧಾರಿತ ತಾರತಮ್ಯ ಮತ್ತು ಕಿರುಕುಳಕ್ಕೆ ಒಳಗಾಗಿದ್ದ ಎಂದು ಆರೋಪಿಸಿದ್ದಾರೆ. ಆದರೆ ಸಾಹಿಲ್ ಅವರು ಜಾತಿ ತಾರತಮ್ಯದ ಕುರಿತು ತಮ್ಮ ಎಸ್‌ಸಿ-ಎಸ್‌ಟಿ ಸೆಲ್ ಅಥವಾ ಆಡಳಿತಕ್ಕೆ ಯಾವುದೇ ದೂರು ಸಲ್ಲಿಸಿರಲಿಲ್ಲ ಎಂದು IIT ಬಾಂಬೆ ತಿಳಿಸಿದೆ.
ಸಾಹಿಲ್ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ದೂಳ್ಲಾ ಅವರನ್ನು ಹೆಸರಿಸಿ ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಆತ್ಮಹತ್ಯೆಗೆ ಪ್ರಚೋದನೆಗೆ ಸಂಬಂಧಿಸಿದ ಸೆಕ್ಷನ್ 108 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಈ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸಾಹಿಲ್ ಅವರ ಕುಟುಂಬ ಮಾಡಿರುವ ಜಾತಿ ತಾರತಮ್ಯ ಸೇರಿದಂತೆ ಇತರ ಆರೋಪಗಳು ಸದ್ಯ ತನಿಖೆಯಲ್ಲಿದ್ದು, ಅವುಗಳ ಕುರಿತು ಅಂತಿಮ ತೀರ್ಮಾನ ಇನ್ನಷ್ಟೇ ಹೊರಬರಬೇಕಿದೆ.