

ನವದೆಹಲಿ: ಸುಮಾರು ಒಂದೂವರೆ ವರ್ಷದ ತರುವಾಯು ಪ್ರಧಾನಿ ನರೇಂದ್ರ ಮೋದಿಯವರು ಇದೇ ಡಿಸೆಂಬರ್ ತಿಂಗಳಿನಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದ್ದು, ಈ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 14 ಮತ್ತು 15 ರಂದು ಫ್ಲೋರಿಡಾದ ಮಿಯಾಮಿ ರೆಸಾರ್ಟ್‌ನಲ್ಲಿ ನಡೆಯಲಿರುವ G20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅಮೆರಿಕಕ್ಕೆ ತೆರಳಲಿದ್ದು, ಈ ವೇಳೆಯೇ, ಕ್ವಾಡ್ ನಾಯಕರ ಸಭೆಯು ನಡೆಯಲಿದೆ ಎಂದು ವರದಿಯಾಗಿದೆ. ಆ ಕುರಿತ ವರದಿ ಇಲ್ಲಿದೆ:
ಟ್ರಂಪ್ ಜೊತೆ ದ್ವಿಪಕ್ಷೀಯ ಮಾತುಕತೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಈ ಬಾರಿ ಜಿ-20 ಶೃಂಗಸಭೆ ನಡೆಯುತ್ತಿದ್ದು, ಇದರ ಮಧ್ಯೆ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವೆ ಪ್ರಮುಖ ದ್ವಿಪಕ್ಷೀಯ ಮಾತುಕತೆ ನಡೆಯುವ ನಿರೀಕ್ಷೆಯಿದೆ. ಅದರಲ್ಲೂ, ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಆಮದುಗಳ ಮೇಲೆ ನೂರರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿರುವ ಸಮಯದಲ್ಲೇ ಈ ಸಂಭಾವ್ಯ ಭೇಟಿ ಚರ್ಚೆಗೆ ಬಂದಿದೆ. ಈ ಹಿಂದೆ ಜೂನ್ ತಿಂಗಳಲ್ಲಿ ಫ್ರಾನ್ಸ್‌ನ ಇವಿಯಾನ್‌ನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಮೋದಿ ಮತ್ತು ಟ್ರಂಪ್ ಭೇಟಿಯಾಗಿದ್ದರು. ವ್ಯಾಪಾರ, ರಕ್ಷಣೆ, ಇಂಧನ ಹಾಗೂ ತಂತ್ರಜ್ಞಾನ ಕ್ಷೇತ್ರದ ಸಹಕಾರದ ಬಗ್ಗೆ ಉಭಯ ನಾಯಕರು ನಿರಂತರ ಸಮಾಲೋಚನೆ ನಡೆಸುತ್ತಿದ್ದಾರೆ. ಪ್ರಸ್ತುತ 240 ಬಿಲಿಯನ್ ಡಾಲರ್ ಇರುವ ದ್ವಿಪಕ್ಷೀಯ ವ್ಯಾಪಾರವನ್ನು 500 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಎರಡೂ ದೇಶಗಳು ಹೊಂದಿವೆ.
ಮುಂದುವರೆದು, ಪ್ರಧಾನಿ ಮೋದಿಯವರ ಪ್ರವಾಸದ ಕುರಿತು ಭಾರತ ಸರ್ಕಾರದ ವಿದೇಶಾಂಗ ಇಲಾಖೆಯಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಆದಾಗ್ಯೂ, ಅವರ ಭೇಟಿಗೆ ಸಂಬಂಧಿಸಿದಂತೆ ರಾಜತಾಂತ್ರಿಕ ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ ಎಂದು ಈ ವಿಷಯದ ಬಗ್ಗೆ ಮಾಹಿತಿ ಇರುವ ಮೂಲಗಳು ಸ್ಪಷ್ಟಪಡಿಸಿವೆ. ಇದರೊಂದಿಗೆ, ಜಿ-20 ಶೃಂಗಸಭೆಯ ನೇಪಥ್ಯದಲ್ಲೇ, ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳನ್ನೊಳಗೊಂಡ ಕ್ವಾಡ್ (Quad) ಒಕ್ಕೂಟದ ನಾಯಕರ ಶೃಂಗಸಭೆಯನ್ನು ಸಹ ನಡೆಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಜಾಗತಿಕ ಸಹಕಾರದ ಬಗ್ಗೆ ಇಲ್ಲಿ ಚರ್ಚೆ ನಡೆಯಬಹುದು. ಏತನ್ಮಧ್ಯೆ, ಅಮೆರಿಕ ಪ್ರವಾಸದ ಜೊತೆಜೊತೆಗೆ ಪ್ರಧಾನಿ ಮೋದಿಯವರು ಎರಡು ದಿನಗಳ ಕಾಲ ಕೆನಡಾಗೂ ಭೇಟಿ ನೀಡಲಿದ್ದಾರೆ ಎನ್ನಲಾಗಿದ್ದು, ಈ ವೇಳೆ ಪ್ರಧಾನಿ ಮಾರ್ಕ್ ಕಾರ್ನಿ ಅವರೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳ ಕುರಿತು ಚರ್ಚೆ ನಡೆಸುವ ನಿರೀಕ್ಷೆಯಿದೆ.