'ಒಪ್ಪಂದಕ್ಕೆ ಬನ್ನಿ, ಇಲ್ಲವೇ ನರಕಕ್ಕೆ ಹೋಗಿ': ವಿಶ್ವಸಂಸ್ಥೆಯಲ್ಲಿ Iran ವಿರುದ್ಧ Trump ಗುಡುಗು; India-Pak ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಚಾರ..!

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ನಿಲ್ಲಿಸಲು ಅಮೆರಿಕ ಸುಂಕ ವಿಧಿಸುವ ಬೆದರಿಕೆ ಹಾಕಿತ್ತು. ಬಳಿಕ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು ಎಂಬ ತಮ್ಮ ಹೇಳಿಕೆಯನ್ನು ಅವರು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮತ್ತೆ ಪ್ರಸ್ತಾಪಿಸಿದ್ದಾರೆ.
Donald trump
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ನ್ಯೂಯಾರ್ಕ್‌: ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯಲ್ಲಿ (UNGA) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಶಾಂತಿ ಒಪ್ಪಂದಕ್ಕೆ ಬಾರದಿದ್ದರೆ "ದೇಶವನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವುದಾಗಿ" ಕಠಿಣ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಚರಿಸಿದ್ದಾರೆ.

ಮಂಗಳವಾರ ನಡೆದ ಜಾಗತಿಕ ನಾಯಕರ ಈ ಮಹಾಸಭೆಯಲ್ಲಿ ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಬಿಕ್ಕಟ್ಟಿನ ಕುರಿತು ಟ್ರಂಪ್ ಮಾತನಾಡಿದರು.

ಇರಾನ್‌ ಜತೆಗಿನ ಸಂಘರ್ಷಕ್ಕೆ ಅಂತ್ಯ ಹಾಡಲು ಒಪ್ಪಂದ ಮಾಡಿಕೊಳ್ಳುವ ಆಯ್ಕೆಯೊಂದೆಡೆ, ಮತ್ತೊಂದೆಡೆ ಇರಾನ್‌ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವ ಆಯ್ಕೆಯಿದೆ. ಇರಾನ್‌ ಒಪ್ಪಂದಕ್ಕೆ ಮುಂದಾಗದಿದ್ದರೆ ಆ ದೇಶವನ್ನು ಸಂಪೂರ್ಣವಾಗಿ ನಾಶಪಡಿಸುವ ಕಠಿಣ ಆಯ್ಕೆಯನ್ನು ಕೈಗೊಳ್ಳಬೇಕಾಗಬಹುದು ಎಂದು ಎಚ್ಚರಿಸಿದ್ದಾರೆ.

“ಇರಾನ್‌ ಜತೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆಯೇ? ಆ ಮೂಲಕ ಅದು ಹಿಂದೆಂದಿಗಿಂತಲೂ ದೊಡ್ಡ ಹಾಗೂ ಶಕ್ತಿಶಾಲಿ ರಾಷ್ಟ್ರವಾಗಿ, ಮಧ್ಯಪ್ರಾಚ್ಯ ಮಾತ್ರವಲ್ಲದೆ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿ ಬೆಳೆಯಲು ಅವಕಾಶ ನೀಡಬೇಕೇ? ಅಥವಾ ಇಸ್ಲಾಮಿಕ್‌ ಗಣರಾಜ್ಯವನ್ನು ಸಂಪೂರ್ಣವಾಗಿ ನಾಶಪಡಿಸಿ, ಮತ್ತೆ ಜನರು ಮತ್ತು ರಾಷ್ಟ್ರಗಳನ್ನು ಕೊಲ್ಲಲು, ನಾಶಮಾಡಲು ಅವಕಾಶವೇ ಸಿಗದಂತೆ ಮಾಡಬೇಕೇ? ಯಾವುದೇ ಭವಿಷ್ಯದ ಭರವಸೆ ಇಲ್ಲದಂತೆ ಅದನ್ನು ನರಕಕ್ಕೆ ತಳ್ಳಬೇಕೇ ಎಂಬ ದೊಡ್ಡ ನಿರ್ಧಾರವನ್ನು ನಾನು ತೆಗೆದುಕೊಳ್ಳಬೇಕಿದೆ ಎಂದು ಹೇಳಿದರು.

ಆದರೆ, ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಗೂ ಮುನ್ನ ಇರಾನ್‌ ಜತೆ ಒಪ್ಪಂದ ಸಾಧ್ಯವಾಗಬಹುದು ಎಂಬ ವಿಶ್ವಾಸವನ್ನೂ ಟ್ರಂಪ್‌ ವ್ಯಕ್ತಪಡಿಸಿದ್ದಾರೆ.

ಯುದ್ಧದಿಂದ ಉಂಟಾಗಿರುವ ಹೆಚ್ಚಿನ ಇಂಧನ ಬೆಲೆಗಳು ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್‌ ಪಕ್ಷಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂಬ ಚರ್ಚೆಗಳ ನಡುವೆಯೇ ಅವರು ಈ ಹೇಳಿಕೆ ನೀಡಿದ್ದಾರೆ.

ಚುನಾವಣೆ ಮುಗಿದ ತಕ್ಷಣ ನಾವು ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ನಾನು ನಂಬಿದ್ದೇನೆ. ಏಕೆಂದರೆ ಅವರು ಒಪ್ಪಂದ ಮಾಡಿಕೊಳ್ಳದಿರಲು ಯಾವುದೇ ಕಾರಣವಿಲ್ಲ. ಇರಾನ್‌ ಮಧ್ಯಂತರ ಚುನಾವಣೆಯ ಫಲಿತಾಂಶವನ್ನು ನೋಡಲು ಕಾಯುತ್ತಿದೆ. ಆದರೆ, ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದನ್ನು ಅವರು ಅರ್ಥಮಾಡಿಕೊಂಡಿಲ್ಲ. ನಾನು ಈಗಾಗಲೇ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದೇನೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಇರಾನ್‌ ಪರಮಾಣು ಅಸ್ತ್ರ ಹೊಂದಲು ಅಮೆರಿಕ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

Donald trump
ಸಾಂಪ್ರದಾಯಿಕ ಮಾಧ್ಯಮಗಳಿಗೆ ಸೆಡ್ಡು ಹೊಡೆದ ಅಮೆರಿಕಾ ಅಧ್ಯಕ್ಷ; ಶ್ವೇತಭವನದಿಂದ 24/7 'ಟ್ರಂಪ್ ಟಿವಿ' ಸ್ಟ್ರೀಮಿಂಗ್ ಆರಂಭ..!

51 ವರ್ಷಗಳಿಂದ ಮತಾಂಧ ಇರಾನ್‌ ಆಡಳಿತ ರಕ್ತಪಾತ, ಸಾಮೂಹಿಕ ಹತ್ಯೆ, ಸಾವು ಮತ್ತು ಅಶಾಂತಿಯನ್ನು ಇಡೀ ಮಧ್ಯಪ್ರಾಚ್ಯದಲ್ಲಿ ಹರಡಿದೆ. ಅದು ಹಿಂದೆ ಮಧ್ಯಪ್ರಾಚ್ಯದ ಬೆದರಿಕೆಯಾಗಿತ್ತು. ಆದರೆ ಈಗ ಹಾಗಿಲ್ಲ. ನಾನು ರಾಜಕೀಯ ಪ್ರವೇಶಿಸಿದ ಮೊದಲ ದಿನದಿಂದಲೂ ನನ್ನ ನಿಲುವು ಸ್ಪಷ್ಟವಾಗಿದೆ. ಇರಾನ್‌ ಪರಮಾಣು ಅಸ್ತ್ರ ಹೊಂದಲು ನಾನು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಈ ನಡುವೆ ಇರಾನ್‌ ವಿರುದ್ಧ ಕಳೆದ ಆರು ತಿಂಗಳಲ್ಲಿ ನಡೆದಿರುವ ಸೇನಾ ದಾಳಿಗಳ ಕುರಿತು ಟ್ರಂಪ್‌ ಮಾತನಾಡಲು ಆರಂಭಿಸುತ್ತಿದ್ದಂತೆ ವಿಶ್ವಸಂಸ್ಥೆಯ ಸಭಾಂಗಣದಲ್ಲಿ ಹಾಜರಿದ್ದ ಇರಾನ್‌ ಪ್ರತಿನಿಧಿಗಳು ಹೊರನಡೆದರು.

ಕೇವಲ ಒಬ್ಬ ಪ್ರತಿನಿಧಿ ಮಾತ್ರ ತನ್ನ ಆಸನದಲ್ಲೇ ಉಳಿದಿದ್ದರು. ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ಹಾಗೂ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ ನ್ಯೂಯಾರ್ಕ್‌ನಲ್ಲಿದ್ದರೂ ಟ್ರಂಪ್‌ ಭಾಷಣದ ವೇಳೆ ಸಾಮಾನ್ಯ ಸಭಾಂಗಣಕ್ಕೆ ಆಗಮಿಸಿರಲಿಲ್ಲ. ಅವರ ಬದಲಿಗೆ ಕೆಳಹಂತದ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಹಾಜರಿದ್ದರು.

ಹಾರ್ಮುಜ್‌ ಜಲಸಂಧಿಯನ್ನು ಸಂಪೂರ್ಣವಾಗಿ ಪುನಃ ತೆರೆಯುವುದು ಮತ್ತು ಯುದ್ಧಕ್ಕೆ ಅಂತ್ಯ ಹಾಡುವ ಮಾರ್ಗದ ಕುರಿತು ಮಾತುಕತೆ ನಡೆಸುವುದನ್ನು ಇರಾನ್‌ ಅಮೆರಿಕದ ಮಧ್ಯಂತರ ಚುನಾವಣೆ ಮುಗಿಯುವವರೆಗೆ ವಿಳಂಬಿಸುತ್ತಿದೆ ಎಂದು ಟ್ರಂಪ್‌ ಆರೋಪಿಸಿದ್ದಾರೆ. ಆದರೆ, ಇರಾನ್‌ ವಿಚಾರದಲ್ಲಿ ಅಮೆರಿಕದ ಚುನಾವಣೆಯನ್ನು ತಾನು ಪರಿಗಣಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ

ಇದೇ ವೇಳೆ ಭಾರತ-ಪಾಕಿಸ್ತಾನ ಸಂಘರ್ಷದ ವಿಚಾರದಲ್ಲೂ ಟ್ರಂಪ್‌ ತಮ್ಮ ಹಿಂದಿನ ಹೇಳಿಕೆಯನ್ನೂ ಅವರು ಪುನರುಚ್ಚರಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ನಿಲ್ಲಿಸಲು ಅಮೆರಿಕ ಸುಂಕ ವಿಧಿಸುವ ಬೆದರಿಕೆ ಹಾಕಿತ್ತು. ಬಳಿಕ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡವು ಎಂಬ ತಮ್ಮ ಹೇಳಿಕೆಯನ್ನು ಅವರು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಮತ್ತೆ ಪ್ರಸ್ತಾಪಿಸಿದ್ದಾರೆ.

ನಾನು ಅಧಿಕಾರಕ್ಕೆ ಬಂದ ನಂತರ ಎಂಟು ಯುದ್ಧಗಳನ್ನು ಇತ್ಯರ್ಥಪಡಿಸುವುದು ನನ್ನ ಪಾಲಿಗೆ ದೊಡ್ಡ ಗೌರವವಾಗಿದೆ. ಈ ಮೂಲಕ ಹಲವು ದೇಶಗಳ ನಾಯಕರೊಂದಿಗೆ ಸ್ನೇಹಪೂರ್ಣ ಸಂಬಂಧ ಬೆಳೆಸಿಕೊಂಡಿದ್ದೇನೆ. ಈ ಯುದ್ಧಗಳಲ್ಲಿ ಹಲವು ವರ್ಷಗಳಿಂದ, ಕೆಲವು ದಶಕಗಳಿಂದ ಮುಂದುವರಿದಿದ್ದವು ಎಂದು ಹೇಳಿದ್ದಾರೆ.

ಕಾಂಬೋಡಿಯಾ-ಥಾಯ್ಲೆಂಡ್‌, ಕೊಸೊವೊ-ಸೆರ್ಬಿಯಾ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ-ರುವಾಂಡಾ, ಪಾಕಿಸ್ತಾನ-ಭಾರತ, ಅರ್ಮೇನಿಯಾ-ಅಜರ್‌ಬೈಜಾನ್‌ ಹಾಗೂ ಗಾಜಾ ಸಂಘರ್ಷ ಸೇರಿದಂತೆ ಹಲವು ಸಂಘರ್ಷಗಳ ಇತ್ಯರ್ಥಕ್ಕೆ ತಾವು ಕಾರಣರಾಗಿರುವುದಾಗಿ ಅವರು ಹೇಳಿದ್ದಾರೆ. ಈ ದೇಶಗಳ ನಾಯಕರು ತನಗೆ ಧನ್ಯವಾದ ಪತ್ರಗಳನ್ನು ಕಳುಹಿಸಿದ್ದಾರೆ ಎಂದೂ ಟ್ರಂಪ್‌ ತಿಳಿಸಿದ್ದಾರೆ.

ಇದೇ ವೇಳೆ ಪಾಕಿಸ್ತಾನದ ಪ್ರಧಾನಿ ತಮ್ಮನ್ನು “ಅದ್ಭುತ ವ್ಯಕ್ತಿ” ಎಂದು ಕರೆದಿದ್ದು, ಡೊನಾಲ್ಡ್‌ ಟ್ರಂಪ್‌ 3 ಕೋಟಿ ಜನರ ಜೀವಗಳನ್ನು ಉಳಿಸಿದ್ದಾರೆ, ಬಹುಶಃ ಅದಕ್ಕಿಂತಲೂ ಹೆಚ್ಚು ಜನರ ಜೀವ ಉಳಿಸಿದ್ದಾರೆ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ಟ್ರಂಪ್‌ ಕಳೆದ ವರ್ಷ ಮೇ 10ರಿಂದ ನಿರಂತರವಾಗಿ ಕ್ರೆಡಿಟ್ ತೆಗೆದುಕೊಳ್ಳುತ್ತಾ ಬಂದಿದ್ದಾರೆ. ಸುದೀರ್ಘ ಮಾತುಕತೆ ಬಳಿಕ ಭಾರತ ಮತ್ತು ಪಾಕಿಸ್ತಾನ “ಪೂರ್ಣ ಹಾಗೂ ತಕ್ಷಣದ ಕದನ ವಿರಾಮಕ್ಕೆ” ಒಪ್ಪಿಕೊಂಡಿವೆ ಎಂದು ಅವರು ಅಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು.

ಆದರೆ, ಭಾರತವು ಕದನ ವಿರಾಮದ ನಿರ್ಧಾರವನ್ನು ಎರಡೂ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾದ ಡಿಜಿಎಂಒಗಳ ನಡುವಿನ ನೇರ ಮಾತುಕತೆಯ ಮೂಲಕ ಕೈಗೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇರಲಿಲ್ಲ ಎಂದೂ ಭಾರತ ಹೇಳಿದೆ.

Donald trump
ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸುವ ಹಕ್ಕು ಯಾವುದೇ ಸರ್ಕಾರಕ್ಕೆ ಇಲ್ಲ: ಟ್ರಂಪ್ ವಿರುದ್ಧ ಒಂದಾದ ಅಮೆರಿಕದ ಮಾಧ್ಯಮಗಳು!

ರಷ್ಯಾ-ಉಕ್ರೇನ್‌ ನಡುವೆ ಶೀಘ್ರದಲ್ಲೇ ಒಪ್ಪಂದ

ಇದೇ ವೇಳೆ ರಷ್ಯಾ-ಉಕ್ರೇನ್‌ ಯುದ್ಧದ ಅಂತ್ಯಕ್ಕೂ ಶೀಘ್ರದಲ್ಲೇ ಒಪ್ಪಂದ ಸಾಧ್ಯ ಎಂದು ಟ್ರಂಪ್‌ ವಿಶ್ವಸಂಸ್ಥೆಯಲ್ಲಿ ಹೇಳಿದ್ದಾರೆ.

ನಾವು ರಷ್ಯಾ ಮತ್ತು ಉಕ್ರೇನ್‌ ನಾಯಕರೊಂದಿಗೆ ಅತ್ಯಂತ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಆ ಒಪ್ಪಂದವನ್ನು ನಾವು ಮಾಡಿಸುತ್ತೇವೆ. ಜನರು ಅಂದುಕೊಂಡಿರುವುದಕ್ಕಿಂತಲೂ ಬೇಗ ಇದು ನಡೆಯಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಕ್ಯೂಬಾ ಕೂಡ “ಪತನಗೊಳ್ಳಲಿದೆ” ಎಂದು ಟ್ರಂಪ್‌ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಫ್ಲೋರಿಡಾದ ಕರಾವಳಿಯಿಂದ ಸುಮಾರು 150 ಕಿಲೋಮೀಟರ್‌ ದೂರದಲ್ಲಿರುವ ಕಮ್ಯುನಿಸ್ಟ್‌ ರಾಷ್ಟ್ರ ಕ್ಯೂಬಾ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅಸಾಧಾರಣ ಅಪಾಯವಾಗಿದೆ ಎಂದು ಟ್ರಂಪ್‌ ಈ ಹಿಂದೆ ಹೇಳಿದ್ದರು.

ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ ಬಗ್ಗೆಯೂ ಟ್ರಂಪ್‌ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ನಿಯಂತ್ರಣ ತಪ್ಪಿರುವ ಸಂಸ್ಥೆ ಎಂದು ಕರೆದ ಅವರು, ಅದರ ಸದಸ್ಯ ರಾಷ್ಟ್ರಗಳು ಸಂಸ್ಥೆಯಿಂದ ಹೊರಬರಬೇಕು ಎಂದು ಕರೆ ನೀಡಿದ್ದಾರೆ.

ಅಮೆರಿಕದ ಸೈನಿಕರು ಅಥವಾ ಇತರ ಯಾರನ್ನೂ ಅಮೆರಿಕದ ವಿರುದ್ಧ ಕಾರ್ಯನಿರ್ವಹಿಸುವ, ಅಧಿಕಾರ ವ್ಯಾಪ್ತಿಯೇ ಇಲ್ಲದ ನ್ಯಾಯಮಂಡಳಿಯ ಮುಂದೆ ತನಿಖೆ ಅಥವಾ ವಿಚಾರಣೆಗೆ ಒಳಪಡಿಸಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಅಮೆರಿಕ ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ ಸದಸ್ಯ ರಾಷ್ಟ್ರವಲ್ಲ. ನ್ಯಾಯಾಲಯವನ್ನು ಸ್ಥಾಪಿಸಿದ ರೋಮ್‌ ಒಪ್ಪಂದಕ್ಕೂ ಅಮೆರಿಕ ಅನುಮೋದನೆ ನೀಡಿಲ್ಲ. ಇಸ್ರೇಲ್‌, ರಷ್ಯಾ ಮತ್ತು ಚೀನಾಗಳೂ ನ್ಯಾಯಾಲಯದ ಸದಸ್ಯ ರಾಷ್ಟ್ರಗಳಲ್ಲ.

ವಿಶ್ವಸಂಸ್ಥೆಯಲ್ಲಿನ ಟ್ರಂಪ್‌ ಭಾಷಣದ ಆರಂಭದಲ್ಲಿ ವಿದೇಶಾಂಗ ವಿಚಾರಗಳಿಗಿಂತ ಅಮೆರಿಕದ ಆಂತರಿಕ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಲಾಯಿತು. ಆರ್ಥಿಕತೆ, ಅಕ್ರಮ ವಲಸೆ, ಅಪರಾಧ ನಿಯಂತ್ರಣ, ಷೇರು ಮಾರುಕಟ್ಟೆ ಮತ್ತು ಬಡತನ ಪ್ರಮಾಣದಂತಹ ವಿಷಯಗಳನ್ನು ಅವರು ಪ್ರಸ್ತಾಪಿಸಿದರು.

ಅಮೆರಿಕ ಮರಳಿ ಬಂದಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಇಂದು ನಮ್ಮ ದೇಶ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ. ನಮ್ಮ ತಂತ್ರಜ್ಞಾನಕ್ಕೆ ಸರಿಸಾಟಿಯಿಲ್ಲ ಮತ್ತು ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ನಾವು ಮುಂಚೂಣಿಯಲ್ಲಿದ್ದೇವೆ ಎಂದು ಟ್ರಂಪ್‌ ಹೇಳಿದ್ದಾರೆ.

ವಿಶ್ವಸಂಸ್ಥೆಗೆ ಆಗಮಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಿಗೆ “ಯುದ್ಧವನ್ನು ಇತ್ಯರ್ಥಪಡಿಸಿ” ಎಂಬ ಸಂದೇಶ ನೀಡಿರುವುದಾಗಿ ಹೇಳಿದ್ದಾರೆ.

ತಮ್ಮ ಆಡಳಿತದ ಕುರಿತು ಮಾಧ್ಯಮಗಳ ವರದಿ ಪಕ್ಷಪಾತದಿಂದ ಕೂಡಿದೆ ಎಂದು ಆರೋಪಿಸಿ ಸಿಎನ್‌ಎನ್‌, ಎಂಎಸ್‌ ನೌ ಮತ್ತು ಪೊಲಿಟಿಕೊಗೆ ಶ್ವೇತಭವನ ಪ್ರವೇಶ ನಿರ್ಬಂಧಿಸಿರುವ ವಿಚಾರವನ್ನೂ ಅವರು ಪ್ರಸ್ತಾಪಿಸಿದರು.

ವಿಶ್ವಸಂಸ್ಥೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಸಿಎನ್‌ಎನ್‌ ವರದಿಗಾರರಿಗೂ ಟ್ರಂಪ್‌ ಅಸಮಾಧಾನ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com