ಸಾಂಪ್ರದಾಯಿಕ ಮಾಧ್ಯಮಗಳಿಗೆ ಸೆಡ್ಡು ಹೊಡೆದ ಅಮೆರಿಕಾ ಅಧ್ಯಕ್ಷ; ಶ್ವೇತಭವನದಿಂದ 24/7 ‘ಟ್ರಂಪ್ ಟಿವಿ’ ಸ್ಟ್ರೀಮಿಂಗ್ ಆರಂಭ..!

ನಿಷೇಧಕ್ಕೊಳಗಾದ ಸಂಸ್ಥೆಗಳ ಜಾಗವನ್ನು ತುಂಬಲು ನಿರಾಕರಿಸಿದ ಈ ನೆಟ್‌ವರ್ಕ್‌ಗಳು, ಅಧ್ಯಕ್ಷೀಯ ಕಾರ್ಯಕ್ರಮಗಳ ಚಿತ್ರೀಕರಣ ಮತ್ತು ಪ್ರಸಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಮೂಲಕ ಬಹಿಷ್ಕಾರ ಹಾಕಿವೆ.
US President Donald Trump
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Updated on

ವಾಷಿಂಗ್ಟನ್: ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ಶ್ವೇತಭವನದ ನಡುವಿನ ಸಂಘರ್ಷ ತಾರಕಕ್ಕೇರಿದೆ. ಪತ್ರಕರ್ತರ ಪ್ರವೇಶಾವಕಾಶದ ಕುರಿತು ಉಂಟಾಗಿರುವ ತೀವ್ರ ಭಿನ್ನಾಭಿಪ್ರಾಯಗಳ ನಡುವೆಯೇ, ಟ್ರಂಪ್ ಆಡಳಿತವು ಜನರನ್ನು ನೇರವಾಗಿ ತಲುಪಲು "Trump TV: The Essentials Station" ಹೆಸರಿನ 24/7 ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ.

ಟ್ರಂಪ್ ಆಡಳಿತವು ಇತ್ತೀಚೆಗೆ CNN, MS NOW, ಮತ್ತು Politico ಸುದ್ದಿ ಸಂಸ್ಥೆಗಳು ತಪ್ಪು ಮತ್ತು ಪಕ್ಷಪಾತಿ ವರದಿಗಾರಿಕೆ ಮಾಡುತ್ತಿವೆ ಎಂದು ಆರೋಪಿಸಿ, ಅವುಗಳ ಪತ್ರಕರ್ತರನ್ನು ಶ್ವೇತಭವನದ ಆವರಣಕ್ಕೆ ಪ್ರವೇಶಿಸದಂತೆ ನಿಷೇಧಿಸಿತ್ತು.

ಈ ಕ್ರಮವನ್ನು ಖಂಡಿಸಿ ಸೆಪ್ಟೆಂಬರ್ 21, 2026 ರಂದು ಈ ಮೂರು ಮಾಧ್ಯಮ ಸಂಸ್ಥೆಗಳು ಜಂಟಿಯಾಗಿ ಫೆಡರಲ್ ಮೊಕದ್ದಮೆಯನ್ನು ದಾಖಲಿಸಿವೆ. ಶ್ವೇತಭವನದ ಈ ನಡೆ ಸಂವಿಧಾನದ ಮೊದಲ ತಿದ್ದುಪಡಿಯಡಿ (First Amendment) ತಮಗೆ ನೀಡಲಾಗಿರುವ ವಾಕ್ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ ಎಂದು ಅವು ಆರೋಪಿಸಿವೆ.

ಈ ಬೆಳವಣಿಗೆಯ ಬೆನ್ನಲ್ಲೇ ಶ್ವೇತಭವನದ ಜಂಟಿ ಮಾಧ್ಯಮ ಬಳಗದಲ್ಲಿದ್ದ (Media Pool) ಪ್ರಮುಖ ನೆಟ್‌ವರ್ಕ್‌ಗಳಾದ ABC, CBS, NBC, ಮತ್ತು Fox News ನಿಷೇಧಿತ ಮಾಧ್ಯಮಗಳ ಪರವಾಗಿ ಒಗ್ಗಟ್ಟು ಪ್ರದರ್ಶಿಸಿವೆ.

ನಿಷೇಧಕ್ಕೊಳಗಾದ ಸಂಸ್ಥೆಗಳ ಜಾಗವನ್ನು ತುಂಬಲು ನಿರಾಕರಿಸಿದ ಈ ನೆಟ್‌ವರ್ಕ್‌ಗಳು, ಅಧ್ಯಕ್ಷೀಯ ಕಾರ್ಯಕ್ರಮಗಳ ಚಿತ್ರೀಕರಣ ಮತ್ತು ಪ್ರಸಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಮೂಲಕ ಬಹಿಷ್ಕಾರ ಹಾಕಿವೆ. ಇದರಿಂದಾಗಿ ಸಾಂಪ್ರದಾಯಿಕ ಮಾಧ್ಯಮಗಳ ಕ್ಯಾಮೆರಾಗಳಿಲ್ಲದೆ ಶ್ವೇತಭವನದ ಕಾರ್ಯಕ್ರಮಗಳು ನಡೆಯುವಂತಾಯಿತು.

ಸಾಂಪ್ರದಾಯಿಕ ಮಾಧ್ಯಮಗಳ ಈ ಬಹಿಷ್ಕಾರಕ್ಕೆ ಪರ್ಯಾಯವಾಗಿ ಶ್ವೇತಭವನವು ತನ್ನದೇ ಆದ ಡಿಜಿಟಲ್ ವೇದಿಕೆಯನ್ನು ಸೃಷ್ಟಿಸಿಕೊಂಡಿದೆ.

‘ದಿ ವೈಟ್ ಹೌಸ್’ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಕುರಿತು ಪ್ರಕಟಿಸಲಾಗಿದ್ದು, “ಇದು ನೇರ ಪ್ರಸಾರದಲ್ಲಿದೆ. ಟ್ರಂಪ್ ಟಿವಿ ಇದೀಗ 24/7 ಪ್ರಸಾರವಾಗುತ್ತಿದೆ. ಹಿಂದಿನ ಪ್ರಮುಖ ಕ್ಷಣಗಳು, ಪ್ರಕಟಣೆಗಳು ಹಾಗೂ ಆಡಳಿತದ ಇತ್ತೀಚಿನ ಮಾಹಿತಿಗಳನ್ನು ನೈಜ ಸಮಯದಲ್ಲಿ ಒಂದೇ ಸ್ಥಳದಲ್ಲಿ ನೀಡಲಾಗುತ್ತಿದೆ. ನಿಮ್ಮ ಟಿವಿಯಲ್ಲಿ ಪ್ರಸಾರವಾಗದ ಹಲವು ಪ್ರಮುಖ ಕ್ಷಣಗಳನ್ನು ಇದೀಗ ಇಲ್ಲಿ ವೀಕ್ಷಿಸಬಹುದು” ಎಂದು ತಿಳಿಸಲಾಗಿದೆ.

US President Donald Trump
ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸುವ ಹಕ್ಕು ಯಾವುದೇ ಸರ್ಕಾರಕ್ಕೆ ಇಲ್ಲ: ಟ್ರಂಪ್ ವಿರುದ್ಧ ಒಂದಾದ ಅಮೆರಿಕದ ಮಾಧ್ಯಮಗಳು!

ವೇದಿಕೆ ಆರಂಭವಾದ ಸಂದರ್ಭದಲ್ಲಿ ಟ್ರಂಪ್ ಅವರ ಹಿಂದಿನ ಹಲವು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಭಾಷಣಗಳ ದೃಶ್ಯಗಳನ್ನು ಶ್ವೇತಭವನ ಪ್ರಸಾರ ಮಾಡಿತು. 47ನೇ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದ ದೃಶ್ಯವೂ ಇದರಲ್ಲಿ ಸೇರಿತ್ತು.

ಶ್ವೇತಭವನ ಹಾಗೂ ಹಲವು ಪ್ರಮುಖ ಸುದ್ದಿಸಂಸ್ಥೆಗಳ ನಡುವಿನ ಮಾಧ್ಯಮ ಪ್ರವೇಶದ ವಿವಾದ ತೀವ್ರಗೊಂಡಿರುವ ಸಂದರ್ಭದಲ್ಲೇ ‘ಟ್ರಂಪ್ ಟಿವಿ’ ಆರಂಭವಾಗಿರುವುದು ಗಮನ ಸೆಳೆದಿದೆ.

ಸೋಮವಾರವೇ ಟ್ರಂಪ್ ಆಡಳಿತವು ಸಿಎನ್‌ಎನ್, ಪೊಲಿಟಿಕೊ ಮತ್ತು ಎಂಎಸ್ ನೌ ಸುದ್ದಿಸಂಸ್ಥೆಗಳ ಪತ್ರಕರ್ತರಿಗೆ ಶ್ವೇತಭವನ ಪ್ರವೇಶ ನಿರ್ಬಂಧಿಸಿರುವುದನ್ನು ಸಮರ್ಥಿಸಿಕೊಂಡಿದ್ದರು.

ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಅವರನ್ನು ಭೇಟಿಯಾದ ಬಳಿಕ ಗ್ರೇಸಿ ಮ್ಯಾನ್ಷನ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಮಾಧ್ಯಮ ಸಂಸ್ಥೆಗಳು ತಮ್ಮನ್ನು ಬಹಿಷ್ಕರಿಸಬಹುದು ಎಂಬ ಮಾತನ್ನು ತಳ್ಳಿಹಾಕಿದರು.

“ಅವರು ನನ್ನನ್ನು ಬಹಿಷ್ಕರಿಸುವುದಾಗಿ ಹೇಳಿದ್ದರು. ಆದರೆ, ಅವರು ಎಂದಿಗೂ ನನ್ನನ್ನು ಬಹಿಷ್ಕರಿಸುವುದಿಲ್ಲ. ಹೀಗಾಗಿ ನಾನು ಅದರ ಬಗ್ಗೆ ಹೆಚ್ಚು ಚಿಂತಿಸಿರಲಿಲ್ಲ. ಇಲ್ಲಿರುವ ಪತ್ರಕರ್ತರನ್ನು ನೋಡಿ” ಎಂದು ಹೇಳಿದರು.

ಮಾಧ್ಯಮಗಳು ನಿಷ್ಪಕ್ಷಪಾತವಾಗಿ ವರದಿ ಮಾಡುವ ಹೊಣೆ ಹೊಂದಿವೆ ಎಂದ ಅವರು, ತಾವು ‘ಸುಳ್ಳು ಸುದ್ದಿ’ ಪ್ರಕಟಿಸುತ್ತವೆ ಎಂದು ಆರೋಪಿಸಿದ ಸಂಸ್ಥೆಗಳ ಪ್ರವೇಶವನ್ನು ನಿರ್ಬಂಧಿಸುವ ತಮ್ಮ ಆಡಳಿತದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಈ ಸುದ್ದಿಸಂಸ್ಥೆಗಳಿಗೆ ನ್ಯಾಯಯುತವಾಗಿ ವರದಿ ಮಾಡುವ ಹೊಣೆ ಇದೆ. ಅವು ಸುಳ್ಳು ಸುದ್ದಿ ನೀಡುತ್ತಿದ್ದರೆ, ಮತ್ತೊಂದು ಅತ್ಯಂತ ವಿಶೇಷವಾದ ಸ್ಥಳವಾದ ಶ್ವೇತಭವನಕ್ಕೆ ಅವುಗಳನ್ನು ಪ್ರವೇಶಿಸಲು ಅವಕಾಶ ನೀಡದಿರುವುದು ನನ್ನ ಹೊಣೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಮಾಧ್ಯಮಗಳು ಸುದ್ದಿಗಳನ್ನು ಪ್ರಕಟಿಸುವ ಹಕ್ಕನ್ನು ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿ ರಕ್ಷಿಸುತ್ತದೆ. ಆದರೆ, ವೈಯಕ್ತಿಕ ಸುದ್ದಿಸಂಸ್ಥೆಗಳಿಗೆ ಶ್ವೇತಭವನ ಆವರಣ, ಬ್ರೀಫಿಂಗ್ ಕೊಠಡಿ ಅಥವಾ ಅಧ್ಯಕ್ಷೀಯ ಪತ್ರಿಕಾ ಪೂಲ್‌ಗೆ ಪ್ರವೇಶಿಸುವ ಖಾತರಿ ನೀಡುವುದಿಲ್ಲ ಎಂದು ಶ್ವೇತಭವನ ತನ್ನ ನಿರ್ಬಂಧಗಳನ್ನು ಸಮರ್ಥಿಸಿಕೊಂಡಿದೆ.

ಆದರೆ, ಸಿಎನ್‌ಎನ್, ಎಂಎಸ್ ನೌ ಮತ್ತು ಪೊಲಿಟಿಕೊ ಸುದ್ದಿಸಂಸ್ಥೆಗಳು ಈ ನಿರ್ಬಂಧಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿವೆ. ಸುದ್ದಿಗಳ ವರದಿಗಾರಿಕೆಯ ಆಧಾರದ ಮೇಲೆ ಯಾವ ಪತ್ರಕರ್ತರಿಗೆ ಶ್ವೇತಭವನ ಪ್ರವೇಶ ನೀಡಬೇಕು ಅಥವಾ ನೀಡಬಾರದು ಎಂಬುದನ್ನು ಸರ್ಕಾರ ನಿರ್ಧರಿಸಬಾರದು ಎಂದು ಅವು ವಾದಿಸಿವೆ.

ಈ ವಿವಾದದ ಪರಿಣಾಮ ಶ್ವೇತಭವನದ ಟೆಲಿವಿಷನ್ ಪೂಲ್ ಮೇಲೂ ಬೀರಿದೆ. ಅಧ್ಯಕ್ಷರ ಕಾರ್ಯಕ್ರಮಗಳ ದೃಶ್ಯಗಳನ್ನು ಹಲವು ಸುದ್ದಿಸಂಸ್ಥೆಗಳೊಂದಿಗೆ ಹಂಚಿಕೊಳ್ಳುವ ವ್ಯವಸ್ಥೆಯೇ ಟೆಲಿವಿಷನ್ ಪೂಲ್ ಆಗಿದೆ.

ಪ್ರಸ್ತುತ ಟ್ರಂಪ್ ನ್ಯೂಯಾರ್ಕ್‌ನಲ್ಲಿದ್ದು, 81ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಾಮಾನ್ಯ ಚರ್ಚೆಯ ಉನ್ನತ ಮಟ್ಟದ ಅಧಿವೇಶನದಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಹಲವು ವಿಶ್ವ ನಾಯಕರೊಂದಿಗೆ ಸಭೆ ನಡೆಸಲು ಸಜ್ಜಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com