ಬ್ಯಾಟಿಂಗ್ ಮಾಡೋ ಕ್ಯಾಪ್ಟನ್, ಅಂಪೈರ್ ಆರಿಸಬಾರದು! ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ CJI ಹೊರಗಿಟ್ಟ ಬಗ್ಗೆ ಸುಪ್ರೀಂ ವಿಭಿನ್ನ ತೀರ್ಪು

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡುವ ಕೇಂದ್ರ ಸರ್ಕಾರದ 2023ರ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ವಿಭಿನ್ನ ತೀರ್ಪು ನೀಡಿದೆ. ಆ ಕುರಿತ ವರದಿ ಇಲ್ಲಿದೆ:
Supreme Court
ಸುಪ್ರೀಂ ಕೋರ್ಟ್Online Desk
Updated on

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡುವ ಕೇಂದ್ರ ಸರ್ಕಾರದ 2023ರ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠವು ವಿಭಜಿತ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಸುದೀರ್ಘ ವಿಚಾರಣೆ ನಡೆಸಿದ ಬಳಿಕ, ಈ ಪ್ರಕರಣವನ್ನು ವಿಸ್ತೃತ ಸಂವಿಧಾನ ಪೀಠಕ್ಕೆ ವರ್ಗಾಯಿಸಬೇಕೇ ಅಥವಾ ಬೇಡವೇ ಎಂಬ ಪ್ರಾಥಮಿಕ ವಿಷಯದ ಮೇಲೆ ಒಮ್ಮತಕ್ಕೆ ಬರಲು ಸಾಧ್ಯವಾಗದೆ ಭಿನ್ನ ನಿಲುವು ತಳೆದಿದೆ. ಆ ಕುರಿತ ವರದಿ ಇಲ್ಲಿದೆ:

ಇಬ್ಬರು ನ್ಯಾಯಮೂರ್ತಿಗಳ ಭಿನ್ನ ನಿಲುವುಗಳೇನು?

  • ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರ ನಿಲುವು (ವರ್ಗಾವಣೆ ಅಗತ್ಯವಿಲ್ಲ):

    ಈ ಪ್ರಕರಣವನ್ನು ವಿಸ್ತೃತ ಸಂವಿಧಾನ ಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ದೀಪಂಕರ್ ದತ್ತಾ ಅಭಿಪ್ರಾಯಪಟ್ಟಿದ್ದು, ಪ್ರಜಾಪ್ರಭುತ್ವದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಅತ್ಯಗತ್ಯವಾಗಿದ್ದು, ಚುನಾವಣಾ ಆಯೋಗವು ಸಂಪೂರ್ಣ ಸ್ವತಂತ್ರವಾಗಿರಬೇಕು. ಈ ವೇಳೆ ಕ್ರಿಕೆಟ್ ಪಂದ್ಯದ ಉದಾಹರಣೆ ನೀಡಿದ ಅವರು, "ಬ್ಯಾಟಿಂಗ್ ಮಾಡಲು ಇಳಿಯುವ ತಂಡವೇ ಅಂಪೈರ್ ಅನ್ನು ತಾನೇ ಆಯ್ಕೆ ಮಾಡಿಕೊಂಡರೆ, ಆ ಅಂಪೈರ್ ಸರಿಯಾದ ತೀರ್ಪು ನೀಡಿದರೂ ಅವರ ನಿಷ್ಪಕ್ಷಪಾತತೆಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನದ ನೆರಳು ಮೂಡುವುದು ಸಹಜ. ಚುನಾವಣಾ ಆಯೋಗವು ಕೇವಲ ಸ್ವತಂತ್ರವಾಗಿದ್ದರೆ ಸಾಲದು, ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜನರಿಗೆ ಕಾಣಿಸಬೇಕು" ಎಂದು ಅವರು ಅಭಿಪ್ರಾಯಪಟ್ಟರು. ಜೊತೆಗೆ, ಪ್ರಧಾನಿ ನಾಮನಿರ್ದೇಶನ ಮಾಡಿದ ಕೇಂದ್ರ ಸಚಿವರು ಆಯ್ಕೆ ಸಮಿತಿಯಲ್ಲಿದ್ದರೆ, ಅವರು ಪ್ರಧಾನಿಯವರ ನಿರ್ಧಾರವನ್ನೇ ಪ್ರತಿಧ್ವನಿಸುತ್ತಾರೆಯೇ ಹೊರತು ಸ್ವತಂತ್ರ ನಿಲುವು ತಳೆಯಲು ಸಾಧ್ಯವಿಲ್ಲ. ಇದರಿಂದಾಗಿ ವಿರೋಧ ಪಕ್ಷದ ನಾಯಕರ ಪಾತ್ರ ಕೇವಲ ಅಲಂಕಾರಿಕವಾಗುತ್ತದೆ ಎಂದು ಕಾಯ್ದೆಯ ವಿರುದ್ಧ ಕಳವಳ ವ್ಯಕ್ತಪಡಿಸಿದರು.

  • ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರ ನಿಲುವು (ಸಂವಿಧಾನ ಪೀಠಕ್ಕೆ ಒಪ್ಪಿಸಬೇಕು):

    ಇದೇ ವೇಳೆ, ನ್ಯಾ. ದತ್ತಾ ಅವರ ವಾದವನ್ನು ಗೌರವಿಸುತ್ತಲೇ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು, ಆಯ್ಕೆ ಸಮಿತಿಯಿಂದ ತಟಸ್ಥ ಸದಸ್ಯರನ್ನು ಹೊರಗಿಡುವ ಪಾರ್ಲಿಮೆಂಟ್‌ನ ನಿರ್ಧಾರದ ಹಿಂದೆ ದೊಡ್ಡ ಸಾಂವಿಧಾನಿಕ ಪ್ರಶ್ನೆ ಅಡಗಿದೆ ಎಂದರು. ಜೊತೆಗೆ, ಸಂವಿಧಾನದ 145(3) ವಿಧಿಯ ಪ್ರಕಾರ ಮಹತ್ವದ ಸಾಂವಿಧಾನಿಕ ವ್ಯಾಖ್ಯಾನದ ಪ್ರಶ್ನೆಗಳು ಎದುರಾದಾಗ ಅದನ್ನು ಕನಿಷ್ಠ 5 ನ್ಯಾಯಮೂರ್ತಿಗಳಿರುವ ವಿಸ್ತೃತ ಪೀಠವೇ ನಿರ್ಧರಿಸಬೇಕು. ಹಾಗಾಗಿ ಇದನ್ನು ದೊಡ್ಡ ಪೀಠಕ್ಕೆ ಒಪ್ಪಿಸುವುದೇ ಸರಿ ಎಂದು ವಾದಿಸಿದರು.

Supreme Court
ಚುನಾವಣಾ ಆಯೋಗದಲ್ಲಿ ಬಿಕ್ಕಟ್ಟು? ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಇಬ್ಬರು ಆಯುಕ್ತರು! ಸುಪ್ರೀಂ ಕೋರ್ಟ್ ಮಧ್ಯಪ್ರವೇಶಕ್ಕೆ ವಿಪಕ್ಷಗಳ ಆಗ್ರಹ

ಹಾಗಾದ್ರೆ, ಈಗ ಪ್ರಕರಣ ಯಾರ ಅಂಗಳದಲ್ಲಿದೆ?

ಇಬ್ಬರು ನ್ಯಾಯಮೂರ್ತಿಗಳ ನಡುವೆ ಒಮ್ಮತ ಮೂಡದ ಕಾರಣ, ಅಂತಿಮವಾಗಿ ಈ ಪ್ರಕರಣವನ್ನು ವಿಸ್ತೃತ ಸಂವಿಧಾನ ಪೀಠಕ್ಕೆ ವರ್ಗಾಯಿಸಬೇಕೇ ಮತ್ತು ಇದಕ್ಕಾಗಿ ಶಾಶ್ವತ ಪೀಠವನ್ನೇ ಸ್ಥಾಪಿಸಬೇಕೇ ಎಂಬ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ಪ್ರಕರಣವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಅಂಗಳಕ್ಕೆ ಕಳುಹಿಸಲು ಇಬ್ಬರೂ ನ್ಯಾಯಾಧೀಶರು ಸಮ್ಮತಿಸಿದ್ದಾರೆ.

ವಿವಾದದ ಹಿನ್ನೆಲೆ ಏನು?

2015 ರಲ್ಲಿ ಅನೂಪ್ ಬರನ್ವಾಲ್ ಎಂಬುವವರು, ಸಂವಿಧಾನದ 324(2) ವಿಧಿಯ ಪ್ರಕಾರ, ಚುನಾವಣಾ ಆಯುಕ್ತರ ನೇಮಕಾತಿಗೆ ಸಂಸತ್ತು ಪ್ರತ್ಯೇಕ ಕಾನೂನು ರೂಪಿಸಬೇಕು. ಆದರೆ 7 ದಶಕಗಳಿಗೂ ಹೆಚ್ಚು ಕಾಲ ಯಾವುದೇ ಕಾನೂನು ರಚನೆಯಾಗಿರಲಿಲ್ಲ. ಹೀಗಾಗಿ ಕೇವಲ ಕೇಂದ್ರ ಕಾರ್ಯಾಂಗದ (ಪ್ರಧಾನಿ ಮತ್ತು ಮಂತ್ರಿಮಂಡಲ) ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಿದ್ದರು. ಇದು ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಕುಗ್ಗಿಸುತ್ತದೆ ಎಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಮಾರ್ಚ್ 2, 2023 ರಂದು ಐತಿಹಾಸಿಕ ತೀರ್ಪು ನೀಡಿತು.

ಅದುವೇ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಪ್ರಜಾಪ್ರಭುತ್ವದ ಮೂಲ ಆಶಯ ಎಂದ ಕೋರ್ಟ್, ಸಂಸತ್ತು ಹೊಸ ಕಾನೂನು ತರುವವರೆಗೆ ಮಧ್ಯಕಾಲೀನ ವ್ಯವಸ್ಥೆಯಾಗಿ ಮೂವರು ಸದಸ್ಯರ ಸಮಿತಿಯನ್ನು ರಚಿಸಿತು. ಈ ಸಮಿತಿಯಲ್ಲಿ: ಪ್ರಧಾನ ಮಂತ್ರಿಗಳು, ಲೋಕಸಭೆಯ ವಿರೋಧ ಪಕ್ಷದ ನಾಯಕರು (ಅಥವಾ ಅತಿ ದೊಡ್ಡ ಪಕ್ಷದ ನಾಯಕರು) ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳು ಇರಬೇಕು ಎಂದು ಕಡ್ಡಾಯಗೊಳಿಸಿತು.

Supreme Court
KPSC Scam: ಎಸ್‌ಐಟಿ ರಚನೆಯಿಂದ ಢವಢವ! ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ರಾಜ್ಯ ಸರ್ಕಾರ ಮುಂದು!

ಮುಂದುವರೆದು, ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ಕೇಂದ್ರ ಸರ್ಕಾರವು ಡಿಸೆಂಬರ್ 2023 ರಲ್ಲಿ 'ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಯಮಗಳು) ಕಾಯ್ದೆ-2023' ಅನ್ನು ಸಂಸತ್ತಿನಲ್ಲಿ ಅಂಗೀಕರಿಸಿತು. ಈ ಕಾಯ್ದೆಯ ಪ್ರಕಾರ ನೇಮಕಾತಿ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ. ಅದರಂತೆ, ಮೊದಲ ಹಂತದಲ್ಲಿ ಶೋಧನಾ ಸಮಿತಿ ಅಂದರೆ ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯು ಅರ್ಹ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ಒಟ್ಟು 5 ಅರ್ಹ ಅಧಿಕಾರಿಗಳ ಹೆಸರನ್ನು ಅಂತಿಮ ಆಯ್ಕೆ ಸಮಿತಿಗೆ ಪ್ರಸ್ತಾಪಿಸುತ್ತದೆ. ಇದರ ನಂತರ ಪ್ರಧಾನ ಮಂತ್ರಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನಮಂತ್ರಿಯವರಿಂದ ನಾಮನಿರ್ದೇಶನಗೊಳ್ಳುವ ಒಬ್ಬ ಕೇಂದ್ರ ಸಂಪುಟ ಸಚಿವರು (CJI ಬದಲಿಗೆ ಸೇರ್ಪಡೆಯದರು. ಜೊತೆಗೆ, ಈ ಸಮಿತಿಯು ಬಹುಮತದ ಆಧಾರದ ಮೇಲೆ ಹೆಸರುಗಳನ್ನು ಅಂತಿಮಗೊಳಿಸಿ ರಾಷ್ಟ್ರಪತಿಗಳಿಗೆ ಕಳುಹಿಸುತ್ತದೆ, ನಂತರ ರಾಷ್ಟ್ರಪತಿಗಳು ಅವರನ್ನು ನೇಮಕ ಮಾಡುತ್ತಾರೆ.

ಆದರೆ, ಹೊಸ ಆಯ್ಕೆ ಸಮಿತಿಯಲ್ಲಿ ಪ್ರಧಾನಿ ಮತ್ತು ಅವರು ನಾಮನಿರ್ದೇಶನ ಮಾಡುವ ಸಚಿವರು ಸೇರಿ ಮೂವರಲ್ಲಿ ಇಬ್ಬರು ಸರ್ಕಾರದವರೇ ಆಗಿರುತ್ತಾರೆ. ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದರೂ, ಬಹುಮತದ (2:1) ಆಧಾರದ ಮೇಲೆ ಸರ್ಕಾರ ತನಗೆ ಬೇಕಾದವರನ್ನು ನೇಮಿಸಿಕೊಳ್ಳಬಹುದು. ಇದು ಸುಪ್ರೀಂ ಕೋರ್ಟ್‌ನ ಅನೂಪ್ ಬರನ್ವಾಲ್ ತೀರ್ಪಿನ ಮೂಲ ಆಶಯಕ್ಕೆ ವಿರುದ್ಧವಾಗಿದೆ ಮತ್ತು ಚುನಾವಣಾ ಆಯೋಗದ ತಟಸ್ಥತೆಯನ್ನು ಬಾಧಿಸುತ್ತದೆ ಎಂಬುದು ಸದ್ಯದ ತಕರಾರಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com