

ಚೆನ್ನೈ: ಇನ್‌ಸ್ಟಾಗ್ರಾಂನಲ್ಲಿ ಪರಿಚಿತನಾದ ಯುವಕನೋರ್ನ ಅಪ್ರಾಪ್ತ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇರೆಗೆ ಬಂಧನಕ್ಕೀಡಾದ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.
ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ 19 ವರ್ಷದ ಯುವಕನೊಬ್ಬ 16 ವರ್ಷದ ಬಾಲಕಿಯನ್ನು ನಗರದ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತಾಂಬರಂ ನಗರ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಆರೋಪಿಯನ್ನು ಜೆ. ಮುತ್ತುಸಾಮಿ ಎಂದು ಗುರುತಿಸಲಾಗಿದೆ. ಆತ ಇನ್‌ಸ್ಟಾಗ್ರಾಂ ಮೂಲಕ ಅಪ್ರಾಪ್ತ ಯುವತಿಗೆ ಪರಿಚಯವಾಗಿದ್ದ. ಬಳಿಕ ಇಬ್ಬರೂ ಸುಮಾರು ಒಂದು ತಿಂಗಳ ಕಾಲ ಫೋನ್ ಮೂಲಕ ಸಂಪರ್ಕದಲ್ಲಿದ್ದರು.
ಸೆಪ್ಟೆಂಬರ್ 25ರಂದು ಬಾಲಕಿಯ ತಾಯಿ ವಂಡಲೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ್ದರು.
ಗುರುವಾರ ರಾತ್ರಿ ಆರೋಪಿ ಬಾಲಕಿಯನ್ನು ಓಲ್ಡ್ ನಲ್ಲೂರು ಸಮೀಪದ ಕೃಷಿ ಜಮೀನೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರು ಸ್ವೀಕರಿಸಿದ ತಕ್ಷಣ ವಂಡಲೂರು ಆಲ್ ವುಮೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಯಿತು. ದೂರು ಸ್ವೀಕರಿಸಿದ ಒಂದು ಗಂಟೆಯೊಳಗೇ ಆರೋಪಿ ಮುತ್ತುಸಾಮಿಯನ್ನು ಬಂಧಿಸಲಾಗಿದೆ. ಬಳಿಕ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಾಂಬರಂ ಪೊಲೀಸರು ತಿಳಿಸಿದ್ದಾರೆ.