

ಜುನಾಗಢ: ಮನೆ ಮುಂದೆ ಆಟವಾಡುತ್ತಿದ್ದ 6 ವರ್ಷದ ಪುಟ್ಟ ಬಾಲಕಿಯನ್ನು ಚಿರತೆಯೊಂದು ಹೊತ್ತೊಯ್ದ ಭಯಾನಕ ಘಟನೆ ಗುಜರಾತ್‌ನ ಜುನಾಗಢದಲ್ಲಿ ನಡೆದಿದೆ.
ಜುನಾಗಢ ಜಿಲ್ಲೆಯ ಮೆಂದರ್ದಾ ತಾಲೂಕಿನ ದೇಡ್ಕಿಯಾಳ್ ಗ್ರಾಮದ ಥೋಭನ್‌ಭಾಯ್ ಕೊರಟ್ ಅವರ ಜಮೀನಿನಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
6 ವರ್ಷದ ಬಾಲಕಿಯ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದ್ದು, ಮೃತ ಬಾಲಕಿಯನ್ನು ಪ್ರಿಷಾ ಸೋಲಂಕಿ ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಅರಣ್ಯ ಇಲಾಖೆ ಚಿರತೆಯನ್ನು ಸೆರೆಹಿಡಿಯಲು ಸುತ್ತಮುತ್ತಲ ಪ್ರದೇಶದಲ್ಲಿ 8 ಬೋನುಗಳನ್ನು ಇರಿಸಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಆಗಿದ್ದೇನು?
ಬಾಲಕಿ ಮನೆಯ ಹೊರಗೆ ಆಟವಾಡುತ್ತಿದ್ದಾಗ ಏಕಾಏಕಿ ಹುಲ್ಲಿನ ಪೊದೆಯಿಂದ ಹೊರಬಂದ ಚಿರತೆ ಆಕೆಯ ಮೇಲೆ ದಾಳಿ ನಡೆಸಿ ಕತ್ತಲಿನಲ್ಲಿ ಎಳೆದೊಯ್ದಿದೆ. ಈ ವೇಳೆ ಆ ಪ್ರದೇಶದಲ್ಲಿ ಇಬ್ಬರು ಇತರ ಮಕ್ಕಳು ಕೂಡ ಇದ್ದರೂ. ಬಾಲಕಿಯ ಚಿರತೆಯ ಹೊತ್ತೊಯುತ್ತಿದ್ದಂತೆಯೇ ಮಕ್ಕಳು ಹೆದರಿ ಮನೆಗೆ ಓಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಾಲಕಿಯ ಚಿಕ್ಕಪ್ಪ ಕೇತನ್ ಸೋಲಂಕಿ ಮಾತನಾಡಿ, “ಮನೆಯ ಹೊರಗಿನ ಅಂಗಳದಲ್ಲಿ ಆಟವಾಡುತ್ತಿದ್ದಾಗ ಚಿರತೆ ಏಕಾಏಕಿ ದಾಳಿ ಮಾಡಿ ಆಕೆಯನ್ನು ಎಳೆದೊಯ್ದಿತು. ಸುಮಾರು ಒಂದು ಗಂಟೆಯ ಬಳಿಕ ಆಕೆಯ ಮೃತದೇಹ ಪತ್ತೆಯಾಯಿತು” ಎಂದು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ದೃಶ್ಯ ಸೆರೆ, ಚಿರತೆ ಸೆರೆಗೆ 8 ಬೋನು ಅಳವಡಿಕೆ
ಘಟನೆಯ ಭಯಾನಕ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ತಂಡಗಳು ಧಾವಿಸಿದ್ದು, ಚಿರತೆಯನ್ನು ಸೆರೆಹಿಡಿಯಲು ಸುತ್ತಮುತ್ತ 8 ಬೋನುಗಳನ್ನು ಇರಿಸಲಾಗಿದೆ. ಚಿರತೆಯ ಚಲನವಲನ ಪತ್ತೆಹಚ್ಚಲು ತೀವ್ರ ಗಸ್ತು ಹಾಗೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ರಾತ್ರಿ ವೇಳೆ ಗ್ರಾಮಸ್ಥರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಮೃತ ಬಾಲಕಿಯ ಕುಟುಂಬಕ್ಕೆ ಪರಿಹಾರ ಒದಗಿಸುವ ಪ್ರಕ್ರಿಯೆಗೆ ಆದ್ಯತೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.