'BJP ಟಿಕೆಟ್‌ನಲ್ಲಿ ಸ್ಪರ್ಧಿಸುವಂತೆ ಜ್ಞಾನೇಶ್ ಕುಮಾರ್ ಕೇಳಿದ್ದರು': ಕೇರಳದ ಮಾಜಿ ಮುಖ್ಯ ಕಾರ್ಯದರ್ಶಿ ಹೇಳಿಕೆ

2016ರಲ್ಲಿ ಜ್ಞಾನೇಶ್ ಕುಮಾರ್ ಸೇವೆಯಲ್ಲಿದ್ದಾಗ ಈ ಪ್ರಸ್ತಾವ ಮುಂದಿಟ್ಟಿದ್ದರು. 2016ರಲ್ಲಿ ತಾವು ಕೇರಳದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಮಾತುಕತೆ ನಡೆದಿತ್ತು ಎಂದು ಜಿಜಿ ಥಾಮ್ಸನ್ ತಿಳಿಸಿದ್ದಾರೆ.
Jiji Thomson and Gyanesh Kumar
ಜಿಜಿ ಥಾಮ್ಸನ್ ಮತ್ತು ಜ್ಞಾನೇಶ್ ಕುಮಾರ್
Updated on: 

ಬೆಂಗಳೂರು: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ವಿರುದ್ಧ ಚುನಾವಣಾ ಆಯೋಗದಲ್ಲಿ ಸರ್ವಾಧಿಕಾರಿ ರೀತಿಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕೇರಳದ ಮಾಜಿ ಮುಖ್ಯ ಕಾರ್ಯದರ್ಶಿ ಜಿಜಿ ಥಾಮ್ಸನ್ ಅವರು, ಜ್ಞಾನೇಶ್ ಕುಮಾರ್ ಈ ಹಿಂದೆ ತಮ್ಮನ್ನು ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವಂತೆ ಮನವೊಲಿಸಲು ಪ್ರಯತ್ನಿಸಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

2016ರಲ್ಲಿ ಜ್ಞಾನೇಶ್ ಕುಮಾರ್ ಸೇವೆಯಲ್ಲಿದ್ದಾಗ ಈ ಪ್ರಸ್ತಾವ ಮುಂದಿಟ್ಟಿದ್ದರು. 2016ರಲ್ಲಿ ತಾವು ಕೇರಳದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಈ ಮಾತುಕತೆ ನಡೆದಿತ್ತು ಎಂದು ಜಿಜಿ ಥಾಮ್ಸನ್ ತಿಳಿಸಿದ್ದಾರೆ. ಆದರೆ, ತಾವು ಆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

Jiji Thomson and Gyanesh Kumar
ಮುಂಬೈ: ಜ್ಞಾನೇಶ್ ಕುಮಾರ್ ನೇತೃತ್ವದ ಚುನಾವಣಾ ಆಯೋಗದ ವಿರುದ್ಧ ಎಂಎನ್ಎಸ್, ಯುಬಿಟಿ ಶಿವಸೇನೆಯಿಂದ ಮೆರವಣಿಗೆ

ಜಿಜಿ ಥಾಮ್ಸನ್ ಅವರು ಕೇರಳ ಕೇಡರ್‌ನ 1980ನೇ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು, ಓಮನ್ ಚಾಂಡಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 2015-16ರಲ್ಲಿ ಕೇರಳದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ನಮ್ಮ ನಡುವೆ ಉತ್ತಮ ಸ್ನೇಹವಿತ್ತು. ನಿವೃತ್ತಿಯ ಬಳಿಕ ನಿಮ್ಮ ಯೋಜನೆ ಏನು ಎಂದು ಅವರು ನನ್ನನ್ನು ಕೇಳಿದರು. ನನಗೆ ಅಂತಹ ಯಾವುದೇ ನಿರ್ದಿಷ್ಟ ಯೋಜನೆ ಇಲ್ಲ ಎಂದು ನಾನು ಹೇಳಿದೆ. ಆಗ 2019ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿ ಕೇಂದ್ರ ಸಚಿವರಾಗಿ ಎಂದು ಸಲಹೆ ನೀಡಿದ್ದರು ಎಂದು ಜಿಜಿ ಥಾಮ್ಸನ್ ಹೇಳಿದ್ದಾರೆ.

ಜ್ಞಾನೇಶ್ ಕುಮಾರ್ ತಮ್ಮನ್ನು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದರು. ನಾನು ಕೂಡಲೇ ಆ ಪ್ರಸ್ತಾವವನ್ನು ತಿರಸ್ಕರಿಸಿದೆ ಎಂದು ಹೇಳಿದ್ದಾರೆ.

Jiji Thomson and Gyanesh Kumar
'ಬಂಡಾಯ ಇಲ್ಲ, ಸರ್ವಾನುಮತದ ಅನುಮೋದನೆ’: SIR ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯದ ವರದಿ ತಳ್ಳಿಹಾಕಿದ ಚುನಾವಣಾ ಆಯೋಗ!

ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಹೆಚ್ಚುತ್ತಿರುವುದಕ್ಕೆ ಜ್ಞಾನೇಶ್ ಕುಮಾರ್ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದರು ಹಾಗೂ ಈ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದರು ಎಂದೂ ಜಿಜಿ ಥಾಮ್ಸನ್ ಹೇಳಿದ್ದಾರೆ. ಬಿಜೆಪಿ ಟಿಕೆಟ್‌ನ್ನು ತಿರಸ್ಕರಿಸಿದ ಬಳಿಕವೂ ಜ್ಞಾನೇಶ್ ಕುಮಾರ್ ತಮ್ಮನ್ನು ರಾಜಕೀಯಕ್ಕೆ ಪ್ರವೇಶಿಸುವಂತೆ ಮನವೊಲಿಸಲು ಮತ್ತೊಮ್ಮೆ ಪ್ರಯತ್ನಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಜ್ಞಾನೇಶ್ ಕುಮಾರ್ ವಿರುದ್ಧದ ರಾಜಕೀಯ ಟೀಕೆಗಳು ತೀವ್ರಗೊಂಡಿರುವ ಸಂದರ್ಭದಲ್ಲೇ ಈ ಹೇಳಿಕೆ ಹೊರಬಿದ್ದಿದೆ. ವಿಶೇಷವಾಗಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳ ಅವಧಿಯಲ್ಲಿ 14 ಬಾರಿ ನಿರ್ಧಾರಗಳ ಕುರಿತು ಔಪಚಾರಿಕವಾಗಿ ಆಕ್ಷೇಪ ದಾಖಲಿಸಿದ್ದರು ಎಂದು ಬಲ್ಲ ಮೂಲಗಳು ತಿಳಿಸಿವೆ.

ಈ ವರದಿಯ ಬಳಿಕ ಕಾಂಗ್ರೆಸ್ ಹಾಗೂ ಇತರ ಪ್ರತಿಪಕ್ಷಗಳು ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿವೆ. ಸೆಪ್ಟೆಂಬರ್ 25ರಂದು ದೇಶದ ವಿವಿಧೆಡೆ ಪ್ರತಿಪಕ್ಷಗಳು ಹಾಗೂ ಯುವ ಸಂಘಟನೆಗಳು ಜ್ಞಾನೇಶ್ ಕುಮಾರ್ ಅವರ ತಕ್ಷಣದ ರಾಜೀನಾಮೆ ಮತ್ತು ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದವು.

ಜ್ಞಾನೇಶ್ ಕುಮಾರ್ ಕೇರಳ ಕೇಡರ್‌ನ 1988ನೇ ಬ್ಯಾಚ್‌ನ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಭಾರತದ 26ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2025ರ ಫೆಬ್ರವರಿ 19ರಂದು ರಾಜೀವ್ ಕುಮಾರ್ ಅವರ ಉತ್ತರಾಧಿಕಾರಿಯಾಗಿ ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com