'ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ CJP ಹಿಂದೆ ಸರಿಯಲ್ಲ, 'Gen Z' ತನ್ನ ಭಾಷೆಯಲ್ಲೇ ಉತ್ತರಿಸಲಿದೆ': ಅಶುತೋಷ್ ರಂಕಾ

ಕಳೆದ 48 ಗಂಟೆಗಳ ಕಾಲ ನಿರ್ಧಾರ ಕೈಗೊಳ್ಳುವ ಹೊಣೆ ಕುಮಾರ್ ಅವರ ಕೈಯಲ್ಲಿತ್ತು; ಈಗ ಅದು ಸಿಜೆಪಿ ಕೈಯಲ್ಲಿದೆ. ನಾವು ಅಕ್ಟೋಬರ್ 2 ರಂದು ದೇಶಾದ್ಯಂತ ಪ್ರತಿಭಟನೆಯನ್ನು ಆರಂಭಿಸಲಿದ್ದೇವೆ ಎಂದರು.
Gyanesh Kumar - CJP
ಜ್ಞಾನೇಶ್ ಕುಮಾರ್ - ಸಿಜೆಪಿ
Updated on: 

ಗುವಾಹಟಿ: ಮತದಾರರ ಪಟ್ಟಿಯಿಂದ 13 ಕೋಟಿ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಪಡೆಯುವ ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವುದಿಲ್ಲ; ಅಲ್ಲದೆ, ತಮ್ಮ ಮೇಲಿರುವ ಆರೋಪಗಳನ್ನು ಮಾಧ್ಯಮಗಳು ಮತ್ತು ಸಾರ್ವಜನಿಕರ ಮುಂದೆ ಸ್ಪಷ್ಟಪಡಿಸುವಂತೆ ಎಂದು ಸಿಜೆಪಿ (CJP) ವಕ್ತಾರ ಅಶುತೋಷ್ ರಂಕಾ ಸೋಮವಾರ ಸವಾಲೆಸೆದರು.

ಮುಖ್ಯ ಚುನಾವಣಾ ಆಯುಕ್ತರು (CEC) 13 ಕೋಟಿ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಮೂಲಕ ಅವರನ್ನು 'ವಂಚಿಸಿದ್ದಾರೆ'. ಈ ಆರೋಪಗಳ ಸಂಬಂಧ ಜ್ಞಾನೇಶ್ ಕುಮಾರ್ ಅವರನ್ನು ಬಿಜೆಪಿ ಏಕೆ 'ಸಮರ್ಥಿಸಿಕೊಳ್ಳುತ್ತಿದೆ' ಎಂದು ರಂಕಾ ಪ್ರಶ್ನಿಸಿದರು.

'ಕಳೆದ 48 ಗಂಟೆಗಳ ಕಾಲ ನಿರ್ಧಾರ ಕೈಗೊಳ್ಳುವ ಹೊಣೆ ಕುಮಾರ್ ಅವರ ಕೈಯಲ್ಲಿತ್ತು; ಈಗ ಅದು ಸಿಜೆಪಿ ಕೈಯಲ್ಲಿದೆ. ನಾವು ಅಕ್ಟೋಬರ್ 2 ರಂದು ದೇಶಾದ್ಯಂತ ಪ್ರತಿಭಟನೆಯನ್ನು ಆರಂಭಿಸಲಿದ್ದೇವೆ ಮತ್ತು ಅವರು ರಾಜೀನಾಮೆ ನೀಡುವವರೆಗೂ ನಾವು ಹಿಂದೆ ಸರಿಯುವುದಿಲ್ಲ. ಸಿಜೆಪಿ ಅಂತಹ ಒಂದು ವೇದಿಕೆಯಾಗಿದ್ದು, ಒಮ್ಮೆ ಯಾವುದೇ ವಿಷಯದಲ್ಲಿ ತೊಡಗಿಸಿಕೊಂಡರೆ, ನಾವು ಗೆಲ್ಲುವವರೆಗೂ ಅದನ್ನು ಕೈಬಿಡುವುದಿಲ್ಲ' ಎಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮತದಾರರ ಹಕ್ಕುಗಳನ್ನು 'ದುರ್ಬಲಗೊಳಿಸಿದ್ದಾರೆ' ಎಂಬ ಆರೋಪದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 24 ರಂದು ಸಿಜೆಪಿ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿತು. ಅಲ್ಲದೆ, 48 ಗಂಟೆಗಳ ಒಳಗಾಗಿ ಅವರು ತಮ್ಮ ಹುದ್ದೆಯಿಂದ ಕೆಳಗಿಳಿಯದಿದ್ದರೆ "ಜಂತರ್ ಮಂತರ್ 2.0" ಸೇರಿದಂತೆ ದೇಶಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿತು.

'ಚುನಾವಣಾ ಆಯೋಗವನ್ನು ಸರಿಪಡಿಸಿ' (Election Commission Thik Karo) ಎಂಬ ಅಭಿಯಾನವನ್ನು ಪ್ರಾರಂಭಿಸಿದ ಯುವಕರ ನೇತೃತ್ವದ ಸಂಘಟನೆಯು, 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಸಂದರ್ಭದಲ್ಲಿ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರಡು ಮತದಾರರ ಪಟ್ಟಿಯಿಂದ 13 ಕೋಟಿಗೂ ಹೆಚ್ಚು ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪದ ಮೇಲೆ ಈ ಅಭಿಯಾನವು ಗಮನಹರಿಸಲಿದೆ ಎಂದು ತಿಳಿಸಿತು.

Gyanesh Kumar - CJP
'ಅಸ್ಸಾಂನಲ್ಲಿ 'ಜಿರಳೆ'ಗಳ ಕಾಟ ಈಗಷ್ಟೇ ಶುರುವಾಗಿದೆ': ಸಿಎಂ ಹಿಮಂತ ಬಿಸ್ವಾ ಶರ್ಮಾ ಜಿರಳೆಗಳಿಗೂ ಹೆದರುತ್ತಾರೆ ಎಂದ CJP ನಾಯಕ!

ಮುಂಬೈನಲ್ಲಿ ಅಕ್ಟೋಬರ್ 2 ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ 'ಕಾಕ್ರೋಚ್ ಜನತಾ ಪಾರ್ಟಿ'ಗೆ ಅನುಮತಿ ನಿರಾಕರಿಸಲಾಗಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ರಂಕಾ, 'ಅಸ್ಸಾಂನಲ್ಲಿ ಹೆಸರುಗಳನ್ನು ತೆಗೆದುಹಾಕಲು ಮತ್ತು ಕ್ಷೇತ್ರಗಳನ್ನು ಮರುರೂಪಿಸಲು ಕುಮಾರ್‌ಗೆ ಅನುಮತಿ ನೀಡಿದವರು ಯಾರು? 'ನಾಯಕರು' ಮತ್ತು ಕುಮಾರ್‌ನಂತಹ ವ್ಯಕ್ತಿಗಳು ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದ್ದಾರೆ' ಎಂದು ಹೇಳಿದರು.

'ಇಂತಹ ಕೃತ್ಯಗಳಿಗೆ ಅವರಿಗೆ ಅನುಮತಿ ನೀಡಿದವರು ಯಾರು?. ಇದು ಪ್ರಜಾಪ್ರಭುತ್ವ, ಇಲ್ಲಿ ಎಲ್ಲರೂ ಮತ ಚಲಾಯಿಸಬಹುದು; ಮತ್ತು ನಾವು ಅದನ್ನು ಖಚಿತಪಡಿಸುತ್ತೇವೆ' ಎಂದು ಹೇಳಿದರು.

ಅಸ್ಸಾಂನಲ್ಲಿನ ಮತಕ್ಷೇತ್ರಗಳ ಮರುವಿಂಗಡಣೆಯನ್ನು ಆಡಳಿತಾರೂಢ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ನಡೆಸಲಾಗಿದೆ ಎಂದು ಆರೋಪಿಸಿದ ರಂಕಾ, 'ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಗೆಲುವಿಗೆ ಸಹಾಯವಾಗುವಂತೆ ಒಂದೇ ಗ್ರಾಮದ ಜನರು ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಚಲಾಯಿಸಲು ಸಾಧ್ಯವಾಯಿತು' ಎಂದು ಪ್ರತಿಪಾದಿಸಿದರು.

'ಮತ ಕಳ್ಳತನ'ದ ಆರೋಪಗಳ ವಿಷಯದಲ್ಲಿ ಬಿಜೆಪಿ ಮುಖ್ಯ ಚುನಾವಣಾ ಆಯುಕ್ತರು (CEC) ಮತ್ತು ಚುನಾವಣಾ ಆಯೋಗವನ್ನು "ಸಮರ್ಥಿಸಿಕೊಳ್ಳುತ್ತಿದೆ". ಆದರೆ, ಚುನಾವಣಾ ಆಯೋಗವು ಏಕೆ ಮೌನ ವಹಿಸಿದೆ ಎಂದು ಪ್ರಶ್ನಿಸಿದ ಅವರು, ನನಗೆ ನೆನಪಿರುವಂತೆ, ಚುನಾವಣಾ ಆಯೋಗವು ಒಂದು ಸ್ವತಂತ್ರ ಪ್ರಜಾಸತ್ತಾತ್ಮಕ ಸಂಸ್ಥೆಯೇ ಹೊರತು ಬಿಜೆಪಿಯ ಅಂಗಸಂಸ್ಥೆಯಲ್ಲ. ಬಿಜೆಪಿ ಏಕೆ ಕುಮಾರ್ ಅವರನ್ನು ಸಮರ್ಥಿಸಿಕೊಳ್ಳುತ್ತಿದೆ? ಅವರು ಬಿಜೆಪಿಯಿಂದಲೇ ರಾಜ್ಯಸಭಾ ಸದಸ್ಯತ್ವವನ್ನು ಪಡೆಯಲಿ. ಅಥವಾ, ಕುಮಾರ್ ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ, ಅವರು ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕವಾಗಿ ಹೇಳಿಕೆ ನೀಡಲಿ; 'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿಯ ಅಂಶಗಳು ಸರಿಯಾಗಿವೆಯೇ ಅಥವಾ ತಪ್ಪಾಗಿವೆಯೇ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ರಂಕಾ ಹೇಳಿದರು.

ಚುನಾವಣಾ ಆಯೋಗದ ಮೂವರು ಸದಸ್ಯರ ಪೈಕಿ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು, ಮತದಾರರ ಪಟ್ಟಿಯ 'ಎಸ್‌ಐಆರ್' (SIR)ಗೆ ಸಂಬಂಧಿಸಿದ ವಿಷಯಗಳ ಕುರಿತು ಪದೇ ಪದೆ ಆಕ್ಷೇಪಗಳನ್ನು ಎತ್ತಿದ್ದರೂ, ಏಕಪಕ್ಷೀಯವಾಗಿ ನಿರ್ಧಾರ ತಗೆದೆಕೊಳ್ಳಲಾಗಿದೆ ಎಂದು ಪತ್ರಿಕೆ ವರದಿ ಮಾಡಿತ್ತು.

ಆಡಳಿತಾರೂಢ ಸರ್ಕಾರವು ಅಹಂಕಾರಿ ಮನಸ್ಥಿತಿಯನ್ನು ತಳೆದು ಯುವಜನರನ್ನು 'ಕೀಟಗಳು ಮತ್ತು ಜಿರಲೆಗಳಂತೆ' ನಡೆಸಿಕೊಳ್ಳುತ್ತಿದೆ. 'ಜೆನ್ ಝಡ್' (Gen Z) ಪೀಳಿಗೆಯು 'ತನ್ನದೇ ಆದ ಭಾಷೆಯಲ್ಲಿ ಉತ್ತರಿಸಲಿದೆ' ಎಂದು ಎಚ್ಚರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com