

ಜೈಪುರ: ದೇವಸ್ಥಾನದಲ್ಲಿ ಭಜನೆ ಧ್ವನಿ ಕಡಿಮೆ ಮಾಡುವಂತೆ ಕೇಳಿದರೂ ಒಪ್ಪದ ವೃದ್ಧ ಅರ್ಚಕನ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿರುವ ಘಟನೆ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದಿದೆ.
ಜೈಪುರದ ಕರ್ಧಾನಿ ಪ್ರದೇಶದ ನಿವಾರು ರಸ್ತೆಯ ಗಣೇಶ್ ನಗರ ಮೇನ್‌ನಲ್ಲಿರುವ ಶಿವ ದೇವಸ್ಥಾನದಲ್ಲಿ ರಾತ್ರಿ ಸುಮಾರು 7.45ಕ್ಕೆ ಘಟನೆ ನಡೆದಿದ್ದು, ಅರ್ಚಕನಿಗೆ ಕಿಕ್, ಪಂಚ್ ನೀಡಿ ನೆಲಕ್ಕೆ ಕೆಡವಿ ಹಲ್ಲೆ ನಡೆಸಿದ ದೃಶ್ಯಗಳು ದೇವಸ್ಥಾನದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಮಾಹಿತಿ ಪ್ರಕಾರ, ದೇವಸ್ಥಾನದ ಸಮೀಪದಲ್ಲೇ ವಾಸಿಸುವ ಕೆಲವರು ದೇವಸ್ಥಾನದ ಆವರಣಕ್ಕೆ ಬಂದು ಸ್ಪೀಕರ್‌ನಲ್ಲಿ ಪ್ರಸಾರವಾಗುತ್ತಿದ್ದ ಭಜನೆಗಳ ಧ್ವನಿ ಕಡಿಮೆ ಮಾಡುವಂತೆ ಅರ್ಚಕನಿಗೆ ಸೂಚಿಸಿದ್ದಾರೆ.
ಈ ವೇಳೆ ಅರ್ಚಕ ರಾಮಕೃಷ್ಣ ಮತ್ತು ಸ್ಥಳೀಯ ಯುವಕನ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿನ ಚಕಮಕಿ ಏಕಾಏಕಿ ವಿಕೋಪಕ್ಕೆ ತಿರುಗಿದ್ದು, ಯುವಕ ಅರ್ಚಕನಿಗೆ ಕಿಕ್ ಮತ್ತು ಪಂಚ್‌ಗಳಿಂದ ಹಲ್ಲೆ ನಡೆಸಿದ್ದಾನೆ.
ವೃದ್ಧ ಅರ್ಚಕನ ಬಟ್ಟೆ ಹರಿದು ಕ್ರೌರ್ಯ
ಅರ್ಚಕನನ್ನು ನೆಲಕ್ಕೆ ಕೆಡವಿದ ಬಳಿಕವೂ ಹಲ್ಲೆ ಮುಂದುವರಿಸಿದ್ದಾನೆ. ಈ ವೇಳೆ ವೃದ್ಧ ಅರ್ಚಕನ ಬಟ್ಟೆಗಳೂ ಹರಿದಿವೆ. ಅರ್ಚಕನ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಅಲ್ಲಿದ್ದವರು ಮಧ್ಯಪ್ರವೇಶಿಸಿ, ಹಲ್ಲೆ ನಡೆಸುತ್ತಿದ್ದ ವ್ಯಕ್ತಿಯಿಂದ ಅವರನ್ನು ಬಿಡಿಸಿದ್ದಾರೆ. ಬಳಿಕ ಅರ್ಚಕನನ್ನು ರಕ್ಷಿಸಿದ್ದಾರೆ.
ದೂರು ಆಧರಿಸಿ ತಂದೆ-ಮಗನ ಬಂಧನ
ಕರ್ಧಾನಿ ಪೊಲೀಸ್ ಠಾಣೆ ಎಸ್‌ಎಚ್‌ಒ ಸವಾಯಿ ಸಿಂಗ್ ನೀಡಿರುವ ಮಾಹಿತಿ ಪ್ರಕಾರ, ಜೈಪುರದ ಗಣೇಶ್ ನಗರ ಮೇನ್ ನಿವಾಸಿ ಪಂಡಿತ್ ರಾಮಕೃಷ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಶಾಂತಿ ಭಂಗಕ್ಕೆ ಕಾರಣವಾದ ಆರೋಪದಲ್ಲಿ ಹರೀಶ್ ಚತುರ್ವೇದಿ ಮತ್ತು ಅವರ ಪುತ್ರ ದೇವಾಂಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ದೂರು ದಾಖಲಾಗಿದೆ.
ದೂರಿನ ಪ್ರಕಾರ, ದೇವಸ್ಥಾನದ ಸಮೀಪ ವಾಸಿಸುವ ಒಂದೇ ಕುಟುಂಬದ ಹರೀಶ್, ದೇವಾಂಶ್ ಮತ್ತು ರಿತು ದೇವಸ್ಥಾನದ ಆವರಣಕ್ಕೆ ನುಗ್ಗಿ ಭಜನೆಗಳ ಧ್ವನಿ ವಿಚಾರವಾಗಿ ಅರ್ಚಕರೊಂದಿಗೆ ಜಗಳ ತೆಗೆದಿದ್ದಾರೆ. ಭಕ್ತರ ಸಮ್ಮುಖದಲ್ಲೇ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ರಾಮಕೃಷ್ಣ ಆರೋಪಿಸಿದ್ದಾರೆ.
ಘಟನೆಗೆ ಸ್ಥಳೀಯರು ಹಾಗೂ ಅರ್ಚಕರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದೇ ವೇಳೆ ಆರೋಪಿತ ಕುಟುಂಬದ ಪರವಾಗಿಯೂ ಪ್ರತಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಸಮಗ್ರ ತನಿಖೆ ನಡೆಸಲಾಗುತ್ತಿದ್ದು, ತನಿಖೆಯ ಫಲಿತಾಂಶದ ಆಧಾರದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.