ಜೀವದ ಹಂಗು ತೊರೆದು, ಕಾರಿನ ಮೇಲೆ ಹತ್ತಿ ಗುಟ್ಕಾ ಸ್ಮಗ್ಲಿಂಗ್ ತಡೆದ ಪೊಲೀಸ್ ಪೇದೆ ಸನ್ಮಾನಿಸಿದ ಸಿಎಂ ವಿಜಯ್! Video

ಮಂಗಳವಾರ ಸಚಿವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಪಡೆ ಮುಖ್ಯಸ್ಥ ಮಹೇಶ್ ಕುಮಾರ್ ಅಗರ್ವಾಲ್ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ವಿಜಯ್ ಅವರು ವೆಲ್ಮುರುಗನ್ ಅವರ ಕರ್ತವ್ಯನಿಷ್ಠೆ..
CM Joseph Vijay Felicitates Head Constable Velmurugan for Daring Gutka-Smuggling Bust
ಪೊಲೀಸ್ ಪೇದೆ ವೇಲ್ ಮುರುಗನ್ ಸನ್ಮಾನಿಸಿದ ಸಿಎಂ ವಿಜಯ್
Updated on: 

ಚೆನ್ನೈ: ಕೊಯಮತ್ತೂರಿನಲ್ಲಿ ಜೀವದ ಹಂಗು ತೊರೆದು ಗುಟ್ಕಾ ಕಳ್ಳಸಾಗಣೆ ತಡೆಯುವಲ್ಲಿ ಧೈರ್ಯ ಪ್ರದರ್ಶಿಸಿದ ಹೆಡ್‌ಕಾನ್‌ಸ್ಟೆಬಲ್ ಎಂ. ವೆಲ್ ಮುರುಗನ್ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಂಗಳವಾರ ಸಚಿವಾಲಯಕ್ಕೆ ಆಹ್ವಾನಿಸಿ ಸನ್ಮಾನಿಸಿದ್ದಾರೆ.

ಮಂಗಳವಾರ ಸಚಿವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕ ಹಾಗೂ ಪೊಲೀಸ್ ಪಡೆ ಮುಖ್ಯಸ್ಥ ಮಹೇಶ್ ಕುಮಾರ್ ಅಗರ್ವಾಲ್ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ವಿಜಯ್ ಅವರು ವೆಲ್ಮುರುಗನ್ ಅವರ ಕರ್ತವ್ಯನಿಷ್ಠೆ ಮತ್ತು ಧೈರ್ಯವನ್ನು ಶ್ಲಾಘಿಸಿದರು.

ಕೊಯಮತ್ತೂರು ಜಿಲ್ಲಾ (ಗ್ರಾಮೀಣ) ಪೊಲೀಸರು ಬಿಡುಗಡೆ ಮಾಡಿರುವ ಪ್ರಕಟಣೆ ಪ್ರಕಾರ, ಸೆಪ್ಟೆಂಬರ್ 27ರ ಭಾನುವಾರ ಮುಂಜಾನೆ ರಾಜಸ್ಥಾನ ಮೂಲದ ಮೂವರು ವ್ಯಕ್ತಿಗಳು ಗುಟ್ಕಾ ಕಳ್ಳಸಾಗಣೆ ಮಾಡಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಅವರನ್ನು ತಡೆಯಲು ಮುಂದಾದಾಗ, ಆರೋಪಿಗಳು SUVಯಲ್ಲಿ ಪರಾರಿಯಾಗಲು ಯತ್ನಿಸಿದ್ದರು.

ಆರೋಪಿಗಳು ತಪ್ಪಿಸಿಕೊಳ್ಳದಂತೆ ತಡೆಯುವ ಉದ್ದೇಶದಿಂದ ವೆಲ್ಮುರುಗನ್ SUVಯ ಮೇಲ್ಛಾವಣಿಗೆ ಹತ್ತಿ, 40 ಕಿ.ಮೀ.ಗೂ ಹೆಚ್ಚು ದೂರ ವಾಹನ ಚಲಿಸಿದರೂ ಮೇಲೆಯೇ ಉಳಿದುಕೊಂಡಿದ್ದರು. ಜೀವದ ಅಪಾಯವನ್ನೂ ಲೆಕ್ಕಿಸದೆ ಅವರು ಕಾರ್ಯಾಚರಣೆಯನ್ನು ಮುಂದುವರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

CM Joseph Vijay Felicitates Head Constable Velmurugan for Daring Gutka-Smuggling Bust
ಸಿನಿಮಾವನ್ನೇ ಮೀರಿಸುವ ಘಟನೆ: ಚಲಿಸುತ್ತಿದ್ದ ಕಾರಿನ ಮೇಲೆ ಪೊಲೀಸ್‌, 40 ಕಿ.ಮೀ ಬೆನ್ನಟ್ಟಿ ಗುಟ್ಕಾ ಸ್ಮಗ್ಲರ್ ಗಳ ಬಂಧನ! Video

ಬಳಿಕ ಪೊಲೀಸರು ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಸಿ ತಿರುಪ್ಪೂರು ಜಿಲ್ಲೆಯ ಅವಿನಾಶಿ ಸಮೀಪ SUVಯನ್ನು ತಡೆದಿದ್ದರು ಮತ್ತು ವಾಹನದಲ್ಲಿದ್ದ ಮೂವರು ಆರೋಪಿಗಳನ್ನು ಬಂಧಿಸಿ, 231 ಕೆಜಿ ಗುಟ್ಕಾವನ್ನು ವಶಪಡಿಸಿಕೊಳ್ಳಲಾಗಿತ್ತು.

ಘಟನೆಯ ದೃಶ್ಯವನ್ನು ಕೆಲವು ವಾಹನ ಸವಾರರು ಚಿತ್ರೀಕರಿಸಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಚಲಿಸುತ್ತಿದ್ದ ವಾಹನದ ಮೇಲ್ಛಾವಣಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಜೀವದ ಹಂಗು ತೊರೆದು ಹಿಡಿದುಕೊಂಡಿರುವ ದೃಶ್ಯ ಸಾರ್ವಜನಿಕರ ಗಮನ ಸೆಳೆದಿತ್ತು.

ವೆಲ್ಮುರುಗನ್ ಅವರು, ಆರೋಪಿಗಳು ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ವಾಹನದ ಮೇಲೆ ಹತ್ತಿ ಹಿಡಿದುಕೊಂಡಿದ್ದಾಗಿ ಹೇಳಿದ್ದು, ತಾನು ಮಾಡಿದ್ದು ಪೊಲೀಸ್ ಅಧಿಕಾರಿಯಾಗಿ ತನ್ನ ಕರ್ತವ್ಯದ ಭಾಗ ಎಂದು ತಿಳಿಸಿದ್ದಾರೆ.

ಕಚೇರಿಗೆ ಆಹ್ವಾನಿಸಿ ಸನ್ಮಾನಿಸಿದ ಸಿಎಂ ವಿಜಯ್

ವೆಲ್ಮುರುಗನ್ ಅವರ ಸಾಹಸಕ್ಕೆ ರಾಜ್ಯದ ಸಚಿವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿಯ ಗಮನಕ್ಕೂ ಅವರ ಕಾರ್ಯವನ್ನು ತಂದು, ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದರು. ಬಳಿಕ ವೆಲ್ಮುರುಗನ್ ಅವರನ್ನು ಸಚಿವಾಲಯಕ್ಕೆ ಆಹ್ವಾನಿಸಿದ ಮುಖ್ಯಮಂತ್ರಿ ವಿಜಯ್, ಅವರ ಧೈರ್ಯ ಮತ್ತು ಕರ್ತವ್ಯನಿಷ್ಠೆಯನ್ನು ಶ್ಲಾಘಿಸಿ ಸನ್ಮಾನಿಸಿದರು.

ಅಲ್ಲದೆ ವೆಲ್ಮುರುಗನ್ ಅವರ ಅಸಾಧಾರಣ ಧೈರ್ಯ, ಸಮಯಪ್ರಜ್ಞೆ ಹಾಗೂ ಕರ್ತವ್ಯಕ್ಕೆ ತೋರಿದ ಬದ್ಧತೆಯನ್ನು ಮುಖ್ಯಮಂತ್ರಿ ವಿಜಯ್ ವೈಯಕ್ತಿಕವಾಗಿ ಶ್ಲಾಘಿಸಿದ್ದು, ಕರ್ತವ್ಯದ ವೇಳೆ ತಮ್ಮ ಸ್ವರಕ್ಷಣೆ ಕೂಡ ಮುಖ್ಯ ಎಂದು ಸಲಹೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಅಲ್ಲದೆ ಅವರ ಸಾಹಸ ಪೊಲೀಸ್ ಇಲಾಖೆಯ ಕರ್ತವ್ಯನಿಷ್ಠೆಗೆ ಉತ್ತಮ ಉದಾಹರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪೊಲೀಸ್ ಮಹಾನಿರ್ದೇಶಕ ಮಹೇಶ್ ಕುಮಾರ್ ಅಗರ್ವಾಲ್ ಕೂಡ ವೆಲ್ಮುರುಗನ್ ಅವರನ್ನು ವೈಯಕ್ತಿಕವಾಗಿ ಅಭಿನಂದಿಸಿ, ಅವರ ಅಸಾಧಾರಣ ಧೈರ್ಯ ಮತ್ತು ಕರ್ತವ್ಯ ಬದ್ಧತೆಯನ್ನು ಶ್ಲಾಘಿಸಿದರು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com