ಮೊಬೈಲ್ ನಿಷೇಧ

ಸದನ ಕಲಾಪ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಭಾವಚಿತ್ರ ವೀಕ್ಷಿಸಿ ಸಿಕ್ಕಿಬಿದ್ದ ಬಿಜೆಪಿ ಶಾಸಕ ಪ್ರಭು ಚೌಹಾಣ್ ...
ಪ್ರಭು ಚೌಹಾಣ್
ಪ್ರಭು ಚೌಹಾಣ್

ಸುವರ್ಣ ವಿಧಾನಸೌಧ, ವಿಧಾನಸಭೆ: ಸದನ ಕಲಾಪ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಭಾವಚಿತ್ರ ವೀಕ್ಷಿಸಿ ಸಿಕ್ಕಿಬಿದ್ದ ಬಿಜೆಪಿ ಶಾಸಕ ಪ್ರಭು ಚೌಹಾಣ್ ಅವರನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಶುಕ್ರವಾರ ಒಂದು ದಿನದ ಮಟ್ಟಿಗೆ ಅಮಾನತುಗೊಳಿಸಿದ್ದು, ಎರಡು ದಿನದಿಂದ ನಡೆಯುತ್ತಿದ್ದ ವಿವಾದಕ್ಕೆ ಮಂಗಳ ಹಾಡಿದ್ದಾರೆ.

ಇದರ ಜತೆಗೆ ಸದನಕ್ಕೆ  ಶಾಸಕರು ಮೊಬೈಲ್ ತರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿರುವ ಅವರು, ಸದಸ್ಯರ ವರ್ತನೆ ಬಗ್ಗೆ ನಿಯಮ ರೂಪಿಸಲು  ನೀತಿ ಸಂಹಿತೆ ಸಮಿತಿ ರಚನೆಗೆ ಆದೇಶಿಸಿದ್ದಾರೆ. ರಾಜ್ಯ ವಿಧಾನಸಭೆ ಇತಿಹಾಸದಲ್ಲಿ ಇದೊಂದು ಮಹತ್ವಪೂರ್ಣ ನಿರ್ಧಾರವಾಗಿ ಪರಿಣಮಿಸಿದ್ದು, ಸ್ಪೀಕರ್ ಆದೇಶವನ್ನು ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಒಪ್ಪಿಕೊಂಡಿದ್ದಾರೆ. ಇದರ ಜತೆಗೆ ಸಚಿವ ಅಂಬರೀಷ್ ಮತ್ತು ಶಾಸಕ ಎಸ್.ಎಸ. ಮಲ್ಲಿಕಾರ್ಜುನ ಅವರಿಗೂ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಬಾವಿಗೆ ತೆರಳಿ ಪ್ರತಿಭಟನೆ ಮುಂದುವರಿಸಿದರು. ಆದರೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಈ ಘಟನೆ ಬಗ್ಗೆ ನಮಗೂ ವಿಷಾದವಿದೆ. ಹೀಗಾಗಿ ಸ್ಪೀಕರ್ ನೀಡುವ ತೀರ್ಮಾನವನ್ನು ನಾವು ಒಪ್ಪಿಕೊಳ್ಳುತ್ತೇವೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ ತೆಗೆದುಕೊಳ್ಳುವುದಾಗಿ ತಿಳಿಸಿದರು.


ಸ್ಪೀಕರ್ ರೂಲಿಂಗ್

ಅನಂತರ ತಮ್ಮ ತೀರ್ಮಾನವನ್ನು ಓದಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಕಲಾಪ ಸಂದರ್ಭದಲ್ಲಿ ಶಾಸಕ ಪ್ರಭು  ಚೌಹಾಣ್ ಅವರು ಅಸಭ್ಯವಾಗಿ ಮೊಬೈಲ್‌ನಲ್ಲಿ ಚಿತ್ರ ವೀಕ್ಷಣೆ ಮಾಡಿರುವುದು ನನಗೆ ಮನವರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ದಿನದ ಕಲಾಪದಿಂದ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರಕಟಿಸಿದರು.

ಇದರ ಜತೆಗೆ 2012 ರಲ್ಲಿ ವಿಧಾನಸಭೆ ಕಲಾಪ ಸಂದರ್ಭದಲ್ಲಿ ಮೊಬೈಲ್ ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಪ್ರಕರಣ ಹಿನ್ನೆಲೆಯಲ್ಲಿ ತನಿಖೆ ನಡೆಸಲು ರಚಿಸಿದ್ದ ಸದನ ಸಮಿತಿ ನೀಡಿದ ವರದಿ ಶಿಫಾರಸಿನ ಪ್ರಕಾರ, ಕಲಾಪ ನಡೆಯುವಾಗ ಶಾಸಕರು ಮೊಬೈಲ್  ಫೋನ್ ತರುವುದನ್ನು ನಿಷೇಧಿಸಲಾಗಿದೆ. ಜತೆಗೆ ಸದಸ್ಯರ ವರ್ತನೆ ಬಗ್ಗೆ ನಿಯಮ ರಚಿಸಲು ನೀತಿ ಸಂಹಿತಾ ಸಮಿತಿ ರಚನೆ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಕಟಿಸಿದರು.

ಬಿಜೆಪಿ ನೋಟಿಸ್

ಸದನದಲ್ಲಿ ಮೊಬೈಲ್‌ನಲ್ಲಿ ಪ್ರಿಯಾಂಕಾ ಗಾಂಧಿ ಭಾವಚಿತ್ರವನ್ನು ಅಸಭ್ಯವಾಗಿ ನೋಡುತ್ತಿದ್ದ ಔರಾದ್ ಶಾಸಕ ಪ್ರಭು ಚೌಹಾಣ್ ಮತ್ತು ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದ ಹಿರೇಕೆರೂರು ಶಾಸಕ ಯು.ಬಿ ಬಣಕಾರ ಅವರಿಗೆ ರಾಜ್ಯ ಬಿಜೆಪಿಯ ಶಿಸ್ತು ಸಮಿತಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್‌ಗೆ ಮೂರು ದಿನದಲ್ಲಿ ಉತ್ತರ ನೀಡುವಂತೆ ಬಿಜೆಪಿಯ ವಕ್ತಾರ ರಘುನಾಥ ಮಲ್ಕಾಪುರೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾಯ್ ಆಪ್ ಚಲೋ

ಸಭಾಧ್ಯಕ್ಷರ ತೀರ್ಮಾನ ಶಾಸಕ ಪ್ರಭು ಚೌಹಾಣ್ ಅವರಿಗೆ ಅರ್ಥವಾಗದೇ ಇದ್ದುದರಿಂದ ಅವರು ತಮ್ಮ ಸ್ಥಾನದಲ್ಲೇ ಕುಳಿತಿದ್ದರು. ಆಗ ಸಿಎಂ ಸಿದ್ಧರಾಮಯ್ಯ ಪ್ರಭು ಚೌಹಾಣ್ ಅವರತ್ತ ಕೈತೋರಿ, 'ಇನ್ನೂ ಇಲ್ಲೇ ಇದ್ದಾರೆ' ಎಂದಾಗ ಸ್ಪೀಕರ್ ಅವರು 'ಭಾಯ್ ಆಪ್ ಚಲೋ' ಎಂದರು. ಬಿಜೆಪಿ ಸಚೇತಕ  ಸುನೀಲ್ ಕುಮಾರ್ ಜತೆ ಪ್ರಭು ಚೌಹಾಣ್ ವಿಷಾದ ಮುಖದೊಂದಿಗೆ ಸದನದಿಂದ ಹೊರ ನಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com