

ಬೆಂಗಳೂರು: ಪಕ್ಷ ಸಂಘಟನೆಗೆ ಬಲಾಢ್ಯರನ್ನು ನಿಯೋಜಿಸಿ ಎಂದು ಎಐಸಿಸಿ ಸೂಚನೆ ಹಿನ್ನೆಲೆಯಲ್ಲಿ ಕೆಲ ಸಚಿವರನ್ನು ಮನೆಗೆ ಕಳುಹಿಸಲು ಸಿಎಂ ಸಿದ್ಧರಾಮಯ್ಯ ಸಿದ್ಧರಾಗಿದ್ದು, ಬೆಳಗಾವಿ ಅಧಿವೇಶನ ಮುಗಿದ ತಕ್ಷಣ ಸಂಪುಟ ಪುನಾರಟನೆ ಕಸರತ್ತು ಆರಂಭಗೊಳ್ಳಿಲಿದೆ.
ಸರ್ಕಾರಕ್ಕೆ 2 ವರ್ಷ ತುಂಬುವವರೆಗೆ ಸಂಪುಟ ಪುನಾರಚನೆ ಅಗತ್ಯವಿಲ್ಲ ಎಂದು ಸಿಎಂ ಸಿದ್ಧರಾಮಯ್ಯ ಇದುವರೆಗೆ ಪ್ರತಿಪಾದಿಸುತ್ತಿದ್ದರು. ಆದರೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಜತೆ ಎಲ್ಲ ರಾಜ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ಮುಖ್ಯಸ್ಥರ ಜತೆಗೆ ನಡೆಸಿದ ಚರ್ಚೆ ಸಂದರ್ಭದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವಂತೆ ಸಲಹೆ ನೀಡಿದ್ದಾರೆ. ಇದಕ್ಕಾಗಿ ಬಲಾಢ್ಯರನ್ನು ನಿಯೋಜಿಸುವಂತೆ ಸಲಹೆ ನೀಡಿರುವ ಜತೆಗೆ ಸರ್ಕಾರ ಇರುವ ಕಡೆ ಅಸಮರ್ಥ ಕರ್ತವ್ಯ ನಿರ್ವಹಣೆ ಮಾಡುವ ಸಚಿವರನ್ನು ಮನೆಗೆ ಕಳುಹಿಸುವಂತೆ ಸೂಚನೆ ನೀಡಿದ್ದಾರೆ.
ಹೀಗಾಗಿ ರಾಜ್ಯ ಸಚಿವ ಸಂಪುಟಕ್ಕೆ ಸರ್ಜರಿ ಅನಿವಾರ್ಯವಾಗಿದ್ದು, ಕೆಲವರನ್ನು ಸಂಪುಟದಿಂದ ಕೈ ಬಿಟ್ಟು ಹೊಸಬರನ್ನು ಸೇರಿಸಿಕೊಳ್ಳಲಾಗುತ್ತದೆ. ಜತೆಗೆ ಕೆಲ ಸಚಿವರ ಖಾತೆ ಬದಲಾವಣೆಗೆ ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.
ಹಿಟ್ ಲಿಸ್ಟ್‌ನಲ್ಲಿ ಯಾರು? : ಕನ್ನಡಪ್ರಭಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಏಳು ಸಚಿವರು ಸಂಪುಟ ಪುನಾರಚನೆಯ ಹಿಟ್ ಲಿಸ್ಟ್‌ನಲ್ಲಿ ಇದ್ದಾರೆ. ಇಲಾಖೆ ನಿರ್ವಹಣೆ ವೈಫಲ್ಯ ಮತ್ತು ಅಸಾಮರ್ಥ್ಯದ ಆದಾರದ ಮೇಲೆ ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್, ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ, ಕಾರ್ಮಿಕ ಸಚಿವ ಪಿ.ಟಿ ಪರಮೇಶ್ವರ ನಾಯ್ಕ್, ಪೌರಾಡಳಿತ ಸಚಿವ ಬಾಬುರಾವ್ ಚಿಂಚನಸೂರ್, ಯುವಜನ ಸೇವಾ ಸಚಿವ ಅಭಯಚಂದ್ರ ಜೈನ್ ಹಿಟ್ ಲಿಸ್ಟ್‌ನಲ್ಲಿದ್ದಾರೆ.
ಇವರನ್ನು ಸಂಪುಟದಿಂದ ಕೈ ಬಿಟ್ಟು ಉತ್ಸಾಹಿಗಳು ಮತ್ತು ಈಗಾಗಲೇ ಪ್ರಾತಿನಿಧ್ಯ ವಂಚಿತರಾದ ಜಿಲ್ಲೆ- ಜಾತಿಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಮತ್ತು ಎರಡು ವರ್ಷ ಅಧಿಕಾರ ಅನುಭವಿಸಿದವರನ್ನು ಕಡ್ಡಾಯವಾಗಿ ಪಕ್ಷದ ಸಂಘಟನೆಗೆ ಬಳಸಿಕೊಳ್ಳುವಂತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಸೂಚನೆ ನೀಡಿದ್ದಾರೆ.
ಖಾತೆ ಬದಲಾವಣೆ: ಇದರ ಜತೆಗೆ ಕೆಲ ಸಚಿವರ ಖಾತೆ ಬದಲಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಕುತೂಹಲಕಾರಿ
ಸಂಗತಿ ಎಂದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಪ್ತವಲಯದಲ್ಲಿರುವ ನಾಲ್ವರು ಹಿರಿಯ ಸಚಿವರ ಖಾತೆ ಅದಲು ಬದಲಾಗಬಹುದು ಎನ್ನಲಾಗುತ್ತಿದೆ. ಅಬಕಾರಿ ಸಚಿವ ಸತೀಳ್ ಜಾರಕಿಹೊಳಿ ತಮಗೆ ಸಮಾಜ ಕಲ್ಯಾಣ ಇಲಾಖೆ ಬೇಕು ಎಂದು ಈಗಾಗಲೇ ಬೇಡಿಕೆ ಇಟ್ಟಿದ್ದಾರೆ. ಆದರೆ ಅದು ಸಿದ್ಧರಾಮಯ್ಯನವರ ಆಪ್ತ ಎಚ್. ಆಂಜನೇಯ ಅವರ ಬಳಿ ಇದೆ. ಎರಡೂ ಪ್ರಮುಖ ಖಾತೆಗಳಾಗಿರುವುದರಿಂದ ಪರಸ್ಪರ ಬದಲಾವಣೆ ಸಾಧ್ಯತೆ ನಿರೀಕ್ಷಿಸಲಾಗಿದೆ.
40 ಶಾಸಕರ ಅಸಮಾಧಾನ
ಎಲ್ಲದಕ್ಕಿಂತ ಮುಖ್ಯವಾಗಿ ಕೆಲ ಸಚಿವರ ಕರ್ತವ್ಯ ನಿರ್ವಹಣೆ ಬಗ್ಗೆ 40ಕ್ಕೂ ಹೆಚ್ಚು ಶಾಸಕರ ಅಸಮಾಧಾನವಿದೆ. ಕೆಲಸಕ್ಕೆ ಬಾರದ ಸಚಿವರ ಕೈ ಬಿಡಿ ಎಂದು ಬಹಿರಂಗ ಆಗ್ರಹ ಕೇಳಿ ಬಂದಿದೆ. ಆದರೆ ಈ ಶಾಸಕರು ಯಾವ ಯಾವ ಸಚಿವರ ಬಗ್ಗೆ ಅಸಮಧಾನಗೊಂಡಿದ್ದಾರೆ ಅಥವಾ ಅವರ ಪ್ರಕಾರ ಕೆಲಸಕ್ಕೆ ಬಾರದ ಸಚಿವರು ಯಾರು ಎಂಬುದು ಬಹಿರಂಗಗೊಂಡಿಲ್ಲ. ಈ ಎಲ್ಲ ಆಕ್ರೋಶ ಶಮನ ಮಾಡಬೇಕಿದ್ದರೆ ಪುನಾರಚನೆಯೊಂದಿಗೆ ಸಂಪುಟ ವಿಸ್ತರಣೆ ಸಿಎಂ ಸಿದ್ಧರಾಮಯ್ಯ ಅವರಿಗೆ ಅನಿವಾರ್ಯವಾಗಿದೆ.