ಯಡಿಯೂರಪ್ಪಗೆ ಪಟ್ಟಕಟ್ಟಿ; ಧ್ವನಿ ಆಯ್ತು ಗಟ್ಟಿ

ಗುರುವಾರ ರಾತ್ರಿ ನಡೆದ ಬಿಜೆಪಿ ರಾಜ್ಯ ಘಟಕದೊಂದಿಗಿನ ಭೇಟಿ ಹಾಗೂ ಔತಣಕೂಟದ ವೇಳೆ ಉತ್ತರ ಕರ್ನಾಟಕದ ಪ್ರಮುಖ ಬಿಜೆಪಿ ನಾಯಕರು ಬಿ.ಎಸ್.ಯಡಿಯೂರಪ್ಪಗೆ..
ಸಭೆಯಲ್ಲಿ ಪಾಲ್ಗೊಂಡಿದ್ದ ಬಿಎಸ್ ವೈ-ಅಮಿತ್ ಶಾ
ಸಭೆಯಲ್ಲಿ ಪಾಲ್ಗೊಂಡಿದ್ದ ಬಿಎಸ್ ವೈ-ಅಮಿತ್ ಶಾ

ಬೆಂಗಳೂರು: `ಬಿಎಸ್‍ವೈಗೆ ಪಟ್ಟಕಟ್ಟಿ'! -- ಇಂಥದ್ದೊಂದು ಕೂಗು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಬಲವಾಗಿ ಕೇಳಿಬಂದಿದೆ.

ಗುರುವಾರ ರಾತ್ರಿ ನಡೆದ ಬಿಜೆಪಿ ರಾಜ್ಯ ಘಟಕದೊಂದಿಗಿನ ಭೇಟಿ ಹಾಗೂ ಔತಣಕೂಟದ ವೇಳೆ ಉತ್ತರ ಕರ್ನಾಟಕದ ಪ್ರಮುಖ ಬಿಜೆಪಿ ನಾಯಕರು ಬಿ.ಎಸ್.ಯಡಿಯೂರಪ್ಪಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ. ಅದೊಂದು ಅನೌಪಚಾರಿಕ ಸಭೆಯಾಗಿತ್ತು. ಕಾರ್ಯಕಾರಿಣಿ ಆತಿಥ್ಯ ವಹಿಸಿಕೊಂಡಿರುವ ರಾಜ್ಯ ಘಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಖುದ್ದು ಭೇಟಿಯಾಗುವ ಅವಕಾಶ ಮಾಡಿಕೊಡಲಾಗಿತ್ತು. ಈ ಸಂದರ್ಭವನ್ನೇ ಬಳಸಿಕೊಂಡು ಬಿಜೆಪಿ ನಾಯಕರು ಬಿಜೆಪಿ ವರಿಷ್ಠರ ಮುಂದೆ ತಮ್ಮ ವಾದ ಮುಂದಿಡಲು ಸಫಲರಾಗಿದ್ದಾರೆ.

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಶಾಸಕರು, ಪದಾಧಿಕಾರಿಗಳನ್ನು ಒನ್ ಟು ಒನ್ ಮಾತನಾಡಿಸುತ್ತಾ ಬಂದು ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ಜೊತೆಗೆ ಊಟವನ್ನೂ ಸವಿದಿದ್ದಾರೆ. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ಬಿಜೆಪಿ ನಾಯಕರು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ಒಂದೆರಡು ನಿಮಿಷದಲ್ಲಿ ತಮ್ಮ ಕಟುವಾದವನ್ನು ಪ್ರಸ್ತಾಪಿಸಿದ್ದಾರೆ.

ಸಂಚಲನ
ಪಕ್ಷದ ರೀತಿ ರಿವಾಜುಗಳ ಪ್ರಕಾರದಂತೆ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ತೂರಿಬಂದ ಈ ಬೇಡಿಕೆ ಬಿಜೆಪಿ ವಲಯದಲ್ಲಿ ಒಂದು ಸಣ್ಣ ಸಂಚಲನವನ್ನೂ ಮೂಡಿಸಿದೆ. ಪಕ್ಷದ ಅನೇಕ ನಾಯಕರು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಸದಸ್ಯತ್ವ ಅಭಿಯಾನದ ರಾಷ್ಟ್ರೀಯ ಸಹ ಸಂಚಾಲಕ ಸಿ.ಟಿ.ರವಿ ಮಾತ್ರ ಯಾರೂ ರಾಷ್ಟ್ರೀಯ ಪದಾಧಿಕಾರಿಗಳಿಲ್ಲ ಎಂದಷ್ಟೇ ಹೇಳಿದರು. ಈ ಎಲ್ಲಾ ಬೆಳವಣಿಗೆ ನಡೆಯುತ್ತಿರುವಾಗ ಬಿ. ಎಸ್.ಯಡಿಯೂರಪ್ಪ ಮಾತ್ರ ರಾಷ್ಟ್ರ ಮುಖಂಡರ ಬಳಿ ವೈಯಕ್ತಿಕವಾಗಿ ಯಾವುದೇ ಅಭಿಪ್ರಾಯ ಮಂಡಿಸಿಲ್ಲ ಎಂದು ಗೊತ್ತಾಗಿದೆ. ಅಲ್ಲದೇ, ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಮಿತ್ ಶಾ, ಮೋದಿ, ಆಡ್ವಾಣಿಯವರ ಎದುರು ವಿಧೇಯ ವಿದ್ಯಾರ್ಥಿಯಂತೆ ಕಾಣಿಸಿಕೊಂಡಿದ್ದಾರೆ.

ಏನೇನು ಬೇಡಿಕೆ?
`ರಾಜ್ಯ ಬಿಜೆಪಿಯನ್ನು ಮುನ್ನಡೆಸಲು ಸಮರ್ಥರು ಬೇಕು. ಇದಕ್ಕೆ ಯಡಿಯೂರಪ್ಪನವರೇ ಸೂಕ್ತ' ಎಂದು ಒಬ್ಬ ಪ್ರಮುಖರು ಹೇಳಿದರೆ, ಮತ್ತೊಬ್ಬರು `ಈಗಿನಿಂದಲೇ ರಾಜ್ಯ ಸರ್ಕಾರದ ವಿರುದ್ಧ ಗಟ್ಟಿ ದನಿ ಎತ್ತಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕು. ಇದಕ್ಕೆ ಗಟ್ಟಿಗ ನಾಯಕ ಬೇಕು' ಎಂದು ಪ್ರಸ್ತಾಪಿಸಿದರು. `ದಕ್ಷಿಣ ಭಾರತದಲ್ಲಿ ಅಧಿಕಾರ ಹಿಡಿಯಬೇಕೆಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಅಜೆಂಡಾದಲ್ಲಿ. ಈ ಗುರಿ ಮುಟ್ಟಬೇಕೆಂದರೆ ಮೊದಲು ಕರ್ನಾಟಕದಲ್ಲಿ ಭದ್ರ ನೆಲೆ ಕಂಡುಕೊಂಡು ಅಧಿಕಾರ ಹಿಡಿಯಬೇಕು. ಇದಕ್ಕೆ ಸಮರ್ಥವಾದ ನಾಯಕ ಬೇಕು. ರಾಜ್ಯವನ್ನು ಸುತ್ತಿ ಪಕ್ಷವನ್ನು ಬಲಿಷ್ಠಗೊಳಿಸುವ ಅಗತ್ಯವಿದೆ. ಇದಕ್ಕೆ ಯಡಿಯೂರಪ್ಪನವರೇ ಸೂಕ್ತ' ಎಂದು ಸ್ಪಷ್ಟವಾಗಿ ವಾದ ಮಂಡಿಸಿದರು. ಈ ವೇಳೆ ಬಿಜೆಪಿ ವರಿಷ್ಠರಿಂದ ನೋಡೋಣ ಎಂದು ಉತ್ತರ ಬಂದಿದ್ದು, ಬಿಎಸ್‍ವೈ ಪರ ದನಿ ಎತ್ತಿದ ನಾಯಕರಲ್ಲಿ ಹರ್ಷ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com