ಅಮಿತ್ ಶಾ (ಸಂಗ್ರಹ ಚಿತ್ರ)
ಅಮಿತ್ ಶಾ (ಸಂಗ್ರಹ ಚಿತ್ರ)

ಯುಪಿಎ ಫೇಲ್; ಎನ್‍ಡಿಎ ಪಾಸ್..! ಇದು ಅಮಿತ್ ಶಾ ಮೌಲ್ಯಮಾಪನ

ಎನ್‍ಡಿಎ ಸರ್ಕಾರದ 10 ತಿಂಗಳ ಆಡಳಿತ ಮತ್ತು ಹಿಂದೆ 10 ವರ್ಷ ಆಡಳಿತ ಸರ್ಕಾರದ ಯುಪಿಎ ಆಡಳಿತದ ತುಲನೆ ಕಾರ್ಯಕಾರಿಣಿಯಲ್ಲಿ ನಡೆಯಿತು...
Published on

ಬೆಂಗಳೂರು: ಎನ್‍ಡಿಎ ಸರ್ಕಾರದ 10 ತಿಂಗಳ ಆಡಳಿತ ಮತ್ತು ಹಿಂದೆ 10 ವರ್ಷ ಆಡಳಿತ ಸರ್ಕಾರದ ಯುಪಿಎ ಆಡಳಿತದ ತುಲನೆ ಕಾರ್ಯಕಾರಿಣಿಯಲ್ಲಿ ನಡೆಯಿತು.

ಗುರುವಾರ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಅನೇಕ ಸಂಗತಿಗಳನ್ನು ಕ್ರೋಡೀಕರಿಸಿಕೊಂಡಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಶುಕ್ರವಾರ ಕಾರ್ಯಕಾರಿಣಿಯ ದಿಕ್ಸೂಚಿಯಲ್ಲಿ ಆ ಮಾಹಿತಿಯನ್ನು`ಕಡೆ'ದರು. ಒಟ್ಟಾರೆ ಎನ್‍ಡಿಎ ಮತ್ತು ಯುಪಿಎ ಆಡಳಿತವನ್ನು ತಕ್ಕಡಿಯಲ್ಲಿ ತೂಗಿದಂತೆ ಚಿತ್ರಣ ನೀಡಿದರಲ್ಲದೇ, ತಮ್ಮ ಸರ್ಕಾರದ ಸಾಧನೆಯನ್ನು ಶ್ಲಾಘಿಸಿದರು. ಮೋದಿ ಆಡಳಿತಕ್ಕೆ ಶಹಬ್ಬಾಸ್ ಗಿರಿಯನ್ನೂ ನೀಡಿದರು.

ತುಲನೆಯ ಸಾರಾಂಶ ಹೀಗಿದೆ
1. ಯುಪಿಎ ಸರ್ಕಾರದಲ್ಲಿ ಪ್ರತಿ ದಿನವೂ ವಿವಾದ, ತಿಂಗಳಿಗೊಂದು ಹಗರಣ ಹೊರಬರುತ್ತಿತ್ತು. ಪ್ರತಿಯೊಬ್ಬ ಕ್ಯಾಬಿನೆಟ್ ಮಂತ್ರಿಯೂ ಪ್ರಧಾನ ಮಂತ್ರಿಯನ್ನು ಹಿಂದಿಕ್ಕಿ ತಾವೇ ಪ್ರಧಾನಿಗಳಂತೆ ನಟಿಸುತ್ತಿದ್ದರು. ಆದರೆ, ಇಂದು ಆಡಳಿತ

ವ್ಯವಸ್ಥೆಯಲ್ಲಿ ಬದಲಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ಗೊಂದಲ ಇಲ್ಲದಂತೆ ಸುಸ್ಥಿರ ಮತ್ತು ಸುಧಾರಿತ ಆಡಳಿತ ವ್ಯವಸ್ಥೆ ಜಾರಿಯಲ್ಲಿದೆ. ಪ್ರಧಾನ ಮಂತ್ರಿಗಳು ಸಚಿವರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.

2. ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದ ಕಪಿಲ್ ಸಿಬಲ್, ಚಿದಂಬರಂ `ಝೀರೋ ಥಿಯರಿ' ಕಥೆ ಹೇಳಿಕೊಂಡೇ ಬಂದರು. 2ಜಿ ಸ್ಪೆಕ್ಟ್ರಂ, ಕಲ್ಲಿದ್ದಲು ಹಂಚಿಕೆಯೇ ದೊಡ್ಡ ಉದಾಹರಣೆ. ಕಲ್ಲಿದ್ದಲು, ಸ್ಪೆಕ್ಟ್ರಂ ಹಗರಣದಿಂದ ಸರ್ಕಾರದ ಬೊಕ್ಕಸಕ್ಕೇನು ನಷ್ಟವಿಲ್ಲ ಎಂದೇ ಪ್ರತಿಪಾದಿಸುತ್ತಾ ಬಂದಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಸತ್ಯ ಬಹಿರಂಗವಾಗಿದೆ. 20 ಕಲ್ಲಿದ್ದಲು ಗಣಿ ಹರಾಜಿನಿಂದ ರು.2 ಲಕ್ಷ ಕೋಟಿ ಆದಾಯ ದೇಶದ ಬೊಕ್ಕಸಕ್ಕೆ ಬಂದಿದೆ. ಅದೇ ರೀತಿ 2ಜಿ ಸ್ಪೆಕ್ಟ್ರಂನಿಂದ ರು.1 ಲಕ್ಷ ಕೋಟಿ ಆದಾಯ ಬಂದಿದೆ.

3. ಯುಪಿಎ ಸರ್ಕಾರವಿದ್ದಾಗ ಎಲ್ಲವೂ ಗುಪ್ತ್ ಗುಪ್ತ್. ಈಗ ಉತ್ತಮ ಆಡಳಿತಕ್ಕೆ ಮತ್ತು ಪಾರದರ್ಶಕ ಆಡಳಿತಕ್ಕೆ ಸ್ಪೆಕ್ಟ್ರಂ ಮತ್ತು ಕಲ್ಲಿದ್ದಲು ಹಂಚಿಕೆಯೇ ಕೈ ಕನ್ನಡಿ.

4. ಬಿಜೆಪಿ ಎಂದಿಗೂ ರೈತ ಸ್ನೇಹಗಿ. ಆದರೆ ಕಾಂಗ್ರೆಸ್ ಭೂಸ್ವಾಧೀನ ಕಾಯ್ದೆ ವಿಚಾರದಲ್ಲಿ ವಿನಾಕಾರಣ ಅಪಪ್ರಚಾರ ಮಾಡುತ್ತಿದೆ. ಡಬ್ಲ್ಯುಟಿಓ ಒಪ್ಪಂದದ ಪ್ರಕಾರ 2016ರ ನಂತರ ರೈತರಿಗೆ ಬೆಂಬಲ ಕೊಡುವಂತೆಯೇ ಇರಲಿಲ್ಲ. ಆದರೆ, ಅಮೆರಿಕ ಮನವೊಲಿಸಿ ಒಪ್ಪಂದದಲ್ಲಿ ಪರಿವರ್ತನೆ ಮಾಡಲಾಯಿತು. ಇದನ್ನು ನೋಡಿದರೂ ನಾವು ಹೇಗೆ ರೈತ ವಿರೋಧಿಗಳು?

5. ರೈತ ಸ್ವಾವಲಂಬಿಯಾಗಬೇಕು ಎನ್ನುವ ಕಾರಣಕ್ಕೆ ಅನೇಕ ಯೋಜನೆಗಳನ್ನು ತರುತ್ತಿದ್ದೇವೆ. 24 ಗಂಟೆ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡುವ ನಿಟ್ಟಿನಲ್ಲಿ ಯೋಜನೆಗಳು ರೂಪಿತಗೊಳ್ಳುತ್ತಿವೆ. ಮಣ್ಣು ಪರೀಕ್ಷೆ ಕಾರ್ಡುಗಳನ್ನು ನೀಡುವ ಮೂಲಕ ದೇಶಾದ್ಯಂತ ರೈತನಿಗೆ ಮಣ್ಣಿನ ಪರಿಚಯ ಮಾಡಿಕೊಡಲಾಗುತ್ತಿದೆ ಎಂದರು.

6. ಬ್ರಿಟಿಷ್ ಕಾಲದ ಕಾನೂನುಗಳನ್ನು ಬಳಸಿಕೊಂಡು ಕಾಂಗ್ರೆಸ್ಸಿಗರು ಇಷ್ಟು ವರ್ಷ ರೈತರನ್ನು ಲೂಟಿ ನಡೆಸಿದ್ದಾರೆ. ನಾವು ರೈತರ ಹಿತರಕ್ಷಣೆ ಮಾಡುತ್ತೇವೆ.

7. ಮೇಕ್ ಇನ್ ಇಂಡಿಯಾ, ಜನಧನ, ಸ್ಮಾರ್ಟ್‍ಸಿಟಿ, ಯೋಗ ಸೇರಿದಂತೆ ವಿದೇಶಿ ನೀತಿ ತರುವ ಮೂಲಕ ಸರ್ಕಾರ ದೇಶದ ಚಿತ್ರಣ ಬದಲು ಮಾಡಲು ಹೊರಟಿರುವುದಕ್ಕೆ ಮೋದಿಯವರನ್ನು ಶ್ಲಾಘನೆ ಸಲ್ಲುತ್ತದೆ. ಇಂಥ ಜನಪರ ಯೋಜನೆ ಅನುಷ್ಠಾನಕ್ಕೆ ತಂದಲ್ಲಿ ಇನ್ನೂ 10-15 ವರ್ಷ ಬಿಜೆಪಿಯೇ ಅಧಿಕಾರದಲ್ಲಿರಲಿದೆ ದೇಶದ ಚಿತ್ರಣ ಬದಲಿಸಲಿದೆ.

ಟೀಕೆಗೂ ಮುನ್ನ ರಾಹುಲ್ ಹುಡುಕಿ!
ರಾಜಕೀಯ ವಿರೋಧಿಗಳು ನಮ್ಮ ಆಡಳಿತದಲ್ಲಿ ದೋಷ ಹುಡುಕುತ್ತಿದ್ದಾರೆ. ದೋಷ ರಹಿತ ಉತ್ತಮ ಆಡಳಿತ ನೀಡುತ್ತಿರುವಾಗ ದೋಷ ಹುಡುಕುವ ಬದಲು ಅವರು, ತಮ್ಮ ನಾಯಕರನ್ನು ಹುಡುಕಲಿ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.

ಇದು ಹೊಸತು; ರಾಜಕೀಯ ಸಂಸ್ಕೃತಿ
ಗ್ರಾಮ, ರೈತ, ಬಡವ, ಮಹಿಳೆ ಹಾಗೂ ಕಾರ್ಮಿಕ ಇವರನ್ನು ಸ್ವಾವಲಂಬಿಗಳನ್ನಾಗಿ ಮಾಡುತ್ತೇವೆ. ಇವರೆಲ್ಲಾ ಸ್ವಾವಲಂಬಿಗಳಾದರೆ ಗ್ರಾಮ ಸ್ವಾವಲಂಬಿಯಾಗಲಿದೆ. ಇದೇ ನಮ್ಮ ಪಕ್ಷದ ನೀತಿ. ಜೊತೆಗೆ ಉತ್ತಮ ಆಡಳಿತ, ಪಾರದರ್ಶಕ ಆಡಳಿತ ನೀಡುವ ಮೂಲಕ `ರಾಜಕೀಯ ಸಂಸ್ಕೃತಿ'ಯನ್ನು ತರುತ್ತಿದ್ದೇವೆ ಎಂದು ಅಮಿತ್ ಶಾ ವಿವರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com