
ಬೆಂಗಳೂರು: ಜನತಾ ಪರಿವಾರ ಒಂದಾಗಿದ್ದು, ನಂತರದ ಚಿಹ್ನೆ, ಬಾವುಟ ಸೇರಿದಂತೆ ಪಕ್ಷಗಳ ವಿಲೀನ ಪ್ರಕ್ರಿಯೆ ಮೇ ತಿಂಗಳ ನಂತರ ಆರಂಭವಾಗುತ್ತದೆ ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಜನತಾಪರಿವಾರ ವಿಲೀನವಾಗಿದ್ದು, ದಳ ಪರಿವಾರದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮುಲಾಯಂ ಸಿಂಗ್ ಯಾದವ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅವರ ನೇತೃತ್ವದಲ್ಲಿ ಪರಿವಾರ ತನ್ನ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ. ನಾನು ರಾಷ್ಟ್ರದ ಕಾರ್ಯ ಚಟುವಟಿಕಗಳಲ್ಲಿ ಭಾಗವಹಿಸುವಾಗ ದಿಲ್ಲಿಗೆ ಹೋಗುತ್ತೇನೆ. ಉಳಿದಂತೆ ರಾಜ್ಯ ರಾಜಕಾರಣಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ಸುದ್ದಿಗಾರರಿಗೆ ಹೇಳಿದರು. ವಿಲೀನವಾಗಿರುವ ಪಕ್ಷಗಳು ಎಲ್ಲಾ ಒಂದೇ ಚಿಹ್ನೆ ಮತ್ತು ಒಂದೇ ಘೋಷ ವಾಕ್ಯದೊಂದಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಬೇಕಾಗುತ್ತದೆ.
ಈ ಸಂಬಂಧ ರಚಿಲಸಾಗಿರುವ ಸಮಿತಿ ಸದ್ಯದಲ್ಲೇ ಸಮಿತಿ ಸಭೆ ನಡೆಸಿ ಚರ್ಚೆಸಲಿದೆ ಎಂದರು. ದೇಶದಲ್ಲಿ ಜನತಾ ಪರಿವಾರ ಒಂದಾಗಿರುವುದು ಮೋದಿ ಸರ್ಕಾರವನ್ನು ಅಸ್ಥಿರ ಮಾಡಬೇಕೆನ್ನುವ ಉದ್ದೇಶದಿಂದಲ್ಲ. ಸಂಸತ್ ನಲ್ಲಿ ಸರ್ಕಾರವನ್ನು ಎದುರಿಸಲು, ಆಡಳಿತವನ್ನು ಪ್ರಶ್ನಿಸಲು ಪ್ರಾದೇಶಿಕ ಪಕ್ಷಗಳಿಗೆ ಗಟ್ಟಿ ದನಿ ಬೇಕಿತ್ತು. ಅದಕ್ಕಾಗಿ ಒಗ್ಗಟ್ಟಿನ ಮಂತ್ರ
ಜಪಿಸಲಾಗಿದೆ ಎಂದು ಗೌಡರು ಸ್ಪಷ್ಟಪಡಿಸಿದರು. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಜೆಡಿಎಸ್ ಈಗಾಗಲೇ ಇರುವ ಚಿಹ್ನೆ ಮೇಲೆಯೇ ಕಣಕ್ಕಿಳಿಯಲಿದೆ. ಇದರಲ್ಲಿ ಒಂದಾಗಿ ಸ್ಪರ್ಧಿಸುವ ಬಗ್ಗೆ ಜೆಡಿಯು ನಾಯಕ ಡಾ.ಎಂ.ಪಿ.ನಾಡಗೌಡ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Advertisement