ಶಾಸಕ ನಡಹಳ್ಳಿ ಅಮಾನತಿಗೆ ಸಿಎಲ್ ಪಿ ಶಿಫಾರಸು

ಪಕ್ಷವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಶಾಸಕ ಎಎಸ್ ಪಾಟೀಲ್ ನಡಹಳ್ಳಿ ಅವರನ್ನು ಅಮಾನತು ಮಾಡುವಂತೆ ಕಾಂಗ್ರೆಸ್ ...
ಶಾಸಕ ನಡಹಳ್ಳಿ
ಶಾಸಕ ನಡಹಳ್ಳಿ

ಬೆಂಗಳೂರು: ಪಕ್ಷವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಶಾಸಕ ಎಎಸ್ ಪಾಟೀಲ್ ನಡಹಳ್ಳಿ ಅವರನ್ನು ಅಮಾನತು ಮಾಡುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷ ಕೆಪಿಸಿಸಿಗೆ ಶಿಫಾರಸು ಮಾಡಿದೆ.

ಕಳೆದ ಏಪ್ರಿಲ್ 11ರಂದು ಉತ್ತರಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದ್ದ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಶಾಸಕ ನಡಹಳ್ಳಿಗೆ ಕೆಪಿಸಿಸಿ ನೋಟಿಸ್ ಜಾರಿ ಮಾಡಿತ್ತು, ರಾಜ್ಯ ವಿಭಜನೆ ಕುರಿತ ಹೇಳಿಕೆಗೆ ಒಂದು ವಾರದಲ್ಲಿ ಸಮರ್ಪಕ ಉತ್ತರ ನೀಡುವಂತೆ ಕೇಳಿ ನೋಟಿಸ್ ಜಾರಿ ಮಾಡಿತ್ತು. ಆದರೆ ನಡಹಳ್ಳಿ ಯಾವುದೇ ರೀತಿಯ ಉತ್ತರ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಾರ್ಯದರ್ಶಿ ಅಪ್ಪಾಜಿ ನಾಡಗೌಡ ಅವರು ನಡಹಳ್ಳಿ ಅವರನ್ನು ಪಕ್ಷದಿಂದ ಅಮಾನತುಗೊಳಿಸುವಂತೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರಿಗೆ ಶಿಫಾರಸು ಮಾಡಿದ್ದಾರೆ.

ಈ ಹಿಂದೆ ಗೋವಾ ಕನ್ನಡಿಗ ನಿರಾಶ್ರಿತ ತಾಣಕ್ಕೆ ಭೇಟಿ ನೀಡಿದ್ದ ನಡಹಳ್ಲಿ ಅಲ್ಲಿಯೂ ರಾಜ್ಯಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು.

ನಡಹಳ್ಳಿ ಅವರು ಆಡಳಿತ ಪಕ್ಷದ ಓರ್ವ ಸದಸ್ಯರಾಗಿ ನಡೆದುಕೊಂಡಿಲ್ಲ. ಸಾರ್ವಜನಿಕ ಸಭೆಗಳಲ್ಲಿ ಮತ್ತು ಗೋವಾದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆಗಳನ್ನು ನೀಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತು ಗೊಳಿಸಬೇಕು ಎಂದು ನಾಡಗೌಡ ನೇತೃತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರಿಗೆ ಶಿಫಾರಸು ಮಾಡಿದೆ.

ಇದೀಗ ಚೆಂಡು ಕೆಪಿಸಿಸಿ ಅಂಗಳದಲ್ಲಿದ್ದು, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರು ನಡಹಳ್ಳಿ ಅವರನ್ನು ಅಮಾನತುಗೊಳಿಸುತ್ತಾರೆಯೇ ಅಥವಾ ಎಚ್ಚರಿಕೆ ನೀಡಿ ಸುಮ್ಮನಾಗಿರುತ್ತಾರೆಯೇ ಎಂದು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com