ರಾಜ್ಯಪಾಲರಾಗಿ ಶಂಕರಮೂರ್ತಿ?

ಸಭಾಪತಿ ಡಿ.ಎಚ್. ಶಂಕರಮೂರ್ತಿ ಯವರು ರಾಜ್ಯಪಾಲರಾಗುತ್ತಿದ್ದಾರೆ...!' ಈ ಸುದ್ದಿ ಸದನದ ಕೊನೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು...
ಡಿಹೆಚ್ ಶಂಕರಮೂರ್ತಿ (ಸಂಗ್ರಹ ಚಿತ್ರ)
ಡಿಹೆಚ್ ಶಂಕರಮೂರ್ತಿ (ಸಂಗ್ರಹ ಚಿತ್ರ)

ವಿಧಾನಪರಿಷತ್: `ಸಭಾಪತಿ ಡಿ.ಎಚ್. ಶಂಕರಮೂರ್ತಿ ಯವರು ರಾಜ್ಯಪಾಲರಾಗುತ್ತಿದ್ದಾರೆ...!' ಈ ಸುದ್ದಿ ಸದನದ ಕೊನೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.

ಸದನ ಯಶಸ್ವಿಯಾಗಿ ನಡೆಯಲು ಕಾರಣೀಕರ್ತರಾದವರನ್ನು ಅಭಿನಂದಿಸುತ್ತಿದ್ದ ಸಭಾನಾಯಕ ಎಸ್ ಆರ್ ಪಾಟೀಲ್ ಅವರು, ತಮ್ಮ ಮಾತಿನಲ್ಲಿ ಈ ಸಂಗತಿಯನ್ನು ಪ್ರಸ್ತಾಪಿಸಿ ಎಲ್ಲರನ್ನೂ  ಚಕಿತಗೊಳಿಸಿದರು. ಸಭಾಪತಿ ಡಿ.ಎಚ್. ಶಂಕರಮೂರ್ತಿಯವರು ರಾಜ್ಯಪಾಲ ರಾಗಿ ತೆರಳುತ್ತಿದ್ದು, ಅವರನ್ನು ಅಭಿನಂದಿಸುವುದಾಗಿ ಹೇಳಿದರು. ಈ ಮಾತು ಕೇಳಿ ಆಡಳಿತ ಪಕ್ಷದ ಸದಸ್ಯರೇ  ಆಶ್ಚರ್ಯ ವ್ಯಕ್ತಪಡಿಸಿದರು. ಸಭಾಪತಿಯವರು ರಾಜ್ಯಪಾಲರಾಗುತ್ತಾರೆಂದರೆ ಅದು ನಮಗೆಲ್ಲಾ ಖುಷಿಯ ವಿಚಾರ ಎಂಬುದು ಪಾಟೀಲರ ಮಾತಾಗಿತ್ತು. ಅವರು ರಾಜ್ಯಪಾಲರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸುವುದಾಗಿ ತಿಳಿಸಿದರು.

ನಂತರ ಈ ಬೆಳವಣಿಗೆ ಕುರಿತು ತಮ್ಮ ಕೊಠಡಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಎಚ್.ಶಂಕರಮೂರ್ತಿಯವರು, `ಹಿಂದೊಮ್ಮೆ ಮಾಧ್ಯಮಗಳಲ್ಲಿ ಇದೇ ವಿಚಾರ ಪ್ರಸ್ತಾಪವಾಗಿತ್ತು.  ತಕ್ಷಣವೇ ತಾವು ಪಕ್ಷದ ಮುಖಂಡರಲ್ಲಿ ಈ ಕುರಿತು ವಿಚಾರಿಸಿದಾಗ, ನೀವು ರಾಜ್ಯಪಾಲರು ಆಗಬಾರದೇಕೆ ಎಂದು ಪ್ರಶ್ನಿಸಿದ್ದರು. ನಂತರ ಕೇಂದ್ರ ಸಚಿವ ಸದಾನಂದಗೌಡರು ಸಹ ಒಮ್ಮೆ ಇದೇ ವಿಚಾರವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದ್ದರು. ಆಗಲೂ ಅವರೊಂದಿಗೆ ಮಾತನಾಡಿದ್ದೆ. ಅವರೂ ಸಹ ನಿಮಗೆ ಅರ್ಹತೆ ಇದೆಯಲ್ಲವೇ ಎಂದು ನಗೆಯಾಡಿದ್ದರು.

ಇಷ್ಟರ ಹೊರತಾಗಿ ಯಾವುದೇ ಸ್ಪಷ್ಟ ಸೂಚನೆಯೇನೂ ಬಂದಿಲ್ಲ' ಎಂದರು. ನನ್ನ ಈ ಅವಧಿ (ವಿ.ಪ. ಸದಸ್ಯ) ಮುಗಿದ ಕೂಡಲೇ ನನ್ನೂರು ಶಿವಮೊಗ್ಗಕ್ಕೆ ಹೋಗಿ ಕುಟುಂಬದೊಂದಿಗೆ ಸಮಯ  ಕಳೆಯಲು ಉದ್ದೇಶಿಸಿದ್ದೆ. ಇಷ್ಟು ವರ್ಷಗಳ ರಾಜಕೀಯ ಅವಧಿಯಲ್ಲಿ ಬೆಂಗಳೂರಿನಲ್ಲಿ ನಾನು ಒಂದು ನಿವೇಶನ ಕೂಡ ಖರೀದಿಸಲಿಲ್ಲ. ಇಲ್ಯಾವುದೇ ಅಸ್ತಿತ್ವ ಇಲ್ಲ, ಏನಿದ್ದರೂ ಶಿವಮೊಗ್ಗ  ಎಂದರು. ಹಾಗೆಯೇ, ಒಂದೊಮ್ಮೆ ಪಕ್ಷ ತೀರ್ಮಾನ ಕೈಗೊಂಡರೆ ನೋಡೋಣ ಎಂದು ನಕ್ಕರು. ಸಭಾಪತಿಕೊಠಡಿಗೆ ಆಗಮಿಸಿದ ಸಭಾ ನಾಯಕ ಎಸ್. ಆರ್. ಪಾಟೀಲ್, ರಾಜ್ಯಪಾಲರಾಗುತ್ತಾ ರೆಂಬುದು ಖಚಿತವಾಗಿ ನಮಗೆ ಗೊತ್ತಾಗಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com