
ಬೆಂಗಳೂರು: ಕಾಂಗ್ರೆಸ್‍ನಲ್ಲಿ ವಿಧಾನಪರಿಷತ್ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳ ಬಂಡಾಯದ ಕೂಗು ತೀವ್ರಗೊಳ್ಳುತ್ತಿದ್ದು, ಶಮನಗೊಳಿಸುವ ಕಸರತ್ತು ಮುಂದುವರಿದಿದೆ.
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಂಡ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬಂಡಾಯ ಶಮನಗೊಳಿಸುವ ಸರ್ಕಸ್ ಮಾಡಿದ್ದಾರೆ. ಅದೇ ರೀತಿ ಉಡುಪಿ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಬಂಡಾಯ ಶಮನಕ್ಕೂ ಪ್ರಯತ್ನಿಸಲಾಗಿದೆ. ಆದರೆ ಕೋಲಾರ ಕ್ಷೇತ್ರದ ಟಿಕೆಟ್ ವಿಚಾರ ಮಾತ್ರ ಬಿಡಿಸಲಾಗದ ಕಗ್ಗಂಟಾಗಿದೆ. ಕೋಲಾರದಲ್ಲಿ ಸಂಸದ ಕೆ.ಎಚ್.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್‍ಕುಮಾರ್‍ಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದಾರೆ.
ಇದಕ್ಕೆ ವಿರುದ್ಧವಾಗಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಬೆಂಗಳೂರು ಡೈರಿ ಅಧ್ಯಕ್ಷ ರಮೇಶ್‍ಗೇ ಅವಕಾಶ ನೀಡಬೇಕೆಂದು ಹಠಕ್ಕೆ ಬಿದ್ದಿದ್ದಾರೆ. ಇವರಿಬ್ಬರ ಮಧ್ಯೆ ಹಿರಿಯ ನಾಯಕ ಆರ್. ಎಲ್.ಜಾಲಪ್ಪ, ತಮ್ಮ ಅಳಿಯ ನಾಗರಾಜ್‍ಗೆ ಟಿಕೆಟ್ ಬೇಕೆಂದು ಒತ್ತಡ ಹಾಕಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿಸಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಇವರಲ್ಲಿ ಯಾರ ಪರವಾಗಿದ್ದೇನೆ ಎನ್ನುವುದನ್ನು ಎಲ್ಲಿಯೂ ತೋರಿಸಿಕೊಂಡಿಲ್ಲ. ಹೀಗಾಗಿ ಕಾಂಗ್ರೆಸ್ 20 ಸ್ಥಾನಗಳಲ್ಲಿ ಟಿಕೆಟ್ ಹಂಚಿಕೆ ಮುಗಿಸಿದ್ದರೂ ಕೋಲಾರ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದೆ. ಹೀಗಾಗಿ ಕೋಲಾರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕೆನ್ನುವ ಒಂದೇ ವಿಚಾರಕ್ಕಾಗಿ ಮಂಗಳವಾರ ಬೆಳಗ್ಗೆ 11ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ಕರೆಯಲಾಗಿ ದೆ. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮತ್ತು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಶಾಸಕರು, ಮುಖಂಡರು ಭಾಗವಹಿಸಲಿದ್ದಾರೆ.
ಡಿ.ಕೆ.ಶಿ. ನಿವಾಸದಲ್ಲಿ ಸಭೆ: ಮಂಡ್ಯದಲ್ಲೂ ಕಾಂಗ್ರೆಸ್ ಬಂಡಾಯದ ಬಿಸಿ ಅನುಭವಿಸುತ್ತಿದ್ದು, ಇದನ್ನು ಶಮನಗೊಳಿಸಲು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೋಮವಾರ ತಮ್ಮ ನಿವಾಸದಲ್ಲಿ ಜಿಲ್ಲಾ ಮುಖಂಡರ ಸಭೆ ನಡೆಸಿದ್ದಾರೆ. ಆದರೆ ಈ ಸಭೆಯಲ್ಲಿ ಸಚಿವ ಅಂಬರೀಷ್ ಬಣದ ಮುಖಂಡರು ಮಾತ್ರ ಭಾಗವಹಿಸಿದ್ದರೇ ವಿನಃ ರಮ್ಯಾ(ಎಸ್.ಎಂ.ಕೃಷ್ಣ) ಬಣದ ಆತ್ಮಾನಂದ ಬಿಟ್ಟರೆ ಉಳಿದವರು ಅತ್ತ ಬರಲಿಲ್ಲ. ಹೀಗಾಗಿ ಮಂಡ್ಯದಲ್ಲಿ ಎಲ್. ಆರ್.ಶಿವರಾಮೇಗೌಡರಿಗೆ ಟಿಕೆಟ್ ನೀಡಿರುವುದಕ್ಕೆ ಸ್ಥಳೀಯ ಮುಖಂಡರಾದ ಸುರೇಶ್‍ಗೌಡ, ಕೆ.ಬಿ.ಚಂದ್ರಶೇಖರ್, ರಮ್ಯಾ, ರವೀಂದ್ರ ಶ್ರೀಕಂಠಯ್ಯ-ಅವರಿಗೆ ಅಸಮಾಧಾನವಿರು- ವುದು ಸ್ಪಷ್ಟವಾದಂತಾಗಿದೆ. ಈ ಮಧ್ಯೆ, ಶ್ರೀರಂಗಪಟ್ಟಣದ ನಾಯಕ, ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ, ಎಲ್.ಆರ್.ಶಿವರಾಮೇಗೌಡರಿಗೆ ಟಿಕೆಟ್ ನೀಡಿರುವುದನ್ನು ಪತ್ರದ ಮೂಲಕ ಆಕ್ಷೇಪಿಸಿದ್ದಾರೆ. 2009ರಲ್ಲಿ ಅಂಬರೀಷ್ ಸೋಲುವುದಕ್ಕೆ ಶಿವರಾಮೇಗೌಡ ಕಾರಣರಾಗಿದ್ದಾರೆ.
ಇತ್ತೀಚೆಗೆ ರಮ್ಯಾ ಸೋಲುವುದಕ್ಕೆ ಅವರೇ ಕಾರಣ. ಈ ವಿಚಾರಗಳನ್ನು ಅವರು ಬಹಿರಂಗವಾಗಿಯೇ ಹೇಳಿದ್ದರು. ಇಷ್ಟೆಲ್ಲಾ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಶಿವರಾಮೇಗೌಡರಿಗೆ ಹೇಗೆ ಟಿಕೇಟ್ ನೀಡುತ್ತೀರಿ ಎಂದು ರವಿಂದ್ರ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆದು ಪತ್ರ ಪ್ರಶ್ನಿಸಿದ್ದಾರೆ. ಬೆಂಗಳೂರು ನಗರ ಕ್ಷೇತ್ರದಲ್ಲೂ ಬಂಡಾಯ ಮುಂದುವರಿದಿದ್ದು, ಕಾಂಗ್ರೆಸ್‍ನಿಂದ ಟಿಕೆಟ್ ಪಡೆದಿರುವ ನಾರಾಯಣಸ್ವಾಮಿ ಸೋಮವಾರ ನಾಮಪತ್ರವನ್ನೇ ಸಲ್ಲಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದಿರುವ ದಯಾನಂದ ರೆಡ್ಡಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಎಲ್ಲಾ ಸಿದ್ಧತೆ ಮುಗಿಸಿದ್ದಾರೆ. ಇದೇರೀತಿ ಉಡುಪಿ ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆ ಸಮಾಧಾನಗೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ಅಭ್ಯರ್ಥಿಗಳ ಬದಲು
ಬೆಂಗಳೂರು: ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಹೆಚ್ಚಿನ ಕ್ಷೇತ್ರಗಳಿಗೆ ವಿಸ್ತರಿಸುವ ಜತೆಗೆ ಅಧಿಕೃತ ಅಭ್ಯರ್ಥಿಗಳನ್ನು ಬದಲಿಸುವ ಕಾರ್ಯಕ್ಕೂ ಮುಂದಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಸೋಮವಾರ ಬೀದರ್‍ಗೆ ಸುಬ್ಬಾರೆಡ್ಡಿ, ಧಾರವಾಡಕ್ಕೆ ಮಲ್ಲಿಕಾರ್ಜುನ ಅವರನ್ನು ಅಂತಿಮಗೊಳಿಸಿದ್ದಾರೆ.
ದೊಡ್ಡ ತಲೆ ನೋವಾಗಿರುವ ಮಂಡ್ಯ ಮತ್ತು ಬೆಳಗಾವಿ ಜಿಲ್ಲೆಗಳ ಅಭ್ಯರ್ಥಿಗಳನ್ನು ಮಂಗಳವಾರ ಅಂತಿಮಗೊಳಿಸುವ ಸಾಧ್ಯತೆ ಇದೆ. ಇದರೊಂದಿಗೆ ಕೊಡಗು ಜಿಲ್ಲೆಗೆ ಆಯ್ಕೆ ಮಾಡಿದ್ದ ನರೇಶ್ ಎಂಬ ಅಭ್ಯರ್ಥಿಯನ್ನು ಬದಲಿಸಲಾಗಿದ್ದು, ಅವರ ಬದಲಿಗೆ ಎ.ವಿ.ವಿನೋದ್ ಕುಮಾರ್ ಎಂಬುವರಿಗೆ ಟಿಕೆಟ್ ನೀಡಲಾಗಿದೆ. ಇದೇ ರೀತಿ ಹಾಸನದಲ್ಲಿ ಈಗಾಗಲೇ ಟಿಕೆಟ್ ಪಡೆದಿರುವ ಪಟೇಲ್ ಶಿವರಾಜ್ ಬದಲಿಸುವ ಬಗ್ಗೆಯೂ ಪಕ್ಷದ ಮೇಲೆ ಒತ್ತಡಗಳು ಶುರವಾಗಿದ್ದು, ಈ ನಿಟ್ಟಿನಲ್ಲಿ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಚಿಂತನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲವರಲ್ಲಿ ಅಸಮಾಧಾನವಿದೆ. ಅದನ್ನು ಸರಿಪಡಿಸುತ್ತೇವೆ. ಇಬ್ಬರಿಗೂ ಮಾತನಾಡಿದ್ದೇನೆ. ಎಲ್ಲವೂ ಸರಿಯಾಗುತ್ತದೆ. ಎಲ್ಲಾ ಒಂದಾಗಿ ಚುನಾವಣೆ ಎದುರಿಸುತ್ತೇವೆ.
-ಡಿ ಕೆ ಶಿವಕುಮಾರ್ ಇಂಧನ ಸಚಿವ
ಕೋಲಾರದಲ್ಲಿ ಟಿಕೆಟ್‍ಗಾಗಿ ಪೈಪೋಟಿ ಇದೆ. ಇಬ್ಬರು ಕೇಳಿದ್ದಾರೆ. ಅವರಿಗೆ ಸಾಕಷ್ಟು ಹೇಳಿದ್ದೇವೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಸೇರಿ ಮಂಗಳವಾರ ಸಭೆ ನಡೆಸುತ್ತೆನಂತರ ಯಾರಿಗೆ ಟಿಕೆಟ್ ನೀಡಬೇಕೆಂದು ತೀರ್ಮಾನಿಸುತ್ತೇವೆ.
-ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ
ಭಿನ್ನಾಭಿಪ್ರಾಯ ಎನ್ನುವುದು ಎಲ್ಲಾ ಕಡೆ ಇರುತ್ತದೆ. ಹಾಗಿದ್ದ ಮೇಲೆ ಕಾಂಗ್ರೆಸ್‍ನಲ್ಲಿ ಇರುವುದಿಲ್ಲವೇ ? ಅಣ್ಣತಮ್ಮಂದಿರಲ್ಲೂ ಸಮಸ್ಯೆ ಇರುತ್ತದೆ. ಅದೇರೀತಿ ಇಲ್ಲಿಯೂ ಇದೆ. ಸರಿಯಾಗುತ್ತದೆ.
-ಅಂಬರೀಷ್ ವಸತಿ ಸಚಿವ
Advertisement