

ಬೆಂಗಳೂರು: ವಿಧಾನಸಭಾ ಕಲಾಪ ಸಂದರ್ಭದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ರು. 4,690 ಕೋಟಿ ನೆರವಿನ ಕೊರತೆಯಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಏರಿದ ದನಿಯಲ್ಲಿ ಮಾತಿನ ಚಕಮಕಿ ನಡೆದಿದೆ. ಸಿಎಂ ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸತ್ಯ ಸಂಗತಿ ತಿಳಿಸದೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕರು ಆರೋಪಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಉತ್ತರ ನೀಡುವ ಸಮಯದಲ್ಲಿ ತಡೆಯೊಡ್ಡುವುದು ಸರಿಯಲ್ಲ, ಆಡಳಿತ ಮತ್ತು ವಿಪಕ್ಷಗಳ ನಡುವೆ ಮಾತಿನ ಚಕಮಕಿ ಸರಿಯಲ್ಲ. ಇದನ್ನೇ ಮುಂದುವರೆಸಿದರೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಮಾತಿನ ಚಕಮಕಿ ನಡೆಯುತ್ತಿರುವ ಸಂದರ್ಭದಲ್ಲಿ ಬಜೆಟ್ ನ ಅಂಕಿ ಅಂಶ ಪ್ರಸ್ತಾಪಿಸಲು ಸಿಎಂ ಮುಂದಾಗಿದ್ದರು, ಇದನ್ನು ಕೇಳಲು ನಿರಾಕರಿಸಿದ ಬಿಜೆಪಿ ಪ್ರಸ್ತಾಪನೆಗೆ ಅಡ್ಡಿ ಪಡಿಸಿತು. ಇದರಿಂದ ಕೋಪಗೊಂಡ ಸಿಎಂ ಸಿದ್ದರಾಮಯ್ಯನವರು ತಮ್ಮ ಕೈಯಲ್ಲಿದ್ದ ಬಜೆಟ್ ಪ್ರತಿಯನ್ನೇ ಕಿತ್ತು ಎಸೆದರು. ಅಲ್ಲದೇ ಸಿ.ಟಿ ರವಿಯನ್ನು ಹೊರಹಾಕಲು ಸಿದ್ದರಾಮಯ್ಯ ಸೂಚಿಸಿದರು.