
ಬೆಂಗಳೂರು: ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡುತ್ತಿರುವುದು ಕುಲಪತಿಗಳ ನೇಮಕ ಬಗ್ಗೆ ಕೇಳುವುದಕ್ಕಲ್ಲ. ಬದಲಾಗಿ ವಿಧಾನಮಂಡಲ
ಅಧಿವೇಶನದ ಬಗ್ಗೆ ಚರ್ಚಿಸುವುದಕ್ಕಾಗಿ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ಮುಜರಾಯಿ ಇಲಾಖೆ ಭಾನುವಾರ ನಗರದಲ್ಲಿ ಆರಂಭಿಸಿದ `ಸ್ವಚ್ಛ ಮಂದಿರ ಅಭಿಯಾನ'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಧಾನಮಂಡಲ ಅಧಿವೇಶನ ನಡೆಸುವ ಸಂಬಂಧ
ಚರ್ಚಿಸಲು ಮುಖ್ಯಮಂತ್ರಿ ಸಿದ್ದ ರಾಮಯ್ಯ ಸೋಮವಾರ ರಾಜ್ಯಪಾಲ ವಿ.ಆರ್. ವಾಲಾ ಅವರನ್ನು ಭೇಟಿ ಮಾಡಲಿದ್ದಾರೆ. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ರಾಜ್ಯಪಾಲರಿಗೆ ಮಾಹಿತಿಯನ್ನೂ ನೀಡಿ ಅಗತ್ಯ ಸಲಹೆ ಪಡೆಯಲಾಗುತ್ತದೆ ಎಂದರು.
ರಾಜ್ಯಪಾಲರು ಸರ್ಕಾರದ ತೀರ್ಮಾನಗಳನ್ನು ಪ್ರಶ್ನಿಸುವುದು, ವಾಪಸ್ ಕಳುಹಿಸುವುದು ಸಾಮಾನ್ಯ. ಇದು ಎಲ್ಲಾ ರಾಜ್ಯಗಳಲ್ಲೂ ಇರುತ್ತದೆ. ಆದ್ದರಿಂದ ಮುಖ್ಯಮಂತ್ರಿ ಅವರು ರಾಜ್ಯಪಾಲರನ್ನು ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದರು ಜಯಚಂದ್ರ. ಇದಕ್ಕೂ ಮುನ್ನ ಚಾಮರಾಜಪೇಟೆಯ ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಸ್ವಚ್ಛ ಮಂದಿರ ಅಭಿಯಾನ ಕೈಗೊಂಡಿರುವ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದ ಸಚಿವರು, ಈ ಅಭಿಯಾನ ಗ್ರಾಮೀಣ ಭಾಗದ ದೇವಸ್ಥಾನಗಳಿಗೂ ವಿಸ್ತರಣೆಯಾಗಬೇಕು. ಗ್ರಾಮೀಣ ಭಾಗದ ದೇವಸ್ಥಾನಗಳಿಂದ ಬರುವ ಆದಾಯವನ್ನು ಅದೇ ದೇವಸ್ಥಾನದಲ್ಲಿ ಸೌಲಭ್ಯ ಕಲ್ಪಿಸಲು ಹಾಗೂ ಸ್ವಚ್ಛತೆಗೆ ಇಲಾಖೆ ಅಧಿಕಾರಿಗಳು ವೆಚ್ಚ ಮಾಡಬೇಕು ಎಂದು ಸೂಚಿಸಿದರು. ಇಲಾಖೆ ಆಯುಕ್ತರಾದ ಪಲ್ಲವಿ
ಹಾಜರಿದ್ದರು.
Advertisement