
ಬೆಂಗಳೂರು: ರಾಜ್ಯಪಾಲರು ಮತ್ತು ಸರ್ಕಾರದ ಮಧ್ಯೆ ಯಾವುದೇ ಸಂಘರ್ಷ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ಭರತ್‍ಲಾಲ್ ಮೀನಾ ಜತೆ ರಾಜ್ಯಪಾಲ ವಿ.ಆರ್. ವಾಲಾ ಅವರನ್ನು ಸೋಮವಾರ ಸಂಜೆ ಭೇಟಿ ಮಾಡಿ ಎರಡು ಗಂಟೆ ಕಾಲ ಚರ್ಚೆ ನಡೆಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು. ಆರು ವಿವಿಗಳ ಕುಲಪತಿ ನೇಮಕ ಸಂಬಂಧ ರಾಜ್ಯಪಾಲರು ಕೆಲ ಸ್ಪಷ್ಟೀಕರಣ ಕೇಳಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಮಾಹಿತಿ ಒದಗಿಸಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಪಾಲರು ಸರ್ಕಾರದಿಂದ ಸ್ಪಷ್ಟೀಕರಣ ಕೇಳುತ್ತಾ ಇರುತ್ತಾರೆ.
ಅದಕ್ಕೆ ನಾವು ಉತ್ತರ ಕೊಡಬೇಕಾಗುತ್ತದೆ. ಇದನ್ನು ಸಂಘರ್ಷ ಎನ್ನಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕೆಪಿಎಸ್‍ಸಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ವಿಚಾರದ ಬಗ್ಗೆ ಮಾತುಕತೆ ನಡೆದಿಲ್ಲ ಎಂದರು. ಸಂಜೆ 6.55 ರ ಸುಮಾರಿಗೆ ಸಚಿವರ ಜತೆ ಸಿಎಂ ರಾಜಭವನಕ್ಕೆ ತೆರಳಿದರು. ಅರ್ಧ ಗಂಟೆ ಕುಲಪತಿ ನೇಮಕ ಸಂಬಂಧ ಚರ್ಚೆ ನಡೆಯಿತು. ಆ ಬಳಿಕ ಉನ್ನತ ಶಿಕ್ಷಣ ಸಚಿವರು ಹೊರಗೆ ಬಂದರು. ಬಳಿಕ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರು ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿದ್ದು, ಮಾತುಕತೆಯ ವಿವರ ಲಭ್ಯವಾಗಿಲ್ಲ.
Advertisement