
ವಿಧಾನಸಭೆ: ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಜಲಾಗಾರ ಸ್ಥಾಪಿಸುವ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಸರ್ವಪಕ್ಷ ನಿಯೋಗದಲ್ಲಿ ತೆರಳಿ ಕೇಂದ್ರ ಸರ್ಕಾರಕ್ಕೆ ಸತ್ಯ ಮನದಟ್ಟು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ತಮಿಳುನಾಡು ರಾಜಕೀಯಕ್ಕಾಗಿ ಕ್ಯಾತೆ ತೆಗೆಯುತ್ತಿದೆ. ನ್ಯಾಯಾಧಿಕರಣ ನೀಡಿರುವ ತೀರ್ಪಿನಂತೆ ಅವರಿಗೆ 192 ಟಿಎಂಸಿ ನೀರು ನೀಡುತ್ತೇವೆ. ವರ್ಷಕ್ಕೆ ಸುಮಾರು 350 ಟಿಎಂಸಿ ನೀರು ಹೋಗುತ್ತಿದೆ. ಸಮುದ್ರಕ್ಕೆ ಸೇರುವ ನೀರನ್ನು ನಾವು ಕುಡಿಯಲು ಬಳಸಿಕೊಳ್ಳಲು ಯೋಜನೆ ಮಾಡಿದ್ದೇವೆ. ತಮಿಳುನಾಡು ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿದೆ ಅಷ್ಟೇ. ಇದಕ್ಕೆ ನಾವು ಮಣಿಯುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಈ ವಿಚಾರದಲ್ಲಿ ನಮ್ಮೆಲ್ಲರ ಸಂಪೂರ್ಣ ಬೆಂಬಲ ನಿಮಗಿದೆ ಎಂದರು.
ನಾನು ಜಸ್ಟ್ ಪಾಸ್, ಇಲ್ದಿದ್ರೆ ಡಾಕ್ಟರ್ ಆಗ್ತಿದ್ದೆ
ವಿಧಾನಸಭೆ: ನಾನು ಜಸ್ಟ್ ಪಾಸ್ ಅಷ್ಟೇ, ರ್ಯಾಂಕ್ ಅಲ್ಲ. 35-40ರ ಗಿರಾಕಿಗಳು. ಮೆರಿಟ್ ಆಗಿದ್ದಿದ್ದರೆ ಇಲ್ಲೇಕೆ ಇರುತ್ತಿದ್ದೆ. ಡಾಕ್ಟರ್ ಆಗಿಬಿಡುತ್ತಿದ್ದೆ. ಅದಕ್ಕೆ ನಮ್ಮಪ್ಪ ನಂಗೆ ಸೈನ್ಸ್ ಸಬ್ಜೆಕ್ಟ್ ಕೊಡಿಸಿದ್ರು. ಆದ್ರೆ 35-40 ಗಿರಾಕಿ ಆಗಿದ್ದ ಅದಾಗಲಿಲ್ಲ...ಸಿಎಂ ಸಿದ್ದರಾಮಯ್ಯ ತಮ್ಮನ್ನು ತಾವು `ಹೊಗಳಿಕೊಂಡ' ಬಗೆ ಇದು. ಬಜೆಟ್ ಚರ್ಚೆ ಮೇಲೆ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿಯ ಸಿಟಿ ರವಿ ಶೇ.81ರಷ್ಟು ಬಜೆಟ್ ಅನುಷ್ಠಾನ ಆಗಿದೆ ಎಂದರೆ ಅದು ಫಸ್ಟ್ ಕ್ಲಾಸ್ ಅಷ್ಟೇ, ರ್ಯಾಂಕ್ ಅಲ್ಲವಲ್ಲಾ ಎಂದು ಕಾಲೆಳೆದರು. ಅದಕ್ಕೆ ಉತ್ತರಿಸಿದ ಸಿದ್ದು, ನಮ್ಮಪ್ಪ ಬೈದು ಬೈದು ನನಗೆ ಸೈನ್ಸ್ ಕೊಡಿಸಿದ್ದ. ಇಲ್ಲ ಅಂದ್ರೆ ಮೇಯಿಸೋಕೆ ಹಾಕ್ತೀನಿ ಅಂದಿದ್ದ. ಕನ್ನಡ ಮೀಡಿಯಂ ಓದಿದ್ದ ನಾನು ಕಾಲೇಜಿನಲ್ಲಿ ಸೈನ್ಸ್ ತಗೊಂಡಾಗ 35-40 ಅಷ್ಟೇ ಮಾಕ್ರ್ಸ್ ಪಡೆದೆ. ಬಿಎಸ್ಸಿಯಲ್ಲೂ ಜಸ್ಟ್ ಪಾಸ್. ರ್ಯಾಂಕ್, ಮೆರಿಟ್ ಆಗಿದ್ರೇ ಇಲ್ಲೇಕೆ ಇರ್ತಿದ್ದೆ ಎಂದರು.
ಬಿಜೆಪಿ ಸಭಾತ್ಯಾಗದ ಮಧ್ಯೆ ಒಪ್ಪಿಗೆ
ಬಿಜೆಪಿ ಸಭಾತ್ಯಾಗದ ನಡುವೆಯೋ 4 ತಿಂಗಳ ಲೇಖಾನುದಾನಕ್ಕೆ ಸಮ್ಮತಿ, 4 ತಿಂಗಳ ಧನವಿನಿಯೋಗ (ಲೇಖಾನುದಾನ) ಕ್ಕೆ ದನಿ ಮತದಿಂದ ಅಂಗೀಕಾರ ದೊರೆಯಿತು. ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2015-16ನೇ ಸಾಲಿನ ಹಣಕಾಸು ಭಾಗ ವರ್ಷದ ಸೇವೆಗಳಿ ಗಾಗಿ ಸಂದಾಯ ಮತ್ತು ವಿನಿಯೋಗಕ್ಕೆ 4 ತಿಂಗಳ ಲೇಖಾನುದಾನಕ್ಕೆ ಸಮ್ಮತಿ ನೀಡ ಬೇಕು ಎಂದು ಮನವಿ ಮಾಡಿದರು. ಇದನ್ನು ಪ್ರಸ್ತಾಪಿಸಿ, ಸದನದ ಮತಕ್ಕೆ ಸ್ಪೀಕರ್ ಹಾಕಿದರು. ದನಿ ಮತದಿಂದ ಧನವಿನಿಯೋಗ ವಿಧೇಯಕ ಅಂಗೀಕಾರವಾಯಿತು. ಬಜೆಟ್ ಮೇಲಿನ ಚರ್ಚೆಯಲ್ಲಿ ನೀರಾವರಿ ಸೇರಿದಂತೆ ಆದ್ಯತಾ ವಲಯಕ್ಕೆ ಹೆಚ್ಚಿನ ಒತ್ತು, ಅನುದಾನ ನೀಡಲಾಗಿಲ್ಲ. ಹೀಗಾಗಿ, ಸರ್ಕಾರದ ಈ ನೀತಿ ವಿರೋಧಿ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೊರನಡೆದರು. ಬಿಜೆಪಿ ಸದಸ್ಯರು ನಾಯಕನನ್ನು ಹಿಂಬಾಲಿಸಿದರು. ಸಿಎಂ ಉತ್ತರ ಅಂತಿಮಚರಣದಲ್ಲಿದ್ದಾಗಲೇ ಎಚ್.ಕೆ. ಕುಮಾರಸ್ವಾಮಿ ಸದನದಿಂದ ಹೊರನಡೆದಿದ್ದರು. ಹೀಗಾಗಿ, ಜೆಡಿಎಸ್ ಸದಸ್ಯರು ಯಾವುದೇ ಮಾತಿಲ್ಲದೆ ಸುಮ್ಮನೆ ಕುಳಿತಿದ್ದರು.
Advertisement