
ಕೆ.ಆರ್.ಪುರ: ಮುಂದಿನ 15 ವರ್ಷಗಳಲ್ಲಿ ಭಾರತ ಆರ್ಥಿಕ ಪ್ರಗತಿ ಸಾಧಿಸಿ, ಜಗತ್ತಿನ `ಸೂಪರ್ ಪವರ್ ದೇಶ'ವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಆರ್. ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.
ಚನ್ನಸಂದ್ರದ ಎಂವಿಜೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ `88ನೇ ಸಂಸ್ಥಾಪಕರ ದಿನಾಚರಣೆ'ಯಲ್ಲಿ ಮಾತನಾಡಿದ ಅವರು, `ಈಗಾಗಲೇ ತನ್ನ ಆರ್ಥಿಕ ನೀತಿಗಳಿಂದ ಜಗತ್ತಿನಲ್ಲಿ ಮುನ್ನಡೆ ಸಾಧಿಸಿರುವ ಚೀನಾ ದೇಶವನ್ನು ಭಾರತ ಹಿಂದಿಕ್ಕಲಿದೆ. ದೇಶ ಆರ್ಥಿಕವಾಗಿ ಪ್ರಬಲವಾಗಲು ಹಾಗೂ ಮುನ್ನಡೆ ಸಾಧಿಸಲು ಯುವ ಜನಾಂಗ ಕೈ ಜೋಡಿಸ ಬೇಕು. ಮುಂದುವರಿದ ರಾಷ್ಟ್ರಗಳು ಹೊಂದಿಲ್ಲದ ಯುವ ಸಮೂಹವನ್ನು ಭಾರತ ಹೊಂದಿದ್ದು, ಯುವ ಪೀಳಿಗೆ ನಿರ್ಧರಿಸಿದರೆ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯಬಹುದು. ವಿದ್ಯಾರ್ಥಿಗಳು ಹಣದ ದಂಧೆಗೆ ಹೋಗದೆ, ಜ್ಞಾನದ ಹಿಂದೆ ಹೋಗಬೇಕು. ಹಣ ಸಂಪಾದಿಸುವುದಕ್ಕಿಂತ ಜ್ಞಾನ ಸಂಪಾದನೆಯ ಮಾರ್ಗ ಶಾಶ್ವತವಾಗಿ ಕಾಪಾಡುತ್ತದೆ.
ವಿದ್ಯಾಭ್ಯಾಸದ ಸಂದರ್ಭದಲ್ಲಿ ಯಾವುದೇ ದುಶ್ಚಟಗಳಿಗೆ ಮಾರು ಹೋಗದೆ ಜ್ಞಾನಾರ್ಜನೆ ಕಡೆಗೆ ಹೆಚ್ಚಿನ ಗಮನ ನೀಡಬೇಕು'ಎಂದರು. ದೂರದರ್ಶಿ ವ್ಯಕ್ತಿತ್ವ ಹೊಂದಿದ್ದ ಶಿಕ್ಷಣ ತಜ್ಞ ಡಾ.ಎಂ.ಜಯರಾಮನ್ ಕಟ್ಟಿ ಬೆಳೆಸಿದ ವಿದ್ಯಾಸಂಸ್ಥೆಗಳಿಂದ ಅನೇಕ ವಿದ್ಯಾರ್ಥಿಗಳು ಜೀವನ ರೂಪಿಸಿಕೊಂಡಿದ್ದಾರೆ. ಹಿಂದೆ ಶಿಕ್ಷಣ ಪಡೆಯಲು ಕೊಠಡಿ, ಪ್ರಯೋಗಾಲಯ ಸೇರಿದಂತೆ
ಮೂಲಸೌಕರ್ಯಗಳ ಕೊರತೆ ಯಿತ್ತು. ಈಗ ಕಾಲ ಬದಲಾಗಿದ್ದು ಅತ್ಯುತ್ತಮ ವ್ಯವಸ್ಥೆಗಳನ್ನು ವಿದ್ಯಾಸಂಸ್ಥೆಗಳು ಹೊಂದಿವೆ. ವಿದ್ಯಾರ್ಥಿಗಳು ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ವಿಭಾಗಗಳಲ್ಲಿ ಸಾಧನೆ ತೋರಿದ ಹಾಗೂ ಪದವಿ ಮಟ್ಟದಲ್ಲಿ ಮೊದಲ 15 ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ ರು.1ಲಕ್ಷ, ಸ್ನಾತಕೋತ್ತರ ವಿಭಾಗಗಳಲ್ಲಿ ರ್ಯಾಂಕ್ ಪಡೆದವರಿಗೆ ರು.50ಸಾವಿರ ಪ್ರೊತ್ಸಾಹ ಧನ ನೀಡಿ ಗೌರವಿಸಲಾಯಿತು.
Advertisement