ಸರ್ಕಾರದ ಹೆಡೆಮುರಿ ಕಟ್ಟಲು ಬಿಜೆಪಿ ರಣತಂತ್ರ

ಈ ಅಧಿವೇಶನದಲ್ಲಿ ಸರ್ಕಾರದ ಹೆಡೆಮುರಿ ಕಟ್ಟಲು ಬಿಜೆಪಿ ರಣತಂತ್ರ ರೂಪಿಸಿದೆ. ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾರ್ಯತಂತ್ರದ ಬಗ್ಗೆ ಶಾಸಕರು ಚರ್ಚೆ ನಡೆಸಿದರು...
ಬಿಜೆಪಿ ವಿಪಕ್ಷ ಮುಖಂಡ ಜಗದೀಶ್ ಶೆಟ್ಟರ್ (ಸಂಗ್ರಹ ಚಿತ್ರ)
ಬಿಜೆಪಿ ವಿಪಕ್ಷ ಮುಖಂಡ ಜಗದೀಶ್ ಶೆಟ್ಟರ್ (ಸಂಗ್ರಹ ಚಿತ್ರ)

ಬೆಂಗಳೂರು: ಈ ಅಧಿವೇಶನದಲ್ಲಿ ಸರ್ಕಾರದ ಹೆಡೆಮುರಿ ಕಟ್ಟಲು ಬಿಜೆಪಿ ರಣತಂತ್ರ ರೂಪಿಸಿದೆ. ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾರ್ಯತಂತ್ರದ ಬಗ್ಗೆ ಶಾಸಕರು ಚರ್ಚೆ ನಡೆಸಿದರು.

ಪ್ರಮುಖವಾಗಿ ಒಂದೇ ದಿನ ಎರಡು ವಿಚಾರದಲ್ಲಿ ಸರ್ಕಾರದ ಮೇಲೆ ಮುಗಿಬೀಳುವ ತೀರ್ಮಾನಕ್ಕೆಬರಲಾಯಿತು. ವಿಧಾನಸಭೆಯಲ್ಲಿ ಬರ ಮತ್ತು ರೈತರ ಆತ್ಮಹತ್ಯೆ ವಿಚಾರದಲ್ಲಿ ಸರ್ಕಾರದ  ವೈಫಲ್ಯಗಳನ್ನು ಗುರಿ ಮಾಡುವುದು. ಅದೇ ರೀತಿ ಪರಿಷತ್ತಿನಲ್ಲಿ ಕಾನೂನು ಸುವ್ಯವಸ್ಥೆ ವಿಫಲತೆಯ ಅಸ್ತ್ರ ಹೂಡಲು ನಿರ್ಧರಿಸಲಾಯಿತು. 9 ದಿನಗಳಲ್ಲಿ ಪಕ್ಷವು ಕೈಗೊಳ್ಳಬೇಕಾದ ಹೋರಾಟದ ಹಂತಗಳ ಬಗ್ಗೆ ಮುಖಂಡರು ಶಾಸಕರಿಗೆ ಮಾರ್ಗದರ್ಶನ ಮಾಡಿದರು. ಇದೇ ವೇಳೆ ಸುಮಾರು 15 ಶಾಸಕರು ತಮ್ಮ ವ್ಯಾಪ್ತಿಕ್ಷೇತ್ರದ ಸಮಸ್ಯೆಗಳ ಕುರಿತು ಸದನದಲ್ಲಿ  ಚರ್ಚಿಸಬೇಕಾದ ವಿಷಯವನ್ನು ಸಭೆಯ ಗಮನಕ್ಕೆ ತಂದರು.

ಟಿಪ್ಪು ಜಯಂತಿ ವಿವಾದ, ಅಕ್ರಮ ಮರಳು ಗಣಿಗಾರಿಕೆ, ವಿದ್ಯುತ್ ಸಮಸ್ಯೆ, ಸಮಾಜ ಕಲ್ಯಾಣ ಸಚಿವ ಆಂಜನೇಯ ಪ್ರಕರಣವನ್ನು ನಂತರದಲ್ಲಿ ತೆಗೆದುಕೊಳ್ಳುವುದಕ್ಕೆ ತೀರ್ಮಾನಿಸಲಾಯಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸದನದಲ್ಲಿ ಆದ್ಯತೆ ಮೇಲೆ ಯಾವ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳಬೇಕು ಮತ್ತು ಸರ್ಕಾರ  ಮೇಲೆ ಯಾವ ರೀತಿ ಒತ್ತಡ ತರಬೇಕೆಂಬ ಬಗ್ಗೆ, ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತೆಂದರು. ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದ್ದು 800ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ಕಡೆಯಿಂದ ರೈತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವಾಗಿಲ್ಲ. ಅದೇ ರೀತಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.  ಟಿಪ್ಪು ಜಯಂತಿ, ಕೋಮುಗಲಭೆಯಂದಿದಾಗಿ ಇಡೀ ವಾತಾವರಣವೇ ಕೆಟ್ಟುಹೋಗಿದೆ ಎಂದು ಟೀಕಿಸಿದರು.

ಭ್ರಷ್ಟಾಚಾರ ಪ್ರಕರಣದಲ್ಲಿ ಈವರೆಗೆ ಸಚಿವರು ರಾಜಿನಾಮೆ ಕೊಟ್ಟಿಲ್ಲ. ಈ ಬಗ್ಗೆಯೂ ಹೋರಾಟ ಮಾಡುತ್ತೇವೆ. ಕಸ್ತೂರಿ ರಂಗನ್ ವರದಿ, ಅಕ್ರಮ ಮರಳು ಗಣಿಗಾರಿಕೆ, ವಿದ್ಯುತ್ ಸಮಸ್ಯೆ  ಸೇರಿದಂತೆ ಅನೇಕ ವಿಚಾರಗಳನ್ನು ಎತ್ತಬೇಕೆಂದು ಸಭೆಯಲ್ಲಿ ನಿರ್ಧರಿಸಲಾ-ಯಿತೆಂದರು. ಸಭೆ ಕುರಿತು ಮಾತನಾಡಿದ ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಕರ್ನಾಟಕದಲ್ಲಿ  ಸರ್ಕಾರವೇ ಇಲ್ಲ, ಇದು ಜನರ ಗಮನಕ್ಕೂ ಬಂದಿದೆ ಕಾಂಗ್ರೆಸ್ ಶಾಸಕರ ಗಮನಕ್ಕೂ ಬಂದಿದೆ ಎಂದ ಅವರು, ಎರಡೂವರೆ ವರ್ಷದ ಸಿದ್ದರಾಮಯ್ಯ ಸರ್ಕಾರದ ಆಡಳಿತ ವೈಫಲ್ಯ ಎತ್ತಿ  ಹಿಡಿಯಲು ಅನೇಕ ವಿಚಾರಗಳಿವೆ ಎಂದರು.

ಸದನಕ್ಕೆ ಬಂದ ಪರಮೇಶ್ವರ
ವಿಧಾನಸಭೆ:
ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಸೋಮವಾರ ವಿಧಾನಸಭೆ ಕಲಾಪಕ್ಕೆ ಹಾಜರಾದರು. ಅವರಿಗೆ ಆಡಳಿತ ಪಕ್ಷದ ಭಾಗದಲ್ಲಿ 3ನೇ  ಸಾಲಿನ ಎರಡನೇ ಸೀಟ್ ಹಂಚಿಕೆ ಮಾಡಲಾಗಿದ್ದು, ಎಡಭಾಗದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹಾಗೂ ಬಲಭಾಗದಲ್ಲಿ ಅಬಕಾರಿ ಸಚಿವ ಮನೋಹರ್ ತಹಶೀಲ್ದಾರ್ ಅವರಿಗೆ  ಆಸನ ವ್ಯವಸ್ಥೆ ಮಾಡಲಾಗಿದೆ. ಇನ್ನಿಬ್ಬರು ನೂತನ ಸಚಿವರಾದ ಎ.ಮಂಜು ಹಾಗೂ ವಿನಯ್ ಕುಲಕರ್ಣಿ ಕೂಡ ಸದನಕ್ಕೆ ಆಗಮಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com