ಮೇಲ್ಮನೆ ಚುನಾವಣೆ (ಸಂಗ್ರಹ ಚಿತ್ರ)
ಮೇಲ್ಮನೆ ಚುನಾವಣೆ (ಸಂಗ್ರಹ ಚಿತ್ರ)

ಮೇಲ್ಮನೆ ಗಾದಿಗೆ ಬಿರುಸಿನ ಕಸರತ್ತು ಶುರು

ಮೇಲ್ಮನೆ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆಗಳು ಆರಂಭವಾಗಿದೆ...

ಬೆಂಗಳೂರು: ಮೇಲ್ಮನೆ ಚುನಾವಣೆಗೆ ಮುಹೂರ್ತ ನಿಗದಿಯಾಗುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆಗಳು ಆರಂಭವಾಗಿದೆ.

ವಿಶೇಷವಾಗಿ ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ.  ಮೈತ್ರಿ ವಿಷಯ ಕುರಿತು ಉಂಟಾದ ಗೊಂದಲದ ಬಗ್ಗೆ ಜೆಡಿಎಸ್ ಪಕ್ಷದೊಳಗೆ ಕೆಸರೆರಚಾಟ ತಾರಕ್ಕೇರಿದೆ. ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ  ಮೈತ್ರಿ ಕಸರತ್ತು ಮುರಿ ದುಬಿದ್ದಿದೆ. ಬಿಜೆಪಿಯನ್ನು ಹೆಚ್ಚು ಕಡೆ ಸೋಲಿಸುವ ಕಾಂಗ್ರೆಸ್ ಗುರಿ, ಅದೇ ರೀತಿ ಕಾಂಗ್ರೆಸ್ ಬೆಂಬಲ ಪಡೆದು ಹೆಚ್ಚಿನ ಸ್ಥಾನ ಗೆಲ್ಲುವ ಜೆಡಿಎಸ್ ಆಸೆ ಈ ಬೆಳವಣಿಗೆಯಿಂದಾಗಿ ಕಮರಿದೆ.

ಮೈತ್ರಿ ಗೊಂದಲ ಕುರಿತಂತೆ ಶನಿವಾರ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನಮ್ಮ ಬಳಿ  ಮೈತ್ರಿಯ ಯಾವುದೇ ಪ್ರಸ್ತಾಪವಿಲ್ಲ, ಆ ವಿಚಾರವಾಗಿ ಮಾತೂ ಆಡಿಲ್ಲ ಎಂದು  ಹೇಳಿದ್ದಾರೆ. ಇನ್ನೊಂದೆಡೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಪ್ರತಿಕ್ರಿಯೆ ನೀಡಿ, ಎಲ್ಲಾ 25 ಸ್ಥಾನಗಳಿಗೆ ಜೆಡಿಎಸ್‍ನಿಂದ ಸ್ವತಂತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸುವುದರೊಂದಿಗೆ  ಕಾಂಗ್ರೆಸ್‍ನೊಂದಿಗಿನ  ಮೈತ್ರಿ ಪ್ರಸ್ತಾಪಕ್ಕೆ ಅಧಿಕೃತವಾಗಿ ತೆರೆಬಿದ್ದಿದೆ. ಇದೇ ವೇಳೆ ಪರಿಷತ್ ಚುನಾವಣೆ ವಿಚಾರದಲ್ಲಿ ಜೆಡಿಎಸ್‍ನಿಂದ ಸಮಾನ ಅಂತರ ಕಾಯ್ದುಕೊಂಡುಬಂದ ಬಿಜೆಪಿ ಮಾತ್ರ ಸದ್ದಿಲ್ಲದೇ  ತನ್ನ ಚುನಾವಣಾ ಪ್ರಕ್ರಿಯೆಗೆ ವೇಗ ನೀಡಿದೆ.

ಬಿಜೆಪಿ ತಂತ್ರ: 20 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಬಿಜೆಪಿಯು, ಇನ್ನೆರಡು ದಿನಗಳಲ್ಲಿ ಪಟ್ಟಿಯನ್ನು ಬಿಡುಗಡೆಗೊಳಿಸುವ ಉತ್ಸಾಹದಲ್ಲಿದೆ. ಎಲ್ಲಾ ಅಭ್ಯರ್ಥಿಗಳಿಗೂ ಚುನಾವಣೆ  ತಯಾರಿಗೆ ಸೂಚಿಸಿದೆ. ಪಕ್ಷದ ಅಪ್ಪಣೆಯಂತೆ ಅಭ್ಯರ್ಥಿಗಳೂ ಸಹ ತಮ್ಮ ಚಟುವಟಿಕೆಯನ್ನು ಶುರುವಿಟ್ಟುಕೊಂಡಿದ್ದಾರೆ. ಈ ಚುನಾವಣೆ ವಿಚಾರವಾಗಿ ಹೇಳುವುದಾದರೆ, ಉಳಿದೆರಡು ಪಕ್ಷಗಳಿಂದ ಬಿಜೆಪಿ ಮುಂಚಿತವಾಗಿಯೇ ತನ್ನ ಪ್ರಕ್ರಿಯೆ ಆರಂಭಿಸಿ ಅಖಾಡಕ್ಕಿಳಿದಿದೆ. ಈ ನಿಟ್ಟಿನಲ್ಲಿ ಪಕ್ಷದ ಸಂಘಟನೆಯು ತಂತ್ರ ರೂಪಿಸಲಾರಂಭಿಸಿದೆ.

ಜೆಡಿಎಸ್ ತಿಣುಕಾಟ: ಕಾಂಗ್ರೆಸ್ ಜೊತೆಗೆ  ಮೈತ್ರಿ ಮಾಡಿಕೊಂಡು ಹೆಚ್ಚಿನ ಸ್ಥಾನ ಗೆಲ್ಲುವ ಆಸೆಯಲ್ಲಿದ್ದ ಜೆಡಿಎಸ್‍ಗೆ ಈಗ ಪಕ್ಷದೊಳಗೆ ಇರುಸು-ಮುರುಸು ಎದುರಿಸುವಂತಾಗಿದೆ. ಕಾಂಗ್ರೆಸ್ ಜತೆ  ಮೈತ್ರಿಗೆ ಒಪ್ಪದ ಪಕ್ಷದ ರಾಜ್ಯಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರ ನಡೆ ಸ್ವಪಕ್ಷೀಯ ಶಾಸಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆಯಲ್ಲದೇ, ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವ ಮೂಲಕ ಜೆಡಿಎಸ್‍ನೊಳಗೆ ಎಲ್ಲವೂ ಸರಿ ಇಲ್ಲ ಎಂಬ ಗುಟ್ಟನ್ನು ಹೊರಹಾಕಿದ್ದಾರೆ. ಇನ್ನೊಂದು ಅಚ್ಚರಿ ಎಂದರೆ ದೇವೇಗೌಡರು ಕಾಂಗ್ರೆಸ್‍ನೊಂದಿಗೆ  ಮೈತ್ರಿ ಒಲವು ವ್ಯಕ್ತಪಡಿಸಿದ ವೇಳೆಗಾಗಲೇ  ಕುಮಾರಸ್ವಾಮಿ ಎಲ್ಲಾ 25 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಕೊಂಡಿದ್ದರು. ಚಿತ್ರದುರ್ಗ ಮತ್ತು ಬಳ್ಳಾರಿ ಯಲ್ಲಿ ಮಾತ್ರ ಅಭ್ಯರ್ಥಿಗಳು ಅಂತಿಮವಾಗಿಲ್ಲ ಎಂದು ಪಕ್ಷದ ಮೂಲಗಳು  ಖಚಿತಪಡಿಸಿವೆ.

ಕಾಂಗ್ರೆಸ್ ಬಣ: ತಾನು ಹೆಚ್ಚು ಸ್ಥಾನ ಗೆಲ್ಲುವುದಕ್ಕಿಂತ ಬಿಜೆಪಿಯನ್ನು ಹೆಚ್ಚಿನ ಸ್ಥಾನಗಳಲ್ಲಿ ಸೋಲಿಸಬಹುದೆಂದು ಕನಸುಕಾಣುತ್ತಿದ್ದ ಕಾಂಗ್ರೆಸ್ ಪಾಳಯ ಈಗ ಏಕಾಂಗಿಯಾಗಿ ಹೋರಾಡಬೇಕಿದೆ. ಈ  ಮಧ್ಯೆಯೇ ಬಣ ರಾಜಕೀಯ ಹೆಚ್ಚಾಗಿದ್ದು ಕೊನೆ ಹಂತದಲ್ಲಿ ತಾವು ಹೇಳಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆಂದು ಮುಖಂಡರು ಒತ್ತಡ ಹೇರಲಾರಂಭಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೂ ಈ  ಚುನಾವಣೆ ಮಹತ್ವದ್ದಾಗಿರುವುದರಿಂದ ಅವರೂ ಈ ಬಗ್ಗೆ ಪಕ್ಷದೊಳಗೆ ಅನೇಕ ಸವಾಲು ಎದುರಿಸಬೇಕಾಗಿ ಬಂದಿದೆ. ಪ್ರದೇಶವಾರು ರಾಜಕೀಯ ಹೆಚ್ಚಾಗಿದ್ದು, ಅಲ್ಲಿನ ಪ್ರಮುಖ ಹಿರಿಯ ಕಾಂಗ್ರೆಸಿಗರ  ಮಾತು ಕೇಳುವ ಅನಿವಾರ್ಯತೆ ಮುಖ್ಯಮಂತ್ರಿಯವರಿಗೆ ಎದುರಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com