ಪೂಜಾರಿ ಆಕ್ರೋಶಕ್ಕೆ ಕಾರಣವಾಯ್ತು ಎಸಿಬಿ; ಒಂದೇ ವೇದಿಕೆಯಲ್ಲಿ ಕೈ ನಾಯಕರ ವಾಕ್ಸಮರ

ಇಡೀ ರಾಜ್ಯದ ಕೆಂಗಣ್ಣಿಗೆ ಗುರಿಯಾಗಿರುವ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಸ್ಥಾಪನೆ ವಿಚಾರ ಇದೀಗ ಕಾಂಗ್ರೆಸ್ ನಾಯಕರಲ್ಲೂ ವಾಕ್ಸಮರಕ್ಕೆ ಕಾರಣವಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ನಿರ್ಧಾರವನ್ನು ಹಿರಿಯ..
ಜನಾರ್ಧನ ಪೂಜಾರಿ ಮತ್ತು ಸಚಿವ ಆಂಜನೇಯ (ಸಂಗ್ರಹ ಚಿತ್ರ)
ಜನಾರ್ಧನ ಪೂಜಾರಿ ಮತ್ತು ಸಚಿವ ಆಂಜನೇಯ (ಸಂಗ್ರಹ ಚಿತ್ರ)

ಬೆಂಗಳೂರು: ಇಡೀ ರಾಜ್ಯದ ಕೆಂಗಣ್ಣಿಗೆ ಗುರಿಯಾಗಿರುವ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಸ್ಥಾಪನೆ ವಿಚಾರ ಇದೀಗ ಕಾಂಗ್ರೆಸ್ ನಾಯಕರಲ್ಲೂ ವಾಕ್ಸಮರಕ್ಕೆ ಕಾರಣವಾಗಿದ್ದು, ಸಿಎಂ ಸಿದ್ದರಾಮಯ್ಯ  ಅವರ ನಿರ್ಧಾರವನ್ನು ಹಿರಿಯ ಮುಖಂಡ ಜನಾರ್ಧನ ಪೂಜಾರಿ ಬಹಿರಂಗವಾಗಿಯೇ ಟೀಕಿಸಿದ್ದಾರೆ.

ಬೆಂಗಳೂರಿನ ಹುಳಿಮಾವಿನಲ್ಲಿ ಬಿಲ್ಲವ ಅಸೋಸಿಯೇಷನ್‌ ಸಂಸ್ಥೆ ನಿರ್ಮಿಸಿರುವ ಬಿಲ್ಲವ ಭವನ, ವಾಣಿಜ್ಯ ಸಂಕೀರ್ಣ ಹಾಗೂ ನಾರಾಯಣ ನೇತ್ರಾಲಯದ ನಾಲ್ಕನೇ ಘಟಕ ಉದ್ಘಾಟನಾ  ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಜನಾರ್ಧನ ಪೂಜಾರಿ ಅವರು ಮಾತನಾಡುತ್ತ ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ...  ಅನ್ನಭಾಗ್ಯ, ಕ್ಷೀರಭಾಗ್ಯ, ಬಡವರಿಗೆ ಸಾಲ-ಸೌಲಭ್ಯ ಸೇರಿದಂತೆ ಹಲವು ಉತ್ತಮ ಯೋಜನೆಗಳನ್ನು ಜಾರಿಗೊಳಿಸಿ ಒಳ್ಳೆಯ ಹೆಸರು ಗಳಿಸಿದ್ದೀರಿ. ಆದರೆ, ಈಗ ಎಸಿಬಿ ರಚನೆ ಮೂಲಕ ನಿಮ್ಮ  ಹೆಸರಿಗೆ ಮಸಿ ಬಳಿದುಕೊಳ್ಳುವಂತಹ ಕೆಲಸಗಳನ್ನು ಯಾಕೆ ಮಾಡುತ್ತೀರಿ?’ ಎಂದು ಪೂಜಾರಿ ಪ್ರಶ್ನಿಸಿದರು.

"ಲೋಕಾಯುಕ್ತ ಸಂಸ್ಥೆಯನ್ನು ಇಡೀ ಜಗತ್ತು ಮೆಚ್ಚಿಕೊಂಡಿದೆ. ಅಂತಹ ಸಂಸ್ಥೆಯನ್ನು ದುರ್ಬಲಗೊಳಿಸಿ ಭ್ರಷ್ಟಾಚಾರ ನಿಗ್ರಹ ಪಡೆ ರಚನೆ ಮಾಡಿದ್ದು ತಪ್ಪು. ಎಸಿಬಿಯಿಂದ ನಿಮಗೆ ಕೆಟ್ಟ ಹೆಸರು  ಬರುತ್ತದೆ ಎಂದು ನಾನು ಹೇಳಿದ್ದು ತಪ್ಪಾ? ಎಸಿಬಿ ನಿಮ್ಮ ಅಧೀನದಲ್ಲಿ ಬರುತ್ತದೆ. ಸಿಎಂ, ಸಚಿವರ ವಿರುದ್ಧ ತನಿಖೆ ನಡೆಸಲಾಗುತ್ತದೆಯೇ? ಲೋಕಾಯುಕ್ತದಿಂದಲೇ ಯಡಿಯೂರಪ್ಪ ಜೈಲು  ಸೇರಿದ್ದು, ನೀವು ಮುಖ್ಯಮಂತ್ರಿ ಆಗಿದ್ದು. ಇದು ನೆನಪಿರಲಿ’ ಎಂದು ಪೂಜಾರಿ ಅವರು ಗುಡುಗಿದರು.

ಇದೇ ವೇಳೆ ಮುಖ್ಯಮಂತ್ರಿಗಳ ಸಲಹೆಗಾರರನ್ನು ಟೀಕಿಸಿದ ಪೂಜಾರಿ ಅವರು, "ನಿಮ್ಮ ಸಲಹೆಗಾರರು ಯಾರು?  ಮಸ್ಕ ಹೊಡೆಯುವವರನ್ನು ಪಕ್ಕದಲ್ಲಿ ಇಟ್ಟುಕೊಂಡಿದ್ದೀರಿ. ಅವರನ್ನು ತೆಗೆದು  ನೇರ, ನಿಷ್ಠುರವಾಗಿ ಮಾತನಾಡುವ, ಸಂವಿಧಾನದ ಬಗ್ಗೆ ಓದಿಕೊಂಡಿರುವ ವಿ.ಎಸ್‌.ಉಗ್ರಪ್ಪ ಅವರನ್ನು ಸಲಹೆಗಾರರನ್ನಾಗಿ ಮಾಡಿಕೊಳ್ಳಿ. ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ  ವಿ.ಎಸ್.ಉಗ್ರಪ್ಪ ಅವರಿಗೆ ಕಾನೂನು ಸಚಿವ ಸ್ಥಾನ ನೀಡಬೇಕು. ನಿಮ್ಮ ಸಂಪುಟದಲ್ಲಿ ಕಾನೂನು ಅರಿತ ಉತ್ತಮ ಸಚಿವನಿಲ್ಲ. ಉಗ್ರಪ್ಪ ಕಾನೂನು ತಜ್ಞ. ಅವರಿಗೆ ಸಚಿವ ಸ್ಥಾನ ನೀಡಿ’ ಎಂದು  ಪೂಜಾರಿ ಆಗ್ರಹಿಸಿದರು.

ಇದೇ ವೇಳೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಗೈರಾಗಿದ್ದನ್ನು ಟೀಕಿಸಿದ ಪೂಜಾರಿ ಆರೋಗ್ಯ ಸರಿ ಇಲ್ಲದಿದ್ದರೆ ವ್ಹೀಲ್‌ಚೇರ್‌ನಲ್ಲಿಯಾದರೂ ಕಾರ್ಯಕ್ರಮಕ್ಕೆ ಬರಬೇಕಿತ್ತು. ನಿಮಗೆ ಹುಷಾರ್  ಇಲ್ಲ ಎಂದು ನೆಪ ಹೇಳಬೇಡಿ. ನನಗೂ ಹುಷಾರಿರಲಿಲ್ಲ. ಮಾತ್ರೆ ತೆಗೆದುಕೊಂಡು ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಿಮ್ಮ ಬಳಿ ವೈದ್ಯರು ಇರಲಿಲ್ಲವೇ?’ ಎಂದು ವಾಗ್ದಾಳಿ ನಡೆಸಿದರು.

‘ಉತ್ತಮ ಕೆಲಸ ಮಾಡಿದರೆ ನಿಮ್ಮ ಹಿಂದೆ ಪೂಜಾರಿ ಇರುತ್ತಾನೆ. ಕೆಟ್ಟ ಕೆಲಸ ಮಾಡಿದರೆ ಟೀಕೆ ಮಾಡುವುದನ್ನು ಮಾತ್ರ ಬಿಡುವುದಿಲ್ಲ. ‘ನನಗೆ ನಾಲ್ಕು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ  ಇತ್ತು. ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹ ರಾವ್ ಅವರು ನನ್ನನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದರು. ಆದರೆ, ನನಗೆ ಕಲೆಕ್ಷನ್ ಮಾಡಲು ಬರುವುದಿಲ್ಲ ಅನ್ನುವ  ಕಾರಣದಿಂದಾಗಿ ನಾನು ಮುಖ್ಯಮಂತ್ರಿ ಆಗಲಿಲ್ಲ. ನನ್ನ ಆತ್ಮಚರಿತ್ರೆಯಲ್ಲಿ ಇದನ್ನೆಲ್ಲ ದಾಖಲಿಸುತ್ತೇನೆ. ಪ್ರಾಮಾಣಿಕತೆ ಇಟ್ಟುಕೊಂಡು ಬರೋದು, ಸತ್ಯ ಹೇಳುವುದು ತಪಸ್ಸು. ಸತ್ಯ  ಹೇಳಬಾರದು ಎಂದು ನೀವು ಹೇಳಿ. ನಾಳೆಯಿಂದ ನಾನು ಬಾಯಿ ಮುಚ್ಚಿಕೊಂಡು ಇರುತ್ತೇನೆ. ಸತ್ಯ ಹೇಳಬಾರದೇ? ಎಂದು ಪೂಜಾರಿ ಇದೇ ಸಂದರ್ಭದಲ್ಲಿ  ಹೇಳಿದರು.

ಇದಕ್ಕೂ ಮೊದಲು ಮಾತನಾಡಿದ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಅವರು, ‘ನನ್ನ ರಾಜಕೀಯ ಬೆಳವಣಿಗೆಯಲ್ಲಿ ಜನಾರ್ದನ ಪೂಜಾರಿ ಅವರ ಪಾತ್ರವಿದೆ.  ಐದು ನಿಮಿಷಕ್ಕೊಬ್ಬ  ಮುಖ್ಯಮಂತ್ರಿಯನ್ನು ಬದಲಾಯಿಸುವ ಶಕ್ತಿ ಹೊಂದಿದ್ದಂತಹ ಹಿರಿಯ ನಾಯಕರು ನೀವು. ನಿಸ್ವಾರ್ಥ, ಪ್ರಾಮಾಣಿಕ ರಾಜಕಾರಣಿಯಾದ ನಿಮ್ಮನ್ನು ಚುನಾವಣೆಯಲ್ಲಿ ಜನ ಸೋಲಿಸಿದರು. ನೇರ,  ನಿಷ್ಠುರ ಮಾತುಗಳೇ ನಿಮಗೆ ಕೆಡುಕಾಗಿವೆ.  ರಾಜಕಾರಣಿಗಳಿಗೆ ತಾಳ್ಮೆ ಇರಬೇಕು. ಹೀಗಾಗಿ ಚುನಾವಣೆಯಲ್ಲಿ ಗೆಲ್ಲುವವರೆಗೂ ಸುಮ್ಮನಿರಬೇಕು. ಅಧಿಕಾರ ಸಿಕ್ಕ ಬಳಿಕ ಸತ್ಯ ಹೇಳಬೇಕು. ಹೀಗೆ  ನೀವು ನಡೆದುಕೊಂಡರೆ ಖಂಡಿತಾ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ನೀವು ಗೆದ್ದು ಬರುತ್ತೀರಿ’ ಎಂದು ಹೇಳಿದರು.

ಭಾಷಣ ಮುಗಿದ ತಕ್ಷಣ ಎಚ್‌.ಆಂಜನೇಯ ಅವರು ವೇದಿಕೆಯಿಂದ ನಿರ್ಗಮಿಸಿದರು. ಬಳಿಕ ಮಾತನಾಡಿದ,  ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರು ಆಂಜನೇಯ  ಅವರನ್ನು ತರಾಟೆಗೆ ತೆಗೆದುಕೊಂಡರು. "ಜನಾರ್ಧನ ಪೂಜಾರಿ ಅವರು ಸತ್ಯನಿಷ್ಠೆಗೆ ಹೆಸರಾದವರು. ಕೇಂದ್ರ ಸಚಿವರಾಗಿ ಅತ್ಯತ್ತಮವಾಗಿ ಕಾರ್ಯನಿರ್ವಹಿಸಿದರೂ ಈವರೆಗೆ ಒಂದೇ ಒಂದು  ಭ್ರಷ್ಟಾಚಾರ ಆರೋಪ ಅವರ ಬಳಿ ನುಸುಳಿಲ್ಲ. ಅವರು ಈಗ ಇರುವ ಹಾಗೆಯೇ ಮುಂದೆನೂ ಇರಲಿ. ಕೆಲವರು ಸಚಿವರಾಗುತ್ತಿದ್ದಂತೆ ಬುದ್ಧಿ ಹೇಳುವುದನ್ನು ಕಲಿಯುತ್ತಾರೆ. ಅಡ್ಡದಾರಿ,  ತಪ್ಪುದಾರಿಗಳನ್ನು ಹಿಡಿಯದ ಕಾರಣ ಪೂಜಾರಿ ಚುನಾವಣೆಗಳಲ್ಲಿ ಸೋತಿದ್ದಾರೆ’ ಎಂದು ಆಂಜನೇಯ ಮಾತುಗಳಿಗೆ ಹರಿಪ್ರಸಾದ್ ಗರಂ ಆಗಿ ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com