
ಬೆಂಗಳೂರು: ರಾಸಲೀಲೆ ಪ್ರಕರಣದಿಂದ ಸಚಿವ ಸ್ಥಾನ ಕಳೆದುಕೊಂಡಿದ್ದ ಮಾಜಿ ಸಚಿವ ಎಚ್ ವೈ ಮೇಟಿ ಅವರನ್ನು ಕಾಂಗ್ರೆಸ್ ಪಕ್ಷದಿಂದಲೂ ಅಮಾನತು ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮೇಟಿ ರಾಸಲೀಲೆ ಪ್ರಕರಣದಿಂದಾಗಿ ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಕೆಲ ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಮೇಟಿ ಅವರನ್ನು ಪಕ್ಷದಿಂದ ಅಮಾನತು ಮಾಡುವ ಸಾಧ್ಯತೆಗಳಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಸಭೆಯೊಳಗೆ ಅಶ್ಲೀಲ ವಿಡಿಯೊ ವೀಕ್ಷಿಸಿದ್ದ ಕಾರಣಕ್ಕೆ ಇಬ್ಬರು ಸಚಿವರ ರಾಜಿನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಸತತ ಹೋರಾಟ ನಡೆಸಿತ್ತು. ಇದೀಗ ಅಂತಹುದೇ ಆರೋಪ ಕಾಂಗ್ರೆಸ್ ನ ಮೇಟಿ ವಿರುದ್ಧ ಕೇಳಿ ಬಂದಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಪಕ್ಷದ ಬಗ್ಗೆ ತಪ್ಪು ಅಭಿಪ್ರಾಯ ಮೂಡಲಿದೆ ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳಲು ಪಕ್ಷ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
2018ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮೇಟಿ ಪ್ರಕರಣ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮೇಟಿ ಅವರ ರಾಸಲೀಲೆ ವಿಡಿಯೋ ಮಾಧ್ಯಮಗಳಲ್ಲಿ ಬಯಲಾಗಿರುವುದು ಕಾಂಗ್ರೆಸ್ ಮುಖಂಡರು ಜನರ ಮಧ್ಯೆ ತಲೆಎತ್ತದಂತೆ ಮಾಡಿದೆ. ರಾಸಲೀಲೆ ವಿಡಿಯೋ ಕಾಂಗ್ರೆಸ್ ಮುಖಂಡರಿಗೆ ತೀವ್ರ ಮುಜುಗರ ತಂದಿದ್ದು, ಮತ್ತೆ ಜನರ ಬಳಿ ತೆರಳ ಬೇಕು ಎಂದರೆ ಅವರನ್ನು ಪಕ್ಷದಿಂದ ಅಮಾನತು ಮಾಡಲೇಬೇಕು ಎಂದು ಕೆಲ ಮುಖಂಡರು ವಾದಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷರೂ ಕೂಡ ಆಗಿರುವ ಗೃಹ ಸಚಿವ ಜಿ ಪರಮೇಶ್ವರ ಅವರು ಮೇಟಿ ಅಮಾನತಿಗೆ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ಹೈಕಮಾಂಡ್ ಗೆ ರಾಜ್ಯದ ವರಿಷ್ಠರು ಮಾಹಿತಿ ನೀಡಿದ್ದು, ಕೇಂದ್ರ ನಾಯಕರಿಂದ ಸೂಚನೆ ಬಂದ ಬಳಿಕವಷ್ಟೇ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಪರೋಕ್ಷವಾಗಿ ಮಾಹಿತಿ ಹಂಚಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರು, "ಮೇಟಿ ಅವರು ಶಾಸಕರಾಗಿರುವುದರಿಂದ ಪಕ್ಷದ ವರಿಷ್ಠರೇ ಅವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಸೂಚಿಸಬೇಕಾಗುತ್ತದೆ. ಹೈಕಮಾಂಡ್ ಸೂಚಿಸಿದರೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುತ್ತೇವೆ" ಎಂದು ಹೇಳಿದರು. ಇದೇ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಾಕಾರಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಮೇಟಿ ಉಚ್ಛಾಟನೆ ಸಂಬಂಧ ಯಾವುದೇ ರೀತಿಯ ಮನವಿ ಬಂದಿಲ್ಲ. ಆದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗದ ರೀತಿಯಲ್ಲಿ ಯಾವುದೇ ಶಾಸಕರು ಯಾವುದೇ ಸಲಹೆ ನೀಡಿದರು ಅದನ್ನು ಸ್ವೀಕರಿಸಲು ಪಕ್ಷ ಸಿದ್ಧವಿದೆ. ಪಕ್ಷದ ವರ್ಚಸ್ಸು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಾಸಕರನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಕರಣ ಸಂಬಂಧ ಈಗಾಗಲೇ ಸಿಐಡಿ ತನಿಖೆ ನಡೆಸುತ್ತಿದ್ದು, ಸಿಐಡಿ ವರದಿಯನ್ನಾಧರಿಸಿ ಪಕ್ಷ ಕ್ರಮ ಕೈಗೊಳ್ಳುತ್ತದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ. ಇದೇ ಡಿಸೆಂಬರ್ 17 ಅಂದರೆ ನಾಳೆ ಎಐಸಿಸಿ ಉಪಾಧ್ಯಕ್ಷವ ರಾಹುಲ್ ಗಾಂಧಿ ಅವರು ಬೆಳಗಾವಿಗೆ ಆಗಮಿಸುತ್ತಿದ್ದು, ಈ ವೇಳೆ ಮೇಟಿ ವಿಚಾರವನ್ನು ಪ್ರಸ್ತಾಪಿಸಲೂ ಕೂಡ ಕೆಲ ಮುಖಂಡರು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Advertisement