
ಬೆಂಗಳೂರು: ಸಂಪುಟ ವಿಸ್ತರಣೆ ಬಳಿಕ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಇದೇ ಜನವರಿ 2ರಂದು ಬಿಜೆಪಿ ಪಕ್ಷವನ್ನು ಸೇರುವುದಾಗಿ ಹೇಳಿದ್ದಾರೆ.
ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿ ಸೇರುವ ಕುರಿತು ಈ ಹಿಂದೆಯೇ ಮಾತುಗಳು ಕೇಳಿಬಂದಿತ್ತಾದರೂ, ಶ್ರೀನಿವಾಸ ಪ್ರಸಾದ್ ಅವರು ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸ್ವತಃ ವಿ ಶ್ರೀನಿವಾಸ ಪ್ರಸಾದ್ ಅವರು, ಕೊನೆಯ ದಿನಗಳಲ್ಲಿ ನಾನು ಸ್ವಾಭಿಮಾನದ ನಿರ್ಧಾವನ್ನು ತೆಗೆದುಕೊಳ್ಳುತ್ತಿದ್ದೇನೆ. ಇದೇ ಜನವರಿ 2ರಂದು ಬಿಜೆಪಿ ಕಚೇರಿಗೆ ತೆರಳಿ ಅಧಿಕೃತವಾಗಿ ಬಿಜೆಪಿ ಸೇರುತ್ತೇನೆ ಎಂದು ಹೇಳಿದರು.
ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಶ್ರೀನಿವಾಸ ಪ್ರಸಾದ್ ಅವರು ತೆರಳಿ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರವನ್ನು ಬಹಿರಂಗ ಪಡಿಸಿದರು. ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ವಿ ಶ್ರೀನಿವಾಸ ಪ್ರಸಾದ್ ಅವರು ಬಿಜೆಪಿ ಸೇರುವುದರಿಂದ ಪಕ್ಷಕ್ಕೆ ಆನೆ ಬಲಬಂದಂತಾಗಿದೆ. ಮೈಸೂರು ಮತ್ತು ಚಾಮರಾಜನಗರದಲ್ಲಿ ಪಕ್ಷದ ಬಲವರ್ಧನೆಗೆ ಶ್ರೀನಿವಾಸ್ ಪ್ರಸಾದ್ ಅವರು ನೆರವು ನೀಡಲಿದ್ದಾರೆ. ಅಂತೆಯೇ ನಾವು ಮೊದಲೇ ಹೇಳಿದಂತೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಶ್ರೀನಿವಾಸ ಪ್ರಸಾದ್ ಅವರೇ ನಮ್ಮ ಅಭ್ಯರ್ಥಿಯಾಗಿರುತ್ತಾರೆ ಎಂದು ಬಿಎಸ್ ವೈ ಹೇಳಿದರು.
Advertisement