
ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದುಬಾರಿ ವಾಚ್ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ಬೆನ್ನಲ್ಲೇ ಅವರ ಶೂ ಕೂಡ ಇದೀಗ ಚರ್ಚೆಗೀಡಾಗುತ್ತಿದೆ.
ಖಾಸಗಿ ಪತ್ರಿಕೆಯೊಂದು ವರದಿ ಮಾಡಿರುವಂತೆ ಸಿದ್ದರಾಮಯ್ಯ ಅವರು ಧರಿಸುವ ಶೂ ಕೂಡ ದುಬಾರಿಯಾಗಿದ್ದು, ಸುಮಾರು 1.60 ಲಕ್ಷ ಬೆಲೆ ಬಾಳುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರ ವಾಚ್ ವಿವಾದವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಲಾಗುತ್ತಿದ್ದು. ಈ ಹಿಂದೆ ನಡೆದ ಸಭೆಯಲ್ಲಿ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಹೇಳಲಾಗುತ್ತಿದೆ.
"ಸಮಾಜವಾದಿ ಹಿನ್ನೆಲೆಯವರು ಎ೦ದುಕೊ೦ಡಿದ್ದ ಸಿದ್ದರಾಮಯ್ಯ ಅವರು 1.60 ಲಕ್ಷ ರು. ಮೌಲ್ಯದ ಶೂಗಳು, 1.5 ಲಕ್ಷ ರೂ. ಬೆಲೆಬಾಳುವ ಕೂಲಿ೦ಗ್ ಗ್ಲಾಸ್, ದುಬಾರಿ ಕೈಗಡಿಯಾರ ತೊಡುತ್ತಾರೆ ಎ೦ದು ರಾಹುಲ್ ಅಸಮಾಧಾನ ತೋಡಿಕೊ೦ಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ದುಬಾರಿ ವಾಚ್ ಪ್ರಕರಣದಲ್ಲಿ ದಾಖಲೆಗಳ ಬಹಿರ೦ಗ, ರಾಜ್ಯಪಾಲರ ನಡೆ ಹಾಗೂ ಕಾನೂನು ಹೋರಾಟಗಳ ಸಾಧ್ಯತೆಗಳ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠರು ಗಮನ ಹರಿಸಿದ್ದಾರೆ ಎ೦ದು ತಿಳಿದುಬಂದಿದೆ.
ಒಟ್ಟಾರೆ ಕಾಂಗ್ರೆಸ್ ವರಿಷ್ಠರ ಬೆಂಬಲವಿದೆ ಎಂದು ತಿಳಿದಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ವಾಚ್ ಪ್ರಕರಣ ಮತ್ತು ಉಪ ಚುನಾವಣೆಯಲ್ಲಿನ ಸೋಲು ಅವರ ನಂಬಿಕೆಯನ್ನೇ ಬುಡಮೇಲು ಮಾಡಿದೆ.
Advertisement