
ಬೆಂಗಳೂರು: ಇಷ್ಟು ದಿನ ಮಾಧ್ಯಮಗಳಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಸಿಎಂ ಸಿದ್ದರಾಮಯ್ಯ ದುಬಾರಿ ವಾಚ್ ಪ್ರಕರಣ ಇದೀಗ ಸಂಸತ್ ನಲ್ಲಿ ಗದ್ದಲಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಹೈದರಾಬಾದ್ ಮೂಲದ ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ಮೇಲೆ ಸವಾರಿ ಮಾಡಲೆತ್ನಿಸುತ್ತಿರುವ ಕಾಂಗ್ರೆಸ್ ಗೆ ತಿರುಗೇಟು ನೀಡಲು ರಾಜ್ಯ ಬಿಜೆಪಿ ಸಂಸದರು ಸಜ್ಜಾಗಿದ್ದು, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಚ್ ಪ್ರಕರಣವನ್ನು ಸಂಸತ್ ನಲ್ಲಿ ಪ್ರಶ್ನಿಸಲು ನಿರ್ಧರಿಸಿದ್ದಾರೆ. ಸಿಎಂಗೆ ದುಬಾರಿ ವಾಚು ನೀಡಿದ್ದು ಯಾರು ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ್ ಜೋಶಿ ಅವರು ಲೋಕಸಭೆಯಲ್ಲಿ ಮಂಗಳವಾರ ಪ್ರಸ್ತಾಪಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮೂಲಕಾಂಗ್ರೆಸಿಗರಿಗೆ ಅಸ್ತ್ರವಾದ ವಾಚ್ ಪ್ರಕರಣ
ಈ ನಡುವೆ ಆರಂಭದಿಂದಲೂ ನಾಯಕತ್ವ ಬದಲಾವಣೆ ಕುರಿತಂತೆ ತಮ್ಮ ವಾದ ಮಂಡಿಸುತ್ತಾ ಬಂದಿರುವ ಮೂಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣವನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಅವರ ವಾಚ್ ಪ್ರಕರಣದಿಂದ ಕಾಂಗ್ರೆಸ್ ಪಕ್ಷ ಸಾಕಷ್ಟು ಮುಜುಗರಕ್ಕೀಡಾಗಿದ್ದು, ಕಾಂಗ್ರೆಸ್ ವಲಯದಲ್ಲೇ ಇದಕ್ಕೆ ಸಾಕಷ್ಟು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸುವ ಕುರಿತು ಮೂಲ ಕಾಂಗ್ರೆಸಿಗರು ಮುಂದಾಗಿದ್ದಾರೆ.
ಒಟ್ಟಾರೆ ಸಿದ್ದರಾಮಯ್ಯ ಅವರ ಪಾಲಿಗೆ ವಾಚ್ ಪ್ರಕರಣ ಬೆನ್ನಿಗೆ ಬಿದ್ದ ಭೂತದಂತಾಗಿ ಪರಿಣಮಿಸಿದ್ದು, ಭವಿಷ್ಯದಲ್ಲಿ ಇದೇ ಅವರ ಸ್ಥಾನಕ್ಕೆ ಕುತ್ತಾದರೆ ಅಚ್ಚರಿ ಏನಿಲ್ಲ.
Advertisement