ಬೆಂಗಳೂರು: ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ, ತಮಿಳುನಾಡಿಗೆ ಒಂದು ಹನಿ ನೀರು ಬಿಡಬೇಡಿ ನಾವು ನಿಮ್ಮೊಂದಿಗಿದ್ದೇವೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೇಳಿದ್ದಾರೆ.
ಕಾವೇರಿ ವಿಚಾರವಾಗಿ ಸುಮಾರು 20 ನಿಮಿಷಗಳ ಕಾಲ ಸಿಎಂ ಜೊತೆ ಮಾಜಿ ಪಿಎಂ ದೂರವಾಣಿ ಮೂಲಕ ಚರ್ಚೆ ನಡೆಸಿದರು. ಈ ವೇಳೆ ಕಾವೇರಿ ವಿಷಯದಲ್ಲಿ ಸುಪ್ರೀಂಕೋರ್ಟ್ ನಿಂದ ಕರ್ನಾಟಕ್ಕೆ ಪದೇ ಪದೇ ಅನ್ಯಾಯವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡಬೇಡಿ. ನಾವು ನಿಮ್ಮನ್ನು ರಾಜಿನಾಮೆ ನೀಡುವಂತೆ ಒತ್ತಾಯಿಸುವುದಿಲ್ಲ. ತಮಿಳುನಾಡಿನ ಬೆಳೆಗಿಂತ ನಮ್ಮ ರಾಜ್ಯಕ್ಕೆ ಕುಡಿಯುವ ನೀರು ಹೆಚ್ಚು ಮುಖ್ಯ. ಈ ಬಗ್ಗೆ ಸಂಪುಟ ಸಭೆಯಲ್ಲಿ ಕಠಿಣ ನಿರ್ಣಯ ಕೈಗೊಳ್ಳಿ ಎಂದು ಎಂದು ಸಲಹೆ ನೀಡಿದ್ದಾರೆ.
ಕಾವೇರಿ ನೀರು ವಿವಾದ ಕುರಿತಂತೆ ನಿನ್ನೆಯಷ್ಟೇ ಸುಪ್ರೀಂಕೋರ್ಟ್ ಆದೇಶ ನೀಡಿದ್ದು ಸೆ.27ರ ವರೆಗೆ ಪ್ರತಿ ನಿತ್ಯ 6 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸೂಚನೆ ನೀಡಿತ್ತು.
Advertisement