ಪ್ರಕರಣದ ಹಾದಿ ತಪ್ಪಿಸಲು ಕಾಂಗ್ರೆಸ್ ಸಂಚು: ಸಿಡಿ ಪ್ರಕರಣ ಸಂಬಂಧ ಬಿಎಸ್ ವೈ-ಅನಂತ್ ಜಂಟಿ ಹೇಳಿಕೆ

ಹೈಕಮಾಂಡ್ ಗೆ ಕಪ್ಪ ನೀಡುವ ಸಂಬಂಧ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ನಡುವಿನ ಸಂಭಾಷಣೆಯ ಸಿಡಿ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಉಭಯ ನಾಯಕರು ಈ ಸಂಬಂಧ ಜಂಟಿ ಹೇಳಿಕೆ ನೀಡಿದ್ದಾರೆ.

ಬೆಂಗಳೂರು: ಹೈಕಮಾಂಡ್ ಗೆ ಕಪ್ಪ ನೀಡುವ ಸಂಬಂಧ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ನಡುವಿನ ಸಂಭಾಷಣೆಯ ಸಿಡಿ ವ್ಯಾಪಕ  ಚರ್ಚೆಗೀಡಾಗಿರುವಂತೆಯೇ ಉಭಯ ನಾಯಕರು ಈ ಸಂಬಂಧ ಜಂಟಿ ಹೇಳಿಕೆ ನೀಡಿದ್ದಾರೆ.

ಹೈ ಕಮಾಂಡ್ ಗೆ ಕಪ್ಪ ನೀಡುವ ಸಂಬಂಧ ಮಾತನಾಡಿರುವ ಕೆಲವೇ ಆಯ್ದ ಭಾಗವನ್ನು ಮಾತ್ರ ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಸಂಪೂರ್ಣ ಸಂಭಾಷಣೆಯ ವಿವರವನ್ನು ಬಹಿರಂಗ ಪಡಿಸಿದರೆ ಸತ್ಯಾಂಶ ಸಾಬೀತಾಗುತ್ತದೆ. ಇದು  ಪ್ರಕರಣದ ಹಾದಿ ತಪ್ಪಿಸಲು ಕಾಂಗ್ರೆಸ್ ಹೂಡಿರುವ ಸಂಚು ಎಂದು ಉಭಯ ನಾಯಕರು ತಮ್ಮ ಜಂಟಿ ಹೇಳಿಕೆಯಲ್ಲಿ ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಅನಂತ್ ಕುಮಾರ್ ಅವರು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ನೀಡಿದ ಕುರಿತು ಮಾಹಿತಿ ನೀಡುತ್ತಿದ್ದರು. ಪ್ರಸ್ತುತ ಕಾಂಗ್ರೆಸ್ ಪ್ರಕರಣದ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದು,  ನಮ್ಮ ಇಡೀ ಸಂಭಾಷಣೆಯ ವಿವರವನ್ನು ಬಹಿರಂಗ ಪಡಿಸಲಿ. ಆಗ ಹೈಕಮಾಂಡ್ ಗೆ ಹಣ ಕೊಟ್ಟವರರಾರು. ಯಾರು ಏನು ಹೇಳಿದರು ಎಂಬ ಸತ್ಯಾಂಶ ಹೊರ ಬರುತ್ತದೆ ಎಂದು ಹೇಳಿದರು.

ನನ್ನ ಹೇಳಿಕೆಗೆ ಈಗಲೂ ಬದ್ಧ; ಡೈರಿ ಬಿಡುಗಡೆಯಾದರೆ ಹುಚ್ಚಾಸ್ಪತ್ರೆಗೆ ಯಾರು ಹೋಗುತ್ತಾರೆ ತಿಳಿಯುತ್ತದೆ
ಇನ್ನು ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ಸಿದ್ದರಾಮಯ್ಯ ಅವರು ಹೈಕಮಾಂಡ್ ಗೆ ಹಣ ನೀಡಿರುವ ಕುರಿತು ತಮ್ಮ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಕಾಂಗ್ರೆಸ್  ಮುಖಂಡರು ವಿಡಿಯೋವನ್ನು ತಮಗೇ ಬೇಕಾದ ರೀತಿಯಲ್ಲಿ ತಿರುಚಿ ಬಿಡುಗಡೆ ಮಾಡಿದ್ದಾರೆ. ಸಂಭಾಷಣೆಯ ಸಂಪೂರ್ಣ ವಿಡಿಯೋ ಬಿಡುಗಡೆ ಮಾಡಿದರೆ ಆಗ ಸತ್ಯಾಂಶ ಹೊರ ಬರುತ್ತದೆ. ಇನ್ನು 15 ದಿನಗಳಲ್ಲಿ ಅಧಿಕಾರಿಗಳೇ  ಡೈರಿಯಲ್ಲಿರುವ ಅಂಶಗಳನ್ನು ಬಿಡುಗಡೆ ಮಾಡುತ್ತಾರೆ. ಆಗ ಸತ್ಯಾಂಶ ತಾನೇ ತಾನಾಗಿ ಹೊರ ಬೀಳುತ್ತದೆ ಎಂದು ಹೇಳಿದರು.

ಇದೇ ವೇಳೆ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಬಿಎಸ್ ವೈ, ಡೈರಿಯಲ್ಲಿರುವ ಅಂಶಗಳು ಬಿಡುಗಡೆಯಾದರೆ ಆಗ ಯಾರ ಮಾನಸಿಕ ಸ್ಥೀಮಿತ ಕಳೆದುಹೋಗಿದೆ..ಹುಚ್ಚಾಸ್ಪತ್ರೆಗೆ  ಯಾರು ಹೋಗುತ್ತಾರೆ ಎಂದು ತಿಳಿಯುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com