ಬಿಎಸ್ ಯಡ್ಯೂರಪ್ಪ - ಅನಂತ್ ಕುಮಾರ್ ಸಂಭಾಷಣೆಯ ಸಿಡಿ ಬಿಡುಗಡೆ ಮಾಡಿದ ಕಾಂಗ್ರೆಸ್

ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಸಾವಿರ ಕೋಟಿ ಕಪ್ಪ ನೀಡಿದ ಕುರಿತು ಗಂಭೀರ ಆರೋಪ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರೇ ಬಿಜೆಪಿ ಹೈಕಮಾಂಡ್ ಗೆ ಹಣ ನೀಡಿರುವ ಕುರಿತು ಕಾಂಗ್ರೆಸ್ ಸಿಡಿ ಬಿಡುಗಡೆ ಮಾಡಿದೆ.
ಸಂಭಾಷಣೆ ನಿರತ ಬಿಎಸ್ ವೈ ಹಾಗೂ ಯಡಿಯೂರಪ್ಪ
ಸಂಭಾಷಣೆ ನಿರತ ಬಿಎಸ್ ವೈ ಹಾಗೂ ಯಡಿಯೂರಪ್ಪ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಸಾವಿರ ಕೋಟಿ ಕಪ್ಪ ನೀಡಿದ ಕುರಿತು ಗಂಭೀರ ಆರೋಪ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರೇ ಬಿಜೆಪಿ ಹೈಕಮಾಂಡ್ ಗೆ ಹಣ ನೀಡಿರುವ  ಕುರಿತು ಕಾಂಗ್ರೆಸ್ ಸಿಡಿ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಮುಖಂಡರಾದ ವಿಎಸ್ ಉಗ್ರಪ್ಪ ಹಾಗೂ ಸಚಿವ ರಮೇಶ್ ಕುಮಾರ್ ಅವರು ಇಂದು ವಿಧಾನಸೌಧದಲ್ಲಿ ಈ ಸಿಡಿ ಬಿಡುಗಡೆ ಮಾಡಿದ್ದು, ಸಿಡಿಯಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಎಸ್ ವೈ ಹಾಗೂ ಕೇಂದ್ರ  ಸಚಿವ ಅನಂತ್ ಕುಮಾರ್ ಅವರು ಹೈಕಮಾಂಡ್ ಗೆ ಕಪ್ಪ ನೀಡಿರುವ ಕುರಿತು ಮಾತುಕತೆ ನಡೆಸಿದ್ದಾರೆ.

ಮಾತುಕತೆಯ ಸಂಪೂರ್ಣ ವಿವರ ಇಂತಿದೆ.
ಅನಂತ್ ಕುಮಾರ್: ನೀವಿದ್ದಾಗಲೂ ಕೇಂದ್ರಕ್ಕೆ ದುಡ್ಡು ಕೊಟ್ಟಿದ್ದೀರಿ. ನಾನೂ ಕೊಟ್ಟಿದ್ದೀನಿ. ನಾನ್ ಕೊಟ್ಟಿಲ್ಲ ಅಂತ ಎಲ್ಲಿ ಹೇಳಿದ್ದೀನಿ.
ಅನಂತ್ ಕುಮಾರ್: ಸಾವಿರ ಕೋಟಿ ಕೊಟ್ಟಿಲ್ಲ ಅಂತ ಹೇಳ್ಬಹುದು. ಆದ್ರೆ ಹಣಕೊಟ್ಟಿಲ್ಲ ಅಂತ ಹೇಳೋಕಾಗಲ್ಲ. ಕೊಟ್ಟಿದಾರೆ ಅಂತ ಅನ್ಕೊಬಹುದು..
ಅನಂತ್ ಕುಮಾರ್: ಆದ್ರೆ ಎಲ್ಲಿ ಕೊಟ್ಟಿದ್ದೀನಿ ಅಂತ ಹೇಳ್ಬಕಲ್ಲ. ಅಂದ್ರೆ ಹಣ ಕೊಟ್ಟಿರದನ್ನ ಒಪ್ಪಿಕೊಂಡ ಹಾಗೇ..
ಯಡಿಯೂರಪ್ಪ: ಎಷ್ಟು  ಕೊಟ್ಟಿರ್ತಾರೆ, ಅದನ್ನು ಬರೆದುಕೊಂಡಿರ್ತಾರಾ?
ಅನಂತ್ ಕುಮಾರ್: ಹರಳ್ ಬೀಸಿದ್ರೆ ಹತ್ಕೊಳ್ಳುತ್ತೆ; ಎಲೆಕ್ಷನ್ ಆಗೋವರೆಗೂ ಉತ್ತರ ಕೊಡ್ತಾ ತಿರುಗಬೇಕಾಗುತ್ತೆ ತಿರುಗಲಿ
ಅನಂತಕುಮಾರ್; ನೀವ್ ಕೊಟ್ಟಿದ್ದೀರಿ ಎಷ್ಟು ಕೊಟ್ಟಿದ್ದಾರೆ ಅಂತ ಹೇಳ್ತಾರಾ?
ಅನಂತಕುಮಾರ್: ಆದ್ರೆ ಕಾಂಗ್ರೆಸ್ ಸಾವಿರ ಕೋಟಿ ಕೊಟ್ಟಿದೆ ಅಂದ್ರೆ ಒಪ್ಪಿಕೊಳ್ಳಲ್ಲ. ನೀವು ಕಲ್ಲು ಬೀಸಿದ್ರೆ ಹೊತ್ತಿಕೊಳ್ಳುತ್ತೆ.
ಅನಂತಕುಮಾರ್: ನಾವು ಮಾತ್ರ ಕಾಂಗ್ರೆಸ್ ಮುಖಂಡರು ಸಾವಿರ ಕೋಟಿ ಕೊಟ್ಟಿದ್ದಾರೆ ಅಂತ ಹೇಳೋಣಾ.
ಬಿಎಸ್ ವೈ: ಡೈರಿ ಈಚೆಗೆ ಬರಲಿ...

ಕಾಂಗ್ರೆಸ್ ಟೀಕಾ ಪ್ರಹಾರ
ಇನ್ನು ಈ ಸಿಡಿ ಕುರಿತಂತೆ ಇದೀಗ ಕಾಂಗ್ರೆಸ್ ವಲಯದಿಂದ ವ್ಯಾಪಕ ಟೀಕಾ ಪ್ರಹಾರವೇ ಹರಿದುಬರುತ್ತಿದ್ದು, ಕಾಂಗ್ರೆಸ್ ಮುಖಂಡರಾದ ವಿಎಸ್ ಉಗ್ರಪ್ಪ, ಸಚಿವರಾದ ರಮೇಶ್ ಕುಮಾರ್, ಎಂಬಿ ಪಾಟೀಲ್, ಶರಣ್ ಪ್ರಕಾಶ್ ಪಾಟೀಲ್ ಮತ್ತು ಬಸವರಾಜ ರಾಯರೆಡ್ಡಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚುನಾವಣೆ ಗೆಲುವಿಗೆ ಬಿಜೆಪಿ ನಾಯಕರು ನೀಚ ರಾಜಕಾರಣಕ್ಕೆ ಇಳಿದಿದ್ದಾರೆ. ಸಾವಿರ ಕೋಟಿ ಕಪ್ಪ ಕೇವಲ ಬಿಜೆಪಿ ಷಡ್ಯಂತ್ರ ಎಂದು  ಅವರು ಆರೋಪಿಸಿದ್ದಾರೆ.

ಪ್ರತಿಕ್ರಿಯೆಗೆ ಬಿಎಸ್ ವೈ-ಅನಂತ್ ಕುಮಾರ್ ನಕಾರಾ
ಇದೇ ವೇಳೆ ಕಾಂಗ್ರೆಸ್ ಸಿಡಿ ಕುರಿತಂತೆ ಮಾಧ್ಯಮ ಪ್ರತಿನಿಧಿಗಳು ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ಪ್ರಶ್ನಿಸಿದಾಗ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಅವರು ಹೊರಟು  ಹೋಗಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಹೈಕಮಾಂಡ್ ಗೆ ಒಂದು ಸಾವಿರ ಕೋಟಿ ರೂಪಾಯಿ ಕಪ್ಪ ಕೊಟ್ಟಿದ್ದಾರೆ, ಉಕ್ಕಿನ ಮೇಲ್ಸೆತುವೆಗಾಗಿ 150 ಕೋಟಿ ರುಪಾಯಿ ಕಮಿಷನ್ ಪಡೆದಿದ್ದಾರೆ ಎಂದು  ಬಿಎಸ್ ವೈ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಪೂರಕ ಎಂಬಂತೆ ಈ ಹಿಂದೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್ ಮುಖಂಡನ ಮನೆ ಮೇಲೆ ದಾಳಿ ನಡೆಸಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಡೈರಿಯೊಂದು ಸಿಕ್ಕಿದ್ದು, ಡೈರಿಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಕಪ್ಪ ನೀಡಿರುವ ಕುರಿತು ಮಾಹಿತಿ ಇದೆ ಎಂದು ಯಡ್ಯೂರಪ್ಪ ಆರೋಪಿಸಿದ್ಗರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com