ಸೂಟ್ ಕೇಸ್ ಹೇಳಿಕೆ: ಪಕ್ಷದ ಹೊಣೆಗಾರಿಕೆ ಬೇಡ ಎಂದ ಎಚ್ ಡಿ ಕುಮಾರ ಸ್ವಾಮಿ!

ಜೆಡಿಎಸ್​ನಲ್ಲಿ ಸೂಟ್​ಕೇಸ್ ಸಂಸ್ಕೃತಿ ಇದೆ ಎಂಬ ಪ್ರಜ್ವಲ್ ರೇವಣ್ಣ ಆರೋಪಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪಕ್ಷದ ಜವಾಬ್ದಾರಿಯೇ ಬೇಡ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಜೆಡಿಎಸ್​ನಲ್ಲಿ ಸೂಟ್​ಕೇಸ್ ಸಂಸ್ಕೃತಿ ಇದೆ ಎಂಬ ಪ್ರಜ್ವಲ್ ರೇವಣ್ಣ ಆರೋಪಕ್ಕೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಪಕ್ಷದ ಜವಾಬ್ದಾರಿಯೇ  ಬೇಡ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಚುನಾವಣಾ ಸ್ಪರ್ಧೆ ಹಿನ್ನಲೆಯಲ್ಲಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರು ನೀಡಿದ್ದ ಸೂಟ್ ಕೇಸ್ ಸಂಸ್ಕೃತಿ ಹೇಳಿಕೆಗೆ ಸಂಬಂಧಿಸಿದಂತೆ ಬಹಿರಂದ ಹೇಳಿಕೆ ನೀಡದ ಕುಮಾರಸ್ವಾಮಿ ಅವರು, ಮಾಜಿ ಪ್ರಧಾನಿ ಎಚ್.ಡಿ.  ದೇವೇಗೌಡರ ಅವರನ್ನು ಶನಿವಾರ ಭೇಟಿ ಮಾಡಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಈಗಾಗಲೇ ಶಾಸಕರ ಭಿನ್ನಮತದಿಂದ ಹೈರಾಣಾಗಿರುವ ಜೆಡಿಎಸ್ ಮತ್ತು ದೇವೇಗೌಡರ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಮಾತುಗಳನ್ನು ಪುಷ್ಟೀಕರಿಸುವ ರೀತಿಯಲ್ಲಿ ಪ್ರಜ್ವಲ್  ಮಾತನಾಡಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪಕ್ಷದ ಕಾರ್ಯಕರ್ತರಲ್ಲ ಮನೆಯವರೇ ಈ ರೀತಿ ಮಾತನಾಡಿದರೆ ಹೇಗೆ ಉತ್ತರ ನೀಡಲು ಸಾಧ್ಯವೆಂದು ನೊಂದಿರುವ ಕುಮಾರಸ್ವಾಮಿ, ಸಕ್ರಿಯ  ರಾಜಕಾರಣದಿಂದಲೇ ದೂರವಾಗುವ ಮಾತನ್ನೂ ಸಹ ಗೌಡರ ಬಳಿ ಹೇಳಿಕೊಂಡಿದ್ದಾರೆಂದು ಹೇಳಲಾಗಿದೆ.

ದೇವೇಗೌಡರೊಂದಿಗೆ ಚರ್ಚೆ ವೇಳೆ ತಮ್ಮ ಅಸಮಾಧಾನ ಹೊರಹಾಕಿರುವ ಎಚ್ ಡಿ ಕುಮಾರಸ್ವಾಮಿ ಅವರು, "ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಇಂಥ ಸಂದರ್ಭದಲ್ಲಿ ಸೂಟ್ ಕೇಸ್  ಸಂಸ್ಕೃತಿ ಇದೆ ಎಂಬ ಮಾತನ್ನು ಪ್ರಜ್ವಲ್ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿಯೇ ಇದ್ದು ಹೊರಹೋಗಿರುವ ಬಂಡಾಯ ಶಾಸಕರು ಈಗ ಬಾಯಿಗೆ ಬಂದಂತೆ ಮಾತನಾಡುತ್ತ ಸಾರ್ವಜನಿಕವಾಗಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ  ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಜ್ವಲ್ ಹೇಳಿಕೆ ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಆದ್ದರಿಂದ ಪಕ್ಷ ಸಂಘಟನೆ ಉಸಾಬರಿಯೇ ನನಗೆ ಬೇಡ. ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ಅವರಿಗೇ ಆ ಜವಾಬ್ದಾರಿ ನೀಡಿ.  ಅವರೇ ಪಕ್ಷ ಸಂಘಟನೆ ಮಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕುಮಾರ ಸ್ವಾಮಿ ಅವರು ಈ ಮಾತನ್ನು ಹೇಳುವ ವೇಳೆ ಎಚ್.ಡಿ. ರೇವಣ್ಣ ಕೂಡ ಅಲ್ಲಿಯೇ ಇದ್ದು ಕುಮಾರಸ್ವಾಮಿ ಅವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಸಿಟ್ಟಾಗಿದ್ದ ಕುಮಾರಸ್ವಾಮಿ, ನೀವೇ ಪಕ್ಷ  ಸಂಘಟನೆ ಮಾಡಿ ಎಂದು ಕಿಡಿಕಾರಿದ್ದಾರೆ. ಈ ವೇಳೆ ಕುಮಾರಸ್ವಾಮಿ ಅವರನ್ನು ಸಂತೈಸಿದ ದೇವೇಗೌಡ ಅವರು, "ಪ್ರಜ್ವಲ್​ಗೆ ಬುದ್ದಿ ಹೇಳಿದ್ದೇನೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಸಂಘಟನೆ ಕಡೆ ಗಮನ ಕೊಡು ಎಂದು ಸಲಹೆ  ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಿನಿಮಾ ನಿರ್ಮಾಣ ಮಾಡ್ಕೊಂಡಿರ್ತೀನಿ
ಪ್ರಜ್ವಲ್ ಬಾಯಿಗೆ ಬಂದಂತೆ ಮಾತನಾಡಿರುವುದನ್ನು ಕೇಳಿಸಿಕೊಂಡು ಹೇಗೆ ಪಕ್ಷ ಸಂಘಟನೆ ಮಾಡಲಿ. ಮನಸ್ಸಿಗೆ ಬಹಳ ನೋವಾಗಿದೆ. ಹೊರಗಿನವರು ಮಾತನಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು. ಮನೆಯವರೇ  ಮಾತನಾಡಿದರೆ ಸಹಿಸಿಕೊಳ್ಳುವುದು ಹೇಗೆ? ಆದ್ದರಿಂದ ಸಕ್ರಿಯ ರಾಜಕಾರಣದಿಂದಲೇ ದೂರವಾಗಿ, ಸಿನಿಮಾ ನಿರ್ಮಾಣ ಮಾಡಿಕೊಂಡಿರುತ್ತೇನೆ ಎಂಬ ಮಾತನ್ನೂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com