ನನ್ನ ತಂಟೆಗೆ ಬಂದರೆ ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ: ಭಿನ್ನರಿಗೆ ಎಚ್ ಡಿಕೆ ತಿರುಗೇಟು

ಸೂಟ್ ಕೇಸ್ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿನ್ನಮತೀಯ ಶಾಸಕರಿಗೆ ತಿರುಗೇಟು ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿಕುಮಾರ ಸ್ವಾಮಿ ಅವರು, ನನ್ನ ತಂಟೆಗೆ ಬಂದರೆ ನಿಮ್ಮ ಹಳೆಯ ಬಂಡವಾಳ ಬಯಲು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಸೂಟ್ ಕೇಸ್ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಿನ್ನಮತೀಯ ಶಾಸಕರಿಗೆ ತಿರುಗೇಟು ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿಕುಮಾರ ಸ್ವಾಮಿ ಅವರು, ನನ್ನ ತಂಟೆಗೆ ಬಂದರೆ ನಿಮ್ಮ ಹಳೆಯ ಬಂಡವಾಳ  ಬಯಲು ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜೆಡಿಎಸ್ ನಲ್ಲಿನ ಆಂತರಿಕ ಭಿನ್ನಮತ ಮುಂದುವರೆದಿದ್ದು, ಪ್ರಜ್ವಲ್ ರೇವಣ್ಣ ಅವರ ಸೂಟ್ ಕೇಸ್ ಸಂಸ್ಕೃತಿ ಹೇಳಿಕೆಗೆ ಸಂಬಂಧಿಸಿದಂತೆ ಜೆಡಿಎಸ್ ನ ಭಿನ್ನಮತೀಯ ಶಾಸಕರು ಪ್ರಜ್ವಲ್ ರೇವಣ್ಣ ಅವರ ಪರ ಬ್ಯಾಟಿಂಗ್  ಮಾಡುತ್ತಿರುವ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ.

ಇಂದು ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, "ನನ್ನ ತಂಟೆಗೆ ಬಂದರೆ ಹಳೆಯದನ್ನೆಲ್ಲಾ ಬಿಚ್ಚಿಡಬೇಕಾಗುತ್ತದೆ. ಬ್ಲಾಕ್‌ ಮೇಲ್ ತಂತ್ರಗಳಿಗೆಲ್ಲ ನಾನು ಹೆದರುವುದಿಲ್ಲ. ನನ್ನ ಹಾಗೂ ನನ್ನ ಕುಟುಂಬದ  ಸುದ್ದಿಗೆ ಬಂದರೆ ಸರಿ ಹೋಗುವುದಿಲ್ಲ. ರೇವಣ್ಣ ಅವರ ವಿಚಾರವನ್ನು ನಮ್ಮ ಕುಟುಂಬದಲ್ಲಿ ತೀರ್ಮಾನ ಮಾಡಿಕೊಳ್ಳುತ್ತೇವೆ. ಇವರ ವಕೀಲತೆ ಏನೂ ಬೇಡ ಎಂದು ಅವರು ಖಾರವಾಗಿ ಹೇಳಿದರು. ಅಂತೆಯೇ ಪ್ರಜ್ವಲ್ ರೇವಣ್ಣ  ಅವರ ಮೇಲೆ ಭಿನ್ನಮತೀಯ ಶಾಸಕರಿಗೆ ಇದ್ದಕ್ಕಿದ್ದಂತೆ ಮಮಕಾರ ಬಂದು ಬಿಟ್ಟಿದೆ ಎಂದ ಕುಮಾರಸ್ವಾಮಿ ಅವರು, ಸೂಟ್‌ ಕೇಸ್ ಸಂಸ್ಕೃತಿ ಬಗ್ಗೆ ನನಗಿಂತ ಅವರಿಗೆ ಹೆಚ್ಚು ಗೊತ್ತಿದೆ. ರಾಜ್ಯಸಭಾ ಅಭ್ಯರ್ಥಿಯಾಗಿದ್ದ ಫಾರೂಕ್‌  ಅವರಿಂದ ಸೂಟ್‌ ಕೇಸ್ ಪಡೆದಿದ್ದೇನೆಂದು ಭಿನ್ನಮತೀಯ ಶಾಸಕರು ಹೇಳಿದ್ದಾರೆ. ಆದರೆ ಫಾರೂಕ್‌ ರವರನ್ನೆ ಕೇಳಿ ಸತ್ಯ ಗೊತ್ತಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಮ್ಮ ಪಕ್ಕದಲ್ಲಿದ್ದ ಫಾರೂಕ್‌ ರವರನ್ನು ತೋರಿಸಿ  ಕುಮಾರಸ್ವಾಮಿ ಮಾತನಾಡಿದರು.

"ಫಾರೂಕ್‌ ಅವರು ಕಳ್ಳ ದಂಧೆ ಮಾಡುವುದಿಲ್ಲ. ಅವರ ಜತೆ ಪಿಕ್‌ ಪ್ಯಾಕೆಟ್ ದಂಧೆ ಮಾಡುವವರು ಇಲ್ಲ. ಚುನಾವಣೆಗೆ 10 ಕೋಟಿ ಕೇಳಿದ್ದರು. ನಾನು ಎಲ್ಲಿಂದ ತಂದು ಕೊಡಲಿ, ನೋಟು ಪ್ರಿಂಟ್ ಮಾಡುತ್ತೇನೆಯೇ? ಹೀಗೆ  ಮಾತನಾಡಿದರೆ ಎಲ್ಲ ಬಂಡವಾಳವನ್ನೂ ಬಿಚ್ಚಿಡಬೇಕಾಗುತ್ತದೆ. ನನ್ನದನ್ನು ಅವರು ಬಿಚ್ಚಿಡಲಿ, ಅದನ್ನು ಎದುರಿಸುತ್ತೇನೆ. ನನ್ನ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುವ ಭಿನ್ನಮತೀಯ ಶಾಸಕರು ನನ್ನ ವಿರುದ್ದ ಆರೋಪಗಳನ್ನು  ಸಿಬಿಐ ತನಿಖೆಗೆ ಕೊಡಿಸಲಿ, ಹೇಗೊ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಹತ್ತಿರ ಇದ್ದಾರಲ್ಲಾ, ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಾರೆ. ಹಾಗೆಯೇ ಸಿಬಿಐ ತನಿಖೆಗೆ ಕೊಡಿಸಲಿ. ಅದು ಸಾಲದು ಎಂದರೆ ಅಮೆರಿಕಾ ಅಧ್ಯಕ್ಷ ಟ್ರಂಪ್‌ ಗೂ  ತನಿಖೆ ಮಾಡಿಸುವಂತೆ ಹೇಳಲಿ ಎಂದು ವ್ಯಂಗ್ಯವಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com