ಬೆಂಗಳೂರು: ರಾಷ್ಟ್ರಪತಿ ಆಯ್ಕೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ರಾಜ್ಯ ವಿಧಾನ ಸಭೆಯ ಚುನಾಯಿತ 224 ಸದಸ್ಯರ ಪೈಕಿ 222 ಸದಸ್ಯರು ಮತ ಚಲಾಯಿಸಿದರು. ಅಮೆರಿಕಾ ಪ್ರವಾಸದಲ್ಲಿರುವ ಜೆಡಿಎಸ್ ಬಂಡಾಯ ಶಾಸಕ ಎನ್. ಚಲುವರಾಯ ಸ್ವಾಮಿ ಮತ್ತು ಜೆಡಿಎಸ್ ನ ವೈಎಸ್ ವಿ ದತ್ತ ಮತದಾನ ಮಾಡಲಿಲ್ಲ.
ದತ್ತ ಮತದಾನ ಮಾಡಲು ವಿಧಾನಸೌಧಕ್ಕೆ ಆಗಮಿಸುತ್ತಿದ್ದರು. ಈ ವೇಳೆ ದತ್ತ ಅವರ ಹಿರಿಯ ಸಹೋದರಿ ನಿಧನರಾದ ಹಿನ್ನೆಲೆಯಲ್ಲಿ ನನ್ನ ಅನುಮತಿ ಪಡೆದು ಅಂತಿಮ ಸಂಸ್ಕಾರಕ್ಕೆ ತೆರಳಿದರು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ ಹೇಳಿದ್ದಾರೆ.
ಅಮೆರಿಕಾ ಪ್ರವಾಸದಲ್ಲಿದ್ದ ಚಲುವರಾಯ ಸ್ವಾಮಿ ಮತದಾನ ಮಾಡಲು ಸಾಧ್ಯವಾಗಲಿಲ್ಲಸ ಮತದಾನಕ್ಕೂ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಪ್ರತಿಯೊಂದು ಮತವು ಮಹತ್ವವಾದದ್ದು, ಹೀಗಾಗಿ ಪ್ರತಿಯೊಬ್ಬರು ಮತ ಚಲಾಯಿಸಬೇಕೆಂದು ಹೈ ಕಮಾಂಡ್ ಆದೇಶಿಸಿತ್ತು.
ಕಾಂಗ್ರೆಸ್ ಅಭ್ಯರ್ಥಿ ಮೀರಾ ಕುಮಾರಿ ಅವರಿಗೆ ಇಬ್ಬರು ಶಾಸಕರ ಮತ ಮಿಸ್ ಆಯಿತು. ಜೆಡಿಎಸ್‌ನ ಕೆಲವರು ಅಡ್ಡ ಮತದಾನ ಮಾಡುತ್ತಾರೆ ಎಂದು ಬಿಜೆಪಿಯ ಸಿ.ಟಿ. ರವಿ ಹೇಳಿಕೆ ನೀಡಿದ್ದರು. ಆದರೆ, ಪಕ್ಷ ತೆಗೆದುಕೊಂಡ ತೀರ್ಮಾನದಂತೆ ಮೀರಾ ಕುಮಾರ್ ಅವರಿಗೆ ಪಕ್ಷದ ಎಲ್ಲ 33 ಶಾಸಕರು ಮತ ಚಲಾಯಿಸಿದ್ದಾರೆ’ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ 222 ಶಾಸಕರು ಮತ ಚಲಾಯಿಸಿದರು. 2014 ಶಾಸಕರು 1 ಗಂಟೆಗೆ ಮೊದಲು ಬಂದು ಮತದಾನ ಮಾಡಿದರು. ಸಂಸದರಿಗೆ ದೆಹಲಿಯ ಸಂಸತ್ ಭವನದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕಾಂಗ್ರೆಸ್ ಸಂಸದ ಪ್ರಕಾಶ್ ಹುಕ್ಕೇರಿ ವಿಶೇಷ ಅನುಮತಿ ಪಡೆದು ವಿಧಾನಸೌಧದಲ್ಲೇ ಮತದಾನ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನದ ವೇಳೆಗೆ ಶಾಸಕರ ಜತೆ ಬಂದು ಮತ ಚಲಾಯಿಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರೂ ಮಧ್ಯಾಹ್ನದ ಹೊತ್ತಿಗೆ ಮತಗಟ್ಟೆಗೆ ಬಂದು ಮತ ಹಾಕಿದರು.
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಕಾಂಗ್ರೆಸ್ ಶಾಸಕರಾದ ವೈ.ಎನ್. ರುದ್ರೇಶ ಗೌಡ, ಎಂ.ಎಚ್. ಅಂಬರೀಷ್ ಮತ್ತು ಮತ್ತು ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರು ವ್ಹೀಲ್‌ಚೇರ್‌ನಲ್ಲಿ ಬಂದು ಮತ ಚಲಾಯಿಸಿದರು.